ಮಡಿಕೇರಿ, ಜು. 25 : ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸೌಹಾರ್ದತೆ ಬೆಳೆಸುವದು ಪೊಲೀಸ್ ದೂರು ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಪೊಲೀಸ್ ದೂರು ಪ್ರಾಧಿಕಾರದ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎಸ್. ಪಚ್ಚಾಪುರೆ ಹೇಳಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ನ್ಯಾಯಾಲಯ ಆವರಣದಲ್ಲಿ ನಡೆದ ಪೊಲೀಸ್

(ಮೊದಲ ಪುಟದಿಂದ) ದೂರು ಪ್ರಾಧಿಕಾರ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ನೀಡಿದ್ದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ. ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ನೆಲಸು ವಂತಾಗಲು ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಸೌಹಾರ್ದತೆ ಹೊಂದಿ ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸರು ಶ್ರಮಿಸಬೇಕಿದೆ ಎಂದು ಪಚ್ಚಾಪುರೆ ಅವರು ಸಲಹೆ ಮಾಡಿದರು.

ನ್ಯಾಯಾಲಯದಲ್ಲಿ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪುಗಳು ಬರುತ್ತವೆ. ಸಾಕ್ಷ್ಯಾಧಾರ ಇಲ್ಲದೆ ಆರೋಪಿಗಳು ಬಿಡುಗಡೆ ಯಾಗುತ್ತಾರೆ. ಒಂದು ಕಡೆ ಆರೋಪಿಗಳಿಗೆ ಖುಷಿಯಾಗುತ್ತದೆ. ಮತ್ತೊಂದೆಡೆ ಆರೋಪಿ ಪರ ವಕಲತ್ತು ವಹಿಸಿದ್ದವರಿಗೂ ಸಂತಸವಾಗುತ್ತದೆ. ಆದರೆ ಆರೋಪಿ ಬಿಡುಗಡೆಯಾಗಿ ಬಂದು ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನು ಊಹಿಸಲು ಅಸಾಧ್ಯ ಎಂದು ಅವರು ಹೇಳಿದರು.

ಸಮಾಜದಲ್ಲಿ ಶೇ.90ರಷ್ಟು ಒಳ್ಳೆಯ ಜನರು ಇದ್ದಾರೆ. ಶೇ.10ರಷ್ಟು ಮಾತ್ರ ಕ್ರಿಮಿನಲ್ ಅಪರಾಧ ಉಳ್ಳವರು ಇದ್ದಾರೆ. ಸಮಾಜದಲ್ಲಿ ಯಾರೇ ಒಬ್ಬರು ತಪ್ಪು ಮಾಡಿದರೂ ಇಡೀ ಸಮಾಜಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕ್ರಿಮಿನಲ್ ಅಪರಾಧ ಉಳ್ಳವರಿಂದ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಯೋಚಿಸಬೇಕಿದೆ. ಅಂತಹ ಕಡೆಗಳಲ್ಲಿ ಭಯವಿಲ್ಲದೆ, ನಿರ್ಭಯ ಉಂಟಾಗಲಿದೆ. ಆರೋಪಿಗಳು ಬಿಡುಗಡೆಯಾಗಿ ಬಂದಲ್ಲಿ ಶಾಂತಿ, ನೆಮ್ಮದಿ ಅಸಾಧ್ಯ ಎಂದು ಪೊಲೀಸ್ ದೂರು ಪ್ರಾಧಿಕಾರದ ರಾಜ್ಯ ಅಧ್ಯಕ್ಷರು ವಿವರಿಸಿದರು.

ಪೊಲೀಸರನ್ನು ಸಹ ಆರು ತಿಂಗಳು, ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬಾರದು. ಕನಿಷ್ಟ ಎರಡು ವರ್ಷಗಳಾದರು ಒಂದೆಡೆ ಇದ್ದು ಕೆಲಸ ಮಾಡುವಂತಾಗಬೇಕು. ಇದರಿಂದ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ಅವರು ತಿಳಿಸಿದರು.

ಗಂಭೀರ ದುರ್ನಡತೆ ಬಗ್ಗೆ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬೇಕು. ತನಿಖೆ ಮಾಡುವದು ನಮ್ಮ ಜವಾಬ್ದಾರಿಯಾಗಿದೆ. ಗಂಭೀರ ದುರ್ನಡತೆ ಮತ್ತು ದುರ್ನಡತೆಯನ್ನು ತನಿಖೆ ಮಾಡುವ ಅಧಿಕಾರ ಜಿಲ್ಲಾ ದೂರು ಪ್ರಾಧಿಕಾರಕ್ಕೆ ಇದೆ ಎಂದು ಅವರು ಹೇಳಿದರು.

ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬ್ಳೆ ಅವರು ಮಾತನಾಡಿ, ನಾಗರಿಕರು ಮತ್ತು ಪೊಲೀಸರ ನಡುವೆ ಸಮನ್ವಯತೆ, ಸೌಹಾರ್ದತೆ ಉಂಟುಮಾಡಿ ಸಮಾಜದಲ್ಲಿ ಶಾಂತಿ ನೆಲಸುವಂತಾಗಲು ಪೊಲೀಸ್ ದೂರು ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ. ದುಷ್ಟರಿಗೆ ಶಿಕ್ಷೆ ಕೊಡಿಸುವದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಮಾತನಾಡಿ, ಕಾನೂನನ್ನು ಗೌರವಿಸುವದರ ಜೊತೆಗೆ, ಸಂವಿಧಾನದ ಬಗ್ಗೆ ತಿಳಿದುಕೊಳ್ಳುವದು ಅಗತ್ಯ. ರಾಜಿ ಸೂತ್ರದ ಮೂಲಕ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ದೂರು ಅರ್ಜಿಗಳನ್ನು ದೂರು ಪೆಟ್ಟಿಗೆಯಲ್ಲಿ ಇಡಬಹುದಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ ಪೊಲೀಸ್ ಠಾಣೆಗಳಲ್ಲಿ ದೂರುಗಳು ಬಂದ ತಕ್ಷಣ ಸ್ಪಂದಿಸಲಾಗುವದು ಎಂದರು.

ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ 12 ಪ್ರಕರಣಗಳು ವಿಲೇವಾರಿಗೆ ಬಾಕಿ ಇದ್ದು, ಇದನ್ನು ಇತ್ಯರ್ಥಪಡಿಸಬೇಕಿದೆ. ಭೂಮಿಗೆ ಸಂಬಂಧಿಸಿದ ದೂರುಗಳು ಹೆಚ್ಚಿವೆ ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್ ಸೆಲ್‍ಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವದು.

ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್, ನ್ಯಾಯಾಧೀಶರು, ನ್ಯಾಯವಾದಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇತರರು ಇದ್ದರು.

ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಡಿ.ಪವನೇಶ್ ಸ್ವಾಗತಿಸಿದರು. ತಾಲೂಕು ಪ್ರಧಾನ ಜೆಎಂಎಫ್‍ಸಿ ನ್ಯಾಯಾಧೀಶರಾದ ಶಿವಾನಂದ ಹಂಚಿ ಅವರು ನಿರೂಪಿಸಿದರು. ವಕೀಲರಾದ ದಯಾ ಬಂಗೇರ ಪ್ರಾರ್ಥಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೆಲ್ವಕುಮಾರ್ ವಂದಿಸಿದರು.