ಮಡಿಕೇರಿ, ಜು. 25: ಮಡಿಕೇರಿ ನಗರದ ಕಾನ್ವೆಂಟ್ ಜಂಕ್ಷನ್ ಹಾಗೂ ಸುತ್ತಮುತ್ತಲ ರಸ್ತೆಗಳು ತೀರಾ ಹದಗೆಟ್ಟು, ಸಂಚಾರಕ್ಕೆ ತೀರಾ ಅಡಚಣೆಯಾಗಿದ್ದು, ಕೂಡಲೇ ರಸ್ತೆ ದುರಸ್ತಿಪಡಿಸುವಂತೆ ಆಗ್ರಹಿಸಿ ಕಾನ್ವೆಂಟ್ ಜಂಕ್ಷನ್‍ನ ಶ್ರೀ ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಯಿತು.ಕಾನ್ವೆಂಟ್ ಜಂಕ್ಷನ್‍ನಲ್ಲಿ ಕುರ್ಚಿ, ಮೇಜನ್ನಿಟ್ಟು ಅದರಲ್ಲಿ ಮಿಠಾಯಿ, ಬೇಕರಿ ತಿನಿಸುಗಳನ್ನಿಟ್ಟು ರಸ್ತೆ ಮಧ್ಯೆ ಅಂಗಡಿಯನ್ನಿಟ್ಟು, ರಸ್ತೆ ತಡೆ ಮಾಡಿ ವಿನೂತನವಾಗಿ ಪ್ರತಿಭಟಿಸಿದರು. ರಸ್ತೆಯ ದುರವಸ್ಥೆ ಬಗ್ಗೆ ಕಿಡಿಕಾರಿದ ಪ್ರತಿಭಟನಾಕಾರರು, ನಗರ ಸಭಾಧ್ಯಕ್ಷರು, ಆಯುಕ್ತರು ಹಾಗೂ ವಿಭಾಗದ ಸದಸ್ಯೆ ಲೀಲಾ ಶೇಷಮ್ಮ ವಿರುದ್ಧ ಘೋಷಣೆಗಳನ್ನು ಕೂಗಿದರು.

ದುರಸ್ತಿ ಭರವಸೆ

ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿ ನಗರಸಭಾ

(ಮೊದಲ ಪುಟದಿಂದ) ಆಯುಕ್ತೆ ಶುಭ ಅವರಲ್ಲಿ ಪ್ರತಿಭಟನಾಕಾರರು ರಸ್ತೆಯ ಅವ್ಯವಸ್ಥೆ ಬಗ್ಗೆ ಹೇಳಿಕೊಂಡರು. ರಸ್ತೆಯನ್ನೊಮ್ಮೆ ಪರಿಶೀಲಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆಯುಕ್ತರು ಹದಗೆಟ್ಟ ರಸ್ತೆಯನ್ನು ಪರಿಶೀಲನೆ ಮಾಡಿದರು. ನಂತರ ಮಾತನಾಡಿ ಅವರು, ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ.

ಒಳಚರಂಡಿಗೆ ಕೊರೆಯಲಾದ ಎರಡು ಅಡಿಗಳಷ್ಟು ರಸ್ತೆಯನ್ನು ಮಾತ್ರ ಅವರು ದುರಸ್ತಿಪಡಿಸುತ್ತಾರೆ. ಆದರೆ ಇದರಿಂದಾಗಿ ಇಡೀ ರಸ್ತೆಯೇ ಹಾಳಾಗುತ್ತಿದೆ.

ಒಳಚರಂಡಿಯವರು ಮಾಡುವ ತಪ್ಪಿನಿಂದಾಗಿ ನಗರಸಭೆಯಿಂದ ಜನರಿಂದ ಸಂಗ್ರಹವಾದ ತೆರಿಗೆ ಹಣವನ್ನು ವೆಚ್ಚಮಾಡಿ ದುರಸ್ತಿ ಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನಗರ ವ್ಯಾಪ್ತಿಯಲ್ಲಿರುವ ಗುಂಡಿ ಬಿದ್ದ ರಸ್ತೆಗಳನ್ನು ಮುಂದಿನ 15 ದಿನಗಳೊಳಗೆ ಮಳೆ ನೋಡಿಕೊಂಡು ದುರಸ್ತಿ ಪಡಿಸಲಾಗುವದು. ಕಾನ್ವೆಂಟ್ ಜಂಕ್ಷನ್ ರಸ್ತೆಯನ್ನು ಇಂದೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುವದೆಂದು ಭರವಸೆ ನೀಡಿದರು. ಇದೇ ಸಂದರ್ಭ ಮನವಿಯೊಂದನ್ನು ಪ್ರತಿಭಟನಾಕಾರರು ಆಯುಕ್ತರಿಗೆ ಸಲ್ಲಿಸಿದರು.