ಕುಶಾಲನಗರ, ಜು 25: ಕುಶಾಲನಗರ ಪಟ್ಟಣದಲ್ಲಿ ಅಕ್ರಮವಾಗಿ ಪದವಿಪೂರ್ವ ಕಾಲೇಜು ತೆರೆದು ಅನಧಿಕೃತವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.ಪಟ್ಟಣದ ಸರಕಾರಿ ಆಸ್ಪತ್ರೆ ಸಮೀಪದ ಅನುಗ್ರಹ ಎಜ್ಯುಕೇಷನ್ ಟ್ರಸ್ಟ್ ಸಂಸ್ಥೆ ಮೂಲಕ 2017-18ನೇ ಸಾಲಿಗೆ ಹೊಸ ಖಾಸಗಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಲು ಅನುಮತಿ ಕೋರಿದ್ದು ಈ ಪ್ರಸ್ತಾವನೆಯನ್ನು ಸರಕಾರ ತಿರಸ್ಕರಿಸಿದ್ದರೂ 100 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಪ್ರವೇಶ ಕಲ್ಪಿಸಿರುವದಾಗಿ ಉಪನಿರ್ದೇಶಕ ಟಿ. ಸ್ವಾಮಿ ಮಾಹಿತಿ ನೀಡಿದ್ದಾರೆ.

ಕಾಲೇಜು ಮಂಜೂರು ಮಾಡಲು ಆಕ್ಷೇಪಣೆ ಇರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿಗಳು ತಿರಸ್ಕರಿಸಿದ್ದರೂ ಕಟ್ಟಡವೊಂದರಲ್ಲಿ ತರಗತಿಯನ್ನು ಕಳೆದ 2 ತಿಂಗಳಿನಿಂದ ಪ್ರಾರಂಭಿಸಿದ್ದು, ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹಲವು ನೋಟಿಸ್ ನೀಡಲಾಗಿದೆ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರು ವದು ಅಪರಾಧವಾಗಿದ್ದು ಈ ಸಂಬಂಧ ಸೋಮವಾರ ಕಾಲೇಜಿನ ಕಟ್ಟಡಕ್ಕೆ ಭೇಟಿ ನೀಡಿದ ಟಿ. ಸ್ವಾಮಿ ಮತ್ತು ಸಿಬ್ಬಂದಿಗಳು ಕೂಡಲೆ ಕಾಲೇಜನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ.

ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಪಂಡರಿನಾಥ ನಾಯ್ಡು ಗೈರು ಹಾಜರಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಗಳು ಬಂದು ಸಮಜಾಯಿಷಿಕೆ ನೀಡಲು ಪ್ರಯತ್ನಿಸಿದರು. ಸರಕಾರಿ ನಿಯಮವನ್ನು ಪಾಲಿಸದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸದಸ್ಯರನ್ನು ಉಪನಿರ್ದೇಶಕರು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಉಪ ನಿರ್ದೇಶಕ ಟಿ. ಸ್ವಾಮಿ, ಸರಕಾರದಿಂದ ಪ್ರಸ್ತಾವನೆ ತಿರಸ್ಕಾರಗೊಂಡಿದ್ದು ಈ ಬಗ್ಗೆ ಆಡಳಿತ ಮಂಡಳಿಗೆ ಮಾಹಿತಿ ಒದಗಿಸಲಾಗಿದೆ. ಆದರೂ 2017-18ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡಿರುವದು ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ಮುಂದಿನ ಆಗುಹೋಗುಗಳಿಗೆ ಆಡಳಿತ ಮಂಡಳಿ ಪೂರ್ಣ ಹೊಣೆಗಾರರಾಗಿರು ತ್ತದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಇಲಾಖೆಯ ಮೇಲಾಧಿಕಾರಿ ಗಳಿಗೆ ಈಗಾಗಲೆ ಮಾಹಿತಿ ರವಾನಿ ಸಿದ್ದು ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.