ಮಡಿಕೇರಿ, ಜು. 25: ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಜಾಲವೊಂದು ಕಾರ್ಯಾ ಚರಿಸುತ್ತಿರುವ ಆರೋಪವಿದ್ದು, ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಸೂರ್ಲಬ್ಬಿ ಶ್ರೀ ಕಾವೇರಿ ಸ್ವಸಹಾಯ ಮಹಿಳಾ ಸಂಘ ಆಗ್ರಹಿಸಿದೆ.ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಭವ ಎಜುಕೇಶನ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಎಂಬ ಬೆಂಗಳೂರಿನ ‘ಲೆಟರ್‍ಹೆಡ್’ ಸಂಘಟನೆ ಹೆಸರಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಭಾರೀ ಅವ್ಯವಹಾರದಲ್ಲಿ ತೊಡಗಿರುವದಾಗಿ ಮಹಿಳಾ ಸಂಘ ಬಹಿರಂಗ ಆರೋಪ ಮಾಡಿದೆ.

ಮಹಿಳಾ ಸ್ವಸಹಾಯ ಸಂಘದ ಪ್ರಕಾರ 2008ರಲ್ಲಿ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೆಂಗಳೂರಿನ ‘ಲೆಟರ್‍ಹೆಡ್' ಸಂಸ್ಥೆಗೆ ನಿರ್ವಹಣೆಗಾಗಿ ವಹಿಸಿದ್ದರೂ, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಿಂದ ಪ್ರತಿ ತಿಂಗಳು ರೂ. 1,22,300 ಮೊತ್ತದಷ್ಟು ಅಲ್ಲಿನ ಸಿಬ್ಬಂದಿಗಳಿಗೆ ವೇತನ ಪಾವತಿಸ ಲಾಗುತ್ತಿದೆ!

ಅಲ್ಲದೆ ಪ್ರತಿ ತಿಂಗಳು ಈ ಹಣವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಶಿಫಾರಸು ಮೇರೆಗೆ, ಜಿಲ್ಲಾ ಖಜಾನೆಯಿಂದ ನೀಡುವಾಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳ ಗಮನಕ್ಕೂ ತರಲಾಗುತ್ತಿದೆ.

ಈ ರೀತಿಯಾಗಿ ಪ್ರತಿ ಹಂತದಲ್ಲಿ ನಿಯಮಾನುಸಾರ ಸೂರ್ಲಬ್ಬಿ ಆರೋಗ್ಯ ಕೇಂದ್ರ ನಿರ್ವಹಣೆಯ ಬಗ್ಗೆ ನಿಖರ ಮಾಹಿತಿ ರವಾನೆಯಾಗುತ್ತಿ ರುವದು ಕೇವಲ ದಾಖಲೆಗಳಲ್ಲಿ ಮಾತ್ರ ಎಂಬ ಆರೋಪ ಮಹಿಳಾ ಸಂಘದ್ದಾಗಿದೆ.

ಉದಾಹರಣೆಗೆ ಕಳೆದ ಫೆಬ್ರವರಿ ಮಾಹೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆಗೊಳಿಸಿರುವ ವೇತನ ಮೊತ್ತ ರೂ. 1,22,300 ಹಣವನ್ನು ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ 7 ಮಂದಿ ಉದ್ಯೋಗಿಗಳಿಗೆ ಮಾಸಿಕವಾಗಿ ನೀಡಲಾಗಿದೆ.

ವೇತನ ಯಾರಿಗೆ?

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೀಡಲಾಗಿರುವ ವೇತನ ಪಟ್ಟಿಯಲ್ಲಿ ಸೂರ್ಲಬ್ಬಿ ಆರೋಗ್ಯ ಕೇಂದ್ರದ

ಔಷಧಿ ವಿತರಕ ರಮೇಶ ನಾಯ್ಡು ಎಂಬವರಿಗೆ ರೂ.20625 ಮಾಸಿಕ ವೇತನ ನಿಡಲಾಗಿದೆ.

ಅಲ್ಲದೆ ಕಿರಿಯ ಆರೋಗ್ಯ ಸಹಾಯಕ ಪ್ರದೀಪ್ ಎಂಬವರಿಗೆ ರೂ. 18250, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಆಶಾರಾಣಿ, ಗೀತಾ ಎಂಬಿಬ್ಬರಿಗೆ ತಲಾ ರೂ. 17700 ಹಾಗೂ ಶಶಿಕಲಾ ಎಂವರಿಗೆ ರೂ. 18250 ಮತ್ತು ಶೋಭಾ ಎಂಬವರಿಗೆ

ರೂ. 17700,

(ಮೊದಲ ಪುಟದಿಂದ) ನಾಲ್ಕನೇ ದರ್ಜೆ ಸಿಬ್ಬಂದಿ ಜೆ. ಪ್ರೀತು ಎಂಬವರಿಗೆ ರೂ. 12075 ಮೊತ್ತ ಪಾವತಿಯಾಗಿದೆ?

ಹೀಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭ್ರಷ್ಟಾಚಾರಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿನ ಉದ್ಭವ ಸಂಸ್ಥೆಯು ಫೆಬ್ರವರಿ 6.2.2016-17 (ಇಸವಿ ತಿದ್ದಲಾಗಿದೆ) ರಂದು ಬರೆದಿರುವ ಪತ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿಯ ರವಾನೆ ಗುಮಾಸ್ತರ ಸಹಿಯೊಂದಿಗೆ (6.2.2012ರಂದು) ಸೂರ್ಲಬ್ಬಿ ಆರೋಗ್ಯ ಕೇಂದ್ರಕ್ಕೆ ಹೊಸದಾಗಿ ನೇಮಿಸಿರುವ ಖಾಲಿ ಹುದ್ದೆಗಳ ಪಟ್ಟಿ ಅಚ್ಚರಿ ಮೂಡಿಸುತ್ತದೆ.

ಆ ಪಟ್ಟಿ ಪ್ರಕಾರ 1.12.2016ರಂದು ಔಷಧಿ ವಿತರಕರಾಗಿ ರಮೇಶ ನಾಯ್ಡು ಎಂ, ಪ್ರದೀಪ್, ಗೀತಾ, ಯಶೋದ, ಮಂಜುಳ ಟಿ.ಆರ್. ಪೂಪತಿ ನೇಮಕಗೊಂಡಿರುವದಾಗಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ದಾಖಲೆಗಳ ಪ್ರಕಾರ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಂಗಳೂರು ಸಂಸ್ಥೆ ಸಿಬ್ಬಂದಿಗಳಿಗೆ ವೇತನ ನೀಡದೆ ವಂಚಿಸಿರುವ ಪರಿಣಾಮ ಯಾರೊಬ್ಬರು ಇಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮಾತ್ರವಲ್ಲದೆ ಜಿಲ್ಲಾ ಪಂಚಾಯತ್ ಅಧೀನವಿರುವ ಸರಕಾರದ ಪ್ರಾಥಮಿಕ ಆರೋಗ್ಯ ಕೇಂದ್ರವೆಂಬ ಆಶಯದಿಂದ ಕೆಲಸಕ್ಕೆ ಸೇರಿ ಮೂರ್ನಾಲ್ಕು ತಿಂಗಳು ಸಂಬಳವಿಲ್ಲದೆ ಮೋಸಗೊಂಡು ಅಮಾಯಕರು ಬರಿಗೈಯಲ್ಲಿ ಕೆಲಸ ಬಿಟ್ಟು ಹೋಗುತ್ತಿದ್ದಾರೆ.

ಗೊತ್ತಿದ್ದೂ ಗೊತ್ತಿಲ್ಲದಂತೆ: ಮೇಲಿನ ವಿಷಯಗಳನ್ನು ಚೆನ್ನಾಗಿಯೇ ಬಲ್ಲವರಾದ ಆರೋಗ್ಯ ಇಲಾಖೆ ಮಂದಿ ಮುಗ್ಧ ಉದ್ಯೋಗಿಗಳಿಗೆ ವಂಚಿಸಿ, ನೀಡಬೇಕಾದ ವೇತನವನ್ನು ನೀಡದೆ ಭ್ರಷ್ಟಾಚಾರದಲ್ಲಿ ನಿರಂತರ ತೊಡಗಿರುವದು ಈ ಮೂಲಕ ಬಹಿರಂಗಗೊಂಡಿದೆ.

ಬಹಿರಂಗಗೊಳಿಸಿದರು: ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಹಾರ ಕುರಿತು ತಾ. 21ರಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಕಾವೇರಿ ಮಹಿಳಾ ಸ್ವಸಹಾಯ ಸಂಘದವರು ಅನೇಕ ಸಂಗತಿಗಳನ್ನು ಬಹಿರಂಗಗೊಳಿಸಿದರು.

ಅಲ್ಲದೆ, ಗ್ರಾಮಸ್ಥರಿಗೆ ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆಗಳಿಗೂ ಉಪಕಾರವಿಲ್ಲದ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿಯುವದಾಗಿ ಘೋಷಿಸಿದರು. ಈ ವೇಳೆ ಗ್ರಾಮದ ಮಹಿಳೆಯರ ಅಹವಾಲು ಆಲಿಸಿದ ಲೋಕೇಶ್ವರಿ ಗೋಪಾಲ್, ಈ ಬಗ್ಗೆ ಜಿ.ಪಂ. ಅಧ್ಯಕ್ಷರ ಸಹಿತ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರುಗಳ ಗಮನ ಸೆಳೆದು, ಆರೋಗ್ಯ ಇಲಾಖೆ ಅವ್ಯವಹಾರದ ಬಗ್ಗೆ ತನಿಖೆಗೆ ಕೋರುವ ಮೂಲಕ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪದ ಭರವಸೆ ನೀಡಿದರು.

ಆದಷ್ಟು ಬೇಗನೆ ಸಮಸ್ಯೆ ಇತ್ಯರ್ಥಗೊಂಡು ಗ್ರಾಮೀಣ ಜನತೆಗೆ ಔಷಧೋಪಚಾರ ಲಭಿಸದಿದ್ದರೆ ನಿಶ್ಚಿತವಾಗಿ ಸೂರ್ಲಬ್ಬಿ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿಯುವದಾಗಿ ಮಹಿಳಾ ಸಂಘದವರು ಪುನರುಚ್ಚರಿಸಿದರು.

ಸಿಬ್ಬಂದಿ ಅಳಲು: ಆರು ತಿಂಗಳ ಹಿಂದೆ ಇಲ್ಲಿ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇರ್ಪಡೆಗೊಂಡಿರುವ ಪೂಪತಿ, ಆಯಾ ಪ್ರೀತು ಹಾಗೂ ಈಗಷ್ಟೇ ಒಂದು ತಿಂಗಳಿನಿಂದ ನೇಮಕಗೊಂಡಿರುವ ಭವ್ಯಶ್ರೀ ಜಿ.ಪಂ. ಉಪಾಧ್ಯಕ್ಷರೊಂದಿಗೆ ವೇತನ ಕೊಡಿಸುವಂತೆ ಅಳಲು ತೋಡಿಕೊಂಡರು.

ತಮಗೆ ದಾಖಲಾತಿಗಳಲ್ಲಿ ವೇತನ ರೂ. 18 ಸಾವಿರ ನಿಡಿ ವಂಚಿಸಿರುವದಾಗಿಯೂ, ಕಳೆದ ಐದು ತಿಂಗಳಿನಿಂದ ಆ ಮೊತ್ತವನ್ನು ಕೂಡ ನೀಡದೆ ತೊಂದರೆಗೆ ಸಿಲುಕಿರುವದಾಗಿ ನೋವು ಹೊರಗೆಡವಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಲೋಕೇಶ್ವರಿ ಗೋಪಾಲ್ ನುಡಿದರು.

ಸಿಬ್ಬಂದಿಗೆ ಬೆದರಿಕೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂದಿ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದ ಇತ್ತೀಚಿನ ‘ಶಕ್ತಿ' ವರದಿ ಬೆನ್ನಲ್ಲೇ ಸೂರ್ಲಬ್ಬಿಯಲ್ಲಿನ ಸಿಬ್ಬಂದಿಗೆ ಬೆದರಿಕೆ ಹಾಕಿ, ಯಾವದೇ ರಹಸ್ಯ ಹೊರಹಾಕದಂತೆಯೂ, ವೇತನವನ್ನು ತಾವು ಕೊಡಿಸುವದಾಗಿಯೂ ಹೇಳಿದ್ದಾಗಿ ನೊಂದ ಸಿಬ್ಬಂದಿ ಬಹಿರಂಗಗೊಳಿಸಿದರು.

ಈ ಎಲ್ಲಾ ವಿಷಯವಾಗಿ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ಅನ್ಯಾಯ ಸರಿಪಡಿಸಲು ಮತ್ತು ಸಿಬ್ಬಂದಿಗೆ ನ್ಯಾಯ ದೊರಕಿಸಿಕೊಡುವದಾಗಿ ಜಿ.ಪಂ. ಉಪಾಧ್ಯಕ್ಷರು ಆಶ್ವಾಸನೆ ನೀಡಿದರು.

ಉಪಾಧ್ಯಕ್ಷೆ ಆಕ್ರೋಶ: ಇತ್ತೀಚೆಗೆ ‘ಶಕ್ತಿ’ಯಲ್ಲಿ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕುರಿತು ಸುದ್ಧಿ ಬಿತ್ತರಗೊಂಡ ಬೆನ್ನಲ್ಲೇ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಆರೋಗ್ಯ ಅಧಿಕಾರಿಯಲ್ಲಿ ಮಾಹಿತಿ ಬಯಸಿದ್ದಾಗಿ ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೊಡಗಿಗೆ ವೈದ್ಯರು ಬರುತ್ತಿಲ್ಲ! ನಾವೇನು ಮಾಡುವದು? ಎಂದು ಹಾರಿಕೆಯ ಉತ್ತರ ನೀಡಿದ್ದಾಗಿ ಲೋಕೇಶ್ವರಿ ಆಕ್ರೋಶ ವ್ಯಕ್ತಪಡಿಸಿದರು.

ಮಾತ್ರವಲ್ಲದೆ ಆರೋಗ್ಯ ಕೇಂದ್ರದ ಕುರಿತು ‘ಶಕ್ತಿ’ ಬೆಳಕು ಚೆಲ್ಲಿದ ಬಳಿಕವೂ ಯಾರೊಬ್ಬರೂ ಇತ್ತ ಸುಳಿಯದೆ, ಮತ್ತೆ ಸಿಬ್ಬಂದಿಗಳಿಗೆ ಬೆದರಿಸಿ ಅವ್ಯವಹಾರ ಹೊರಹಾಕದಂತೆ ತಾಕೀತು ಮಾಡಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಕೋರಿ ಸರಕಾರದ ಗಮನ ಸೆಳೆಯುವದಾಗಿ ‘ಶಕ್ತಿ'ಯೊಂದಿಗೆ ಭರವಸೆ ನೀಡಿದರು.

ಎಲ್ಲದಕ್ಕೂ ಹಣ: ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಶಿಶುಗಳಿಗೆ ಆರೋಗ್ಯ ಉಪಚಾರ ನೀಡುವಂತೆ ಆಗಿಂದಾಗ್ಗೆ ಕಡ್ಡಾಯ ಆರೋಗ್ಯ ಉಪಚಾರ ನೀಡುವಂತೆ ಸರಕಾರ ಕಟ್ಟಪ್ಪಣೆ ನೀಡಿದ್ದರೂ, ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದ ಆರೋಗ್ಯ ಸಿಬ್ಬಂದಿ ಎಲ್ಲದಕ್ಕೂ ಹಣ ಪಡೆಯುತ್ತಿದ್ದಾರೆಂದು ಈ ವೇಳೆ ಗ್ರಾಮೀಣ ಮಹಿಳೆಯರು ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ವೈದ್ಯರಿಲ್ಲದೆ ಗ್ರಾಮೀಣ ಜನತೆ ಅನೇಕ ಭಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಇತ್ತ ತಿರುಗಿಯೂ ನೋಡದೆ ಬೆಂಗಳೂರು ಏಜೆನ್ಸಿ ಮಂದಿ ಹೆಸರಿನಲ್ಲಿ ಕುಳಿತಲ್ಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.