ಗೋಣಿಕೊಪ್ಪಲು, ಜು. 25: ಪಟ್ಟಣದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಸಂಘಟಾತ್ಮಕ ಹೋರಾಟ ನಡೆಸುವ ನಿರ್ಧಾರವನ್ನು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್‍ನ ವಾರ್ಷಿಕ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.ಕಕೂನ್ ಸಭಾಂಗಣದಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ವರ್ತಕರು ರಸ್ತೆ ಬದಿ ಹಾಗೂ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಅನಧಿಕೃತ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯದಂತೆ ನಿರ್ಧರಿಸಲಾಯಿತು.

ಪಟ್ಟಣದಲ್ಲಿ ಅನಧಿಕೃತವಾಗಿ ಬಟ್ಟೆ, ತರಕಾರಿ, ಮೆಣಸು, ಚಪ್ಪಲಿ ಇಂತಹ ವ್ಯಾಪಾರಗಳು ನಡೆಯುತ್ತಿವೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತಿದೆ. ಮಳಿಗೆಗಳಿಗೆ ಬಾಡಿಗೆ ಪಾವತಿಸಿ ವ್ಯಾಪಾರ ಮಾಡುವವರು ಸಮಸ್ಯೆಗೆ ಸಿಲುಕಿದ್ದಾರೆ. ಸರ್ಕಾರಕ್ಕೆ ಇಂತಹ ವ್ಯಾಪಾರಿಗಳಿಂದ ಯಾವದೇ ತೆರಿಗೆ ಕೂಡ ಕ್ರೋಢೀಕರಣವಾಗುತ್ತಿಲ್ಲ ಎಂದು ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಆರೋಪಿಸಿದರು.

ಇದರಂತೆ ಇಂತಹವರ ವಿರುದ್ಧ ಸಂಘಟತ್ಮಾಕವಾಗಿ ಹೋರಾಟ ನಡೆಸುವ ಮೂಲಕ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ತೆರಿಗೆ ವಂಚನೆಯಾಗದಂತೆ ನಿಯಂತ್ರಣ ತರುವದು, ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಕ್ರಮಕ್ಕೆ ಒತ್ತಾಯಿಸಲು ನಿರ್ಧರಿಸಲಾಯಿತು.

ಪೊಲೀಸ್ ಇಲಾಖೆ ಚೇಂಬರ್ ಆಫ್ ಕಾಮರ್ಸ್‍ನ ಮನವಿಗೆ ಸ್ಪಂದಿಸದೆ ಇರುವ ಬಗ್ಗೆ ಅಕ್ಷೇಪ ವ್ಯಕ್ತವಾಯಿತು. ಪಟ್ಟಣದಲ್ಲಿ ವಾಹನ ದಟ್ಟಣೆಗೆ ಪಾರ್ಕಿಂಗ್ ಅವ್ಯವಸ್ಥೆ ಕಾರಣ, ಈ ಬಗ್ಗೆ ಪೊಲಿಸರ ಗಮನಕ್ಕೆ ತಂದಿದ್ದರೂ ಯಾವದೇ ಸ್ಪಂದನ ದೊರಕುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿ ಗಳ ಗಮನ ಸೆಳೆಯಲು ಸಭೆ ಸೂಚಿಸಿತು.

ಚೇಂಬರ್‍ನ ಕಟ್ಟಡದಲ್ಲಿನ ಮೇಲಂತಸ್ತನ್ನು ಕಟ್ಟುವ ನಿರ್ಧಾರ ತೆಗೆದುಕೊಳ್ಳಲಾಯಿತು. ಗೋಣಿಕೊಪ್ಪ ಸುತ್ತಮುತ್ತಲಿನ ಗ್ರಾಮಗಳ ವರ್ತಕರು ಗೋಣಿಕೊಪ್ಪ ಚೇಂಬರ್‍ನಲ್ಲಿ ಸದಸ್ಯತ್ವಕ್ಕೆ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಚೇಂಬರ್ ಸಲಹೆ ಪಡೆದು ಮುಂದುವರಿಯಲು ನಿರ್ಧರಿಸಲಾಯಿತು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೇಶವ ಕಾಮತ್ ಮಾತನಾಡಿ, ಜಿಲ್ಲೆಯಲ್ಲಿರುವ 30 ಸ್ಥಾನೀಯ ಸಮಿತಿಗಳಲ್ಲಿ ಗೋಣಿಕೊಪ್ಪ ಸ್ಥಾನೀಯ ಸಮಿತಿ ಜಿಲ್ಲೆಗೆ ಮಾದರಿ ಯಾಗಿದೆ. ಸಮಿತಿಯ ಕಾರ್ಯವೈಖರಿ ಪ್ರಶಂಸನೀಯ ಎಂದರು.

ಪುನರಾಯ್ಕೆ : ಮುಂದಿನ 3 ವರ್ಷಗಳಿಗೆ ಅಧ್ಯಕ್ಷ ಸುನಿಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ಅಡಳಿತ ಮಂಡಳಿ ಯನ್ನು ಪುನರಾಯ್ಕೆ ಮಾಡಲಾಯಿತು.

ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಟಿ.ಪಿ. ಕಾಶಿ ವಾರ್ಷಿಕ ವರದಿ ವಾಚಿಸಿದರು. ಖಜಾಂಜಿ ಮನೋಹರ್ ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಪೊನ್ನಿಮಾಡ ಸುರೇಶ್, ಪ್ರಭಾಕರ್ ನೆಲ್ಲಿತ್ತಾಯ, ಎಫ್‍ಕೆಸಿಸಿ ನಿರ್ದೇಶಕ ಗಿರೀಶ್ ಗಣಪತಿ, ನಿರ್ದೇಶಕ ಅಜಿತ್ ಅಯ್ಯಪ್ಪ ಉಪಸ್ಥಿತರಿದ್ದರು.