ಮಡಿಕೇರಿ, ಜು. 25: ಪುಷ್ಯ ಮಳೆಯ ಪ್ರಾರಂಭಿಕ ರಭಸ ನಿಧಾನವಾಗಿ ಇಳಿಮುಖಗೊಳುತ್ತಿದ್ದು, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. ಆದರೆ ಮಡಿಕೇರಿ ನಗರದಲ್ಲಿ ಶೀತ ಹವೆ ಮುಂದುವರೆದಿದೆ. ಈ ನಡುವೆ ಹಾರಂಗಿಯಲ್ಲಿ ಮಾತ್ರ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಕೆಆರ್‍ಎಸ್‍ಗೆ ಸೇರುವ ನದಿಗೆ ನೀರು ಬಿಡುಗಡೆಯ ಪ್ರಮಾಣವೂ ಏರಿಕೆಗೊಂಡಿದೆ.

(ಮೊದಲ ಪುಟದಿಂದ) ಇಂದು ಹಾರಂಗಿ ಜಲಾಶಯದ ನೀರಿನ ಮಟ್ಟ 2858.16 ಅಡಿಗಳಿಗೆ ಏರಿಕೆಗೊಂಡಿದೆ. ಗರಿಷ್ಠ ಮಟ್ಟ 2859 ಅಡಿ ಮುಟ್ಟದಂತೆ ಮುನ್ನೆಚ್ಚರಿಕೆ ವಹಿಸಿ ಕ್ರಸ್ಟ್‍ಗೇಟ್ ಮೂಲಕ ಮಾತ್ರವಲ್ಲದೆ ಜಲಾಶಯದಿಂದಲೂ ನೀರನ್ನು ಬಿಡುಗಡೆ ಮಾಡಲಾಗಿದೆ. ಭಾನುವಾರದಿಂದ ಇದುವರೆಗೆ ಮೂರು ದಿನಗಳ ಕಾಲ ನೀರು ಬಿಡುಗಡೆ ಮಾಡಿದ್ದರೂ ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆಗೊಂಡಿರುವದು ಆಶಾದಾಯಕ ಬೆಳವಣಿಗೆ. ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ಇಂದು ಹಾರಂಗಿ ನದಿಗೆ 1200 ಕ್ಯೂಸೆಕ್ ಹಾರಂಗಿ ಜಲಾಶಯದಿಂದ ನೇರವಾಗಿ ನದಿಗೆ 2000 ಕ್ಯೂಸೆಕ್ ಹಾಗೂ ಖಾಸಗಿ ವಿದ್ಯುತ್ ಘಟಕದ ಮೂಲಕ 800 ಕ್ಯೂಸೆಕ್ ಸೇರಿದಂತೆ ಒಟ್ಟು 4000 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ 50 ಕ್ಯೂಸೆಕ್ ನೀರನ್ನು ಕಾಲುವೆ ಮೂಲಕ ಬಿಡಲಾಗಿದೆ. ಹಾರಂಗಿ ವಿಭಾಗದಲ್ಲಿ ಖಾಸಗಿ ವಿದ್ಯುತ್ ಘಟಕವೂ ಕೂಡ ಇಂದು ಮರು ಚಾಲನೆಗೊಂಡಿದ್ದು, 3.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಾರಂಭಗೊಂಡಿದೆ.

ಜಿಲ್ಲೆಯ ಸರಾಸರಿ ಏರಿಕೆ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು ಸರಾಸರಿ ಮಳೆಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಏರಿಕೆಗೊಂಡಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 46.55 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 44.56 ಇಂಚು ಮಳೆಯಾಗಿತ್ತು. ಆದರೆ ತಲಕಾವೇರಿ ಜಲಾನಯನ ಪ್ರದೇಶ ಅಸ್ತಿತ್ವದಲ್ಲಿರುವ ಮಡಿಕೇರಿ ತಾಲೂಕಿನಲ್ಲಿ ಮಾತ್ರ ಮಳೆಯ ಪ್ರಮಾಣ ಇದುವರೆಗಿನ ದಾಖಲೆಗಳ ಅನ್ವಯ ಕಳೆದ ಸಾಲಿಗಿಂತ ಕಡಿಮೆಯಾಗಿದೆ. ಜನವರಿಯಿಂದ ಇಲ್ಲಿವರೆಗೆ ಈ ವರ್ಷ 63.44 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಗೆ 66.57 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಕಳೆದ ವರ್ಷಕ್ಕಿಂತ ಅಧಿಕ ಮಳೆಯಾಗಿದೆ. ಈ ವರ್ಷ 40.19 ಇಂಚು ಮಳೆಯಾಗಿದ್ದರೆ ಕಳೆದ ಅವಧಿಯಲ್ಲಿ 33.06 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿಯೂ ಈ ವರ್ಷ ಅಧಿಕ ಮಳೆಯಾಗಿದೆ. ಇದುವರೆಗೆ 36.03 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ 34.05 ಇಂಚು ಮಳೆಯಾಗಿತ್ತು.

ಪುಷ್ಯ ಮಳೆಯು ಆಗಸ್ಟ್ 1 ಕ್ಕೆ ಅಂತ್ಯಗೊಳ್ಳಲಿದ್ದು, ಆ. 2 ರಿಂದ ಆಶ್ಲೇಷ, 16 ರಿಂದ ಮಖ ಮಳೆ ಪ್ರವೇಶಿಸಲಿದೆ. ಈ ನಕ್ಷತ್ರಗಳನ್ನು ಹೊರತುಪಡಿಸಿ ಉಳಿದಂತೆ ಮಳೆಯ ಪ್ರಮಾಣ ಕ್ಷೀಣಗೊಳ್ಳಲಿದ್ದು, ಇಂದು ಕಂಡು ಬಂದಿರುವ ಹವಾಮಾನ ಬದಲಾವಣೆ ಮತ್ತೆ ಮಳೆ ಪ್ರಮಾಣ ಕುಂಠಿತಗೊಳ್ಳುವ ಆತಂಕ ಮೂಡಿಸಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉಕ್ಕಿ ಬರುತ್ತಿದ್ದ ಜಲಬುಗ್ಗೆಗಳು ಇನ್ನೂ ಕಾಣಿಸಿಕೊಳ್ಳದಿರುವದು ಈ ವರ್ಷವೂ ಹಿಂದಿನ ಸಾಂಪ್ರದಾಯಿಕ ವರ್ಷಗಳಿಗೆ ಹೋಲಿಸಿದರೆ, ತೀರಾ ಮಳೆ ಕಡಿಮೆಯಾಗಲಿರುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇದಕ್ಕೆ ಸಾಕ್ಷಿಯಾಗಿ ಇಂದಿನ ಮಳೆಯ ಪ್ರಮಾಣ ಸರಾಸರಿ ಕೇವಲ 0.37 ಇಂಚು ದಾಖಲಾಗಿದೆ.

ದೇವರಕೊಲ್ಲಿ ಜಲಪಾತ

ಈ ನಡುವೆ ಮದೆ ಗ್ರಾ.ಪಂ. ವ್ಯಾಪ್ತಿಯ ದೇವರಕೊಲ್ಲಿಯಲ್ಲಿ ನೈಸರ್ಗಿಕ ಜಲಧಾರೆಯೊಂದು ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೆದ್ದಾರಿಯಲ್ಲಿ ಓಡಾಡುವ ಪ್ರವಾಸಿಗರು ಈ ಸ್ಥಳದಲ್ಲಿ ಕೆಲಕಾಲ ವಿರಾಮ ಪಡೆದು ಮೊಬೈಲ್‍ಗಳಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುವ ದೃಶ್ಯ ಕಂಡು ಬಂದಿದೆ. ಆದರೆ ಈ ನೈಸರ್ಗಿಕ ಪರಿಸರದ ಸುತ್ತಲೂ ಪ್ರವಾಸಿಗರು ತಿಂದುಂಡು ಎಸೆಯುವ ಪ್ಲಾಸ್ಟಿಕ್ ಕವರ್‍ಗಳು, ಬಾಟಲಿಗಳು ಇನ್ನಿತರ ತ್ಯಾಜ್ಯಗಳು ಇಡೀ ಪರಿಸರವನ್ನು ಹಾಳುಗೆಡವಿರುವದು ಗೋಚರವಾಗಿದೆ.

- ಚಿತ್ರ, ವರದಿ : ನಾಗರಾಜ್ ಶೆಟ್ಟಿ, ಹೊದ್ದೆಟ್ಟಿ ಸುಧೀರ್