ಸೋಮವಾರಪೇಟೆ,ಜು.26: ಅಸ್ಸಾಮಿ ನಿರಾಶ್ರಿತರ ಹೆಸರಿನಲ್ಲಿ ಕೊಡಗಿನೊಳಗೆ ಬೀಡುಬಿಡುತ್ತಿರುವ ಬಾಂಗ್ಲಾವಲಸಿಗರಿಗೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ನೀಡುವ ಗುಂಪೊಂದು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು, ಪ್ರತಿ ಶುಕ್ರವಾರದಂದು ನಿರಾಶ್ರಿತರನ್ನು ಮಂದಿರದಲ್ಲಿ ಸೇರಿಸಿ ರಾಜ್ಯ ಸರಕಾರದ ಸೌಲಭ್ಯಗಳನ್ನು ನೀಡುವ ಕಾನೂನು ವಿರೋಧಿ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ದೂರಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ, ಬಾಂಗ್ಲಾ ವಲಸಿಗರಿಗೆ ಸ್ಥಳೀಯವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ ಕೊಡುವ ದಂಧೆ ನಡೆಯುತ್ತಿದೆ. ಇದನ್ನು ಪ್ರಶ್ನಿಸುವವರ ಭಾವಚಿತ್ರವನ್ನು ಸೆರೆಹಿಡಿದು ಬೆದರಿಸುವ ಕೃತ್ಯಗಳು ಕಂಡುಬರುತ್ತಿವೆ ಎಂದು ಆರೋಪಿಸಿದರು.
ಈ ಬಗ್ಗೆ ಚರ್ಚೆ ನಡೆದು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮಗಳು ನಡೆಯದಂತೆ ನಿಗಾವಹಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು
(ಮೊದಲ ಪುಟದಿಂದ) ತಾ.ಪಂ.ನಿಂದಲೇ ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.
ಇತ್ತೀಚೆಗೆ ಏಳನೇಹೊಸಕೋಟೆ ಗ್ರಾಮದಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟದಲ್ಲಿ ಪಾಕಿಸ್ತಾನ ವಿಜಯಿಯಾದ ಸಂದರ್ಭ ವಿಜಯೋತ್ಸವ ಆಚರಿಸಿದ ಆರೋಪಿಗಳ ಪರ ಜಿಲ್ಲಾ ಪಂಚಾಯಿತಿ ಸದಸ್ಯರೋರ್ವರು ವಕಾಲತ್ತು ವಹಿಸಿದ್ದು, ಇವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಬಹುತೇಕ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭೆ ಖಂಡನಾ ನಿರ್ಣಯ ಕೈಗೊಂಡಿತು.
ದಿಡ್ಡಳ್ಳಿ ಮತ್ತು ಬಸವನ ಹಳ್ಳಿಯ ನಿರಾಶ್ರಿತರ ಕೇಂದ್ರ ಅಧಿಕಾರಿಗಳಿಗೆ ಗಂಜಿಕೇಂದ್ರವಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ತಕ್ಷಣವೇ ನಿರ್ಮಿತಿ ಕೇಂದ್ರದ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಸದಸ್ಯರುಗಳು ಒತ್ತಾಯಿಸಿದರು.
ತಾತ್ಕಾಲಿಕ ಬಡಾವಣೆ ನಿರ್ಮಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ರೂ 60ಲಕ್ಷ ಹಾಗೂ ಎರಡನೇ ಹಂತದಲ್ಲಿ ಇದೇ ಉದ್ದೇಶಕ್ಕಾಗಿ 2.84ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿಯನ್ನು ಕೊಡಗು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಮನೆ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರವಾಗಿದ್ದು, ಸಾಮಗ್ರಿ ಖರೀದಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. 577 ನಿರಾಶ್ರಿತರ ಪೈಕಿ ಬಸವನಹಳ್ಳಿಯಲ್ಲಿ 181 ಮನೆಗಳು ಹಾಗೂ ಬ್ಯಾಡಗೊಟ್ಟದಲ್ಲಿ 396 ಮನೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದ್ದರೂ, ಶೇ. 50ರಷ್ಟು ಮನೆ ನಿರ್ಮಾಣವಾಗಿಲ್ಲ ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಭೆಯಲ್ಲಿ ಹೇಳಿದರು.
ಕುಡಿಯುವ ನೀರು, ನೈರ್ಮಲೀಕರಣ ವಿಭಾಗದ ಅಭಿಯಂತರರು ಅನುಪಾಲನ ವರದಿಯನ್ನು ನೀಡುತ್ತಿಲ್ಲ. ಕುಡಿಯುವ ನೀರಿನ ಕೊಳೆಬಾವಿ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಕೊಳವೆಬಾವಿಯ ದಂಧೆಯನ್ನು ಕೆಲವು ಅಧಿಕಾರಿಗಳು ನಡೆಸುತ್ತಿದ್ದಾರೆ. 450ಅಡಿ ಕೊರೆಸಲು ರೂ. 1ಲಕ್ಷ ಹಣ ಖರ್ಚು ತೋರಿಸುತ್ತಾರೆಂದು ಸದಸ್ಯರಾದ ಮಣಿ ಉತ್ತಪ್ಪ, ಗಣೇಶ್ ಮತ್ತು ಕುಶಾಲಪ್ಪ ಆರೋಪಿಸಿದರು.
ಶನಿವಾರಸಂತೆ ಹೋಬಳಿಯ ಮಾದ್ರೆ ಗ್ರಾಮದಲ್ಲಿ 40 ಕುಟುಂಬ ವಾಸವಿದ್ದು, ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಕ್ಷಣವೇ ಸಮಸ್ಯೆ ಬಗೆಹರಿಸಬೇಕೆಂದು ಸದಸ್ಯ ಅನಂತಕುಮಾರ್ ಸಭೆಯ ಗಮನಕ್ಕೆ ತಂದರು.
ಆಯುಷ್ ಇಲಾಖೆಗೆ ಸಂಬಂಧಿಸಿದಂತೆ ಬೆಸೂರಿನಲ್ಲಿರುವ ಸರಕಾರಿ ಆಯುರ್ವೇದ ಆಸ್ಪತ್ರೆಯ ಕಟ್ಟಡ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಇದರ ದುರಸ್ತಿಗೆ ಹಣ ಬಿಡುಗಡೆಮಾಡಬೇಕೆಂದು ವೈದ್ಯೆ ಸ್ಮಿತ ಮನವಿ ಮಾಡಿದರು. ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ವಸತಿಗೃಹದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಒಂದು ತಿಂಗಳು ಕಳೆದಿದೆ. ಇನ್ನೂ ದುರಸ್ತಿ ಮಾಡದಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ರವರನ್ನು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಳ್ಳಾರಳ್ಳಿ ಗ್ರಾಮದಲ್ಲಿ ಶಂಖುಹುಳುವಿನ ಬಾಧೆ ಹೆಚ್ಚಾಗಿದ್ದು, 1200ಏಕರೆ ಕೃಷಿ ಬೆಳೆ ನಾಶವಾಗಿದೆ. ಇದಕ್ಕೆ ಶಾಶ್ವತವಾಗಿ ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಕಂಡು ಹಿಡಿಯಲು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ ಮತ್ತು ಸಂಬಾರ ಮಂಡಳಿ ವಿಜ್ಞಾನಿಗಳಿಗೆ ಮನವಿ ಮಾಡಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.