ಸೋಮವಾರಪೇಟೆ, ಜು.26 : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಶೋಕ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವರಾಜು ಅರಸು ಸಮುದಾಯ ಭವನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷ ಸದಸ್ಯರು, ಪ.ಪಂ. ಅಧ್ಯಕ್ಷರೊಂದಿಗೆ ವಾಕ್ಸಮರ ನಡೆಸಿ, ಸಾಮೂಹಿಕ ರಾಜೀನಾಮೆ ನೀಡಿ ಚುನಾವಣೆಗೆ ಹೋಗೋಣ ಎಂದು ಸವಾಲು ಎಸೆದ ಘಟನೆ ನಡೆಯಿತು.ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಆರಂಭದಲ್ಲೇ ವಿಪಕ್ಷ ಸದಸ್ಯರುಗಳು ಆಡಳಿತ ಮಂಡಳಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದರು. ಪ.ಪಂ. ವ್ಯಾಪ್ತಿಯ ಅಶೋಕ ಬಡಾವಣೆಯಲ್ಲಿ ದೇವರಾಜು ಅರಸು ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಲು ಹಿಂದಿನ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಇದನ್ನು ಓದಿ ಅಂಗೀಕರಿಸುವ ಸಂದರ್ಭ ಆಕ್ಷೇಪ ಹೊರಹಾಕಿದ ಸದಸ್ಯರುಗಳಾದ ಕೆ.ಎ. ಆದಂ, ಶೀಲಾ ಡಿಸೋಜ, ಇಂದ್ರೇಶ್ ಅವರುಗಳು ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಭವನ ನಿರ್ಮಿಸಲು ಅವಕಾಶ ನೀಡುವದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ಈ ಜಾಗವನ್ನು ಪ.ಪಂ. ಮಾಜೀ ಅಧ್ಯಕ್ಷರಾಗಿದ್ದ ಅಶೋಕ್ಕುಮಾರ್ ಅವರ ಅವಧಿಯಲ್ಲಿ ವೀರಶೈವ ಸಮಾಜದವರು ಪ.ಪಂ.ಗೆ ಉಚಿತವಾಗಿ ನೀಡಿದ್ದು, ಇದರಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಬಗ್ಗೆ ನಿಬಂಧನೆ ಹಾಕಿದ್ದಾರೆ. ಇದೀಗ ಈ ಜಾಗದಲ್ಲಿ ಅರಸು ಭವನ ನಿರ್ಮಿಸಲು ಹೊರಟಿರುವದು ಸರಿಯಲ್ಲ. ಇಲ್ಲಿ ನಿವೇಶನ ರಹಿತರಿಗೆ ಮೊದಲು ನಿವೇಶನ ನೀಡಿ, ಪ.ಪಂ. ವ್ಯಾಪ್ತಿಯ ಪೈಸಾರಿ ಜಾಗ ಗುರುತಿಸಿ ಅಲ್ಲಿ ಭವನ ನಿರ್ಮಿಸಿ ಎಂದು ವಿಪಕ್ಷದವರು ಆಗ್ರಹಿಸಿದರು.
ಈ ಬಗ್ಗೆ ಸಭೆಯಲ್ಲಿ ವಾದ ವಿವಾದಗಳು ಏರ್ಪಟ್ಟಿತ್ತು. ಅಧ್ಯಕ್ಷೆ ಏಕಾಂಗಿಯಾಗಿ ಉತ್ತರಿಸುತ್ತಿದ್ದಂತೆ ಸದಸ್ಯ ಬಿ.ಎಂ. ಸುರೇಶ್ ಅಧ್ಯಕ್ಷರ ಪರ ನಿಂತರು. ಶಾಸಕರ ಸೂಚನೆ ಮೇರೆ ಜಾಗ ನೀಡಲು ಕಳೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಭವನ ನಿರ್ಮಾಣಕ್ಕೆ ಜಾಗ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಬಡವರ ಸಮಾಧಿ ಮೇಲೆ ಭವನ ನಿರ್ಮಿಸಿ ಎಂದು ದೇವರಾಜು ಅರಸು ಅವರು ಹೇಳಿಲ್ಲ. ಮೊದಲು ನಿರ್ಗತಿಕರಿಗೆ ನಿವೇಶನ ನೀಡಿ ಎಂದು ಸದಸ್ಯೆ ಶೀಲಾ ಡಿಸೋಜ ಆಗ್ರಹಿಸಿದರು.
ಅಶೋಕ ಬಡಾವಣೆಯಲ್ಲಿ ಭವನ ನಿರ್ಮಿಸಲು ನಮ್ಮ ಒಪ್ಪಿಗೆ ಇದೆ. ನಿಮ್ಮ ಆಕ್ಷೇಪಗಳಿದ್ದರೆ ತಿಳಿಸಿ. ಭವನವನ್ನು ಹೇಗೆ ನಿರ್ಮಿಸಬೇಕೆಂದು ನಮಗೆ ತಿಳಿದಿದೆ. ಸೋಮವಾರಪೇಟೆ ಹಾಳಾಗ್ತಿರೋದೇ ಇಂತಹ ಅಡ್ಡಗಾಲುಗಳಿಂದ. ಒಳ್ಳೆ ಕೆಲಸಗಳಿಗೆ ಇಲ್ಲಿ ಸ್ಪಂದನವಿಲ್ಲ. ದೇವರಾಜು ಅರಸು ಅವರಿಗೇ ಮರ್ಯಾದೆ ಇಲ್ಲದಂತಾಯ್ತು ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮಿಂದಾಗಿ ಅರಸು ಅವರಿಗೆ ಅವಮಾನವಾಗುತ್ತಿದೆ ಎಂದು ಸದಸ್ಯ ಆದಂ ಅವರು ಚುಚ್ಚಿದರು. ಈ ಬಗ್ಗೆ ಅರ್ಧಗಂಟೆಗೂ ಅಧಿಕ ಕಾಲ ವಾಕ್ಸಮರ, ಆರೋಪ ಪ್ರತ್ಯಾರೋಪ ನಡೆಯಿತು. ಒಂದು ಹಂತದಲ್ಲಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆಯುವದಾಗಿ ವಿಪಕ್ಷ ಸದಸ್ಯರು ಬೆದರಿಕೆ ಹಾಕಿದರೂ ಮತ್ತೆ ಸಭೆಯಲ್ಲಿ ಭಾಗವಹಿಸಿದರು.
ಪ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಡೆಂಗ್ಯೂ, ಎಚ್1ಎನ್1 ನಂತಹ ಮಾರಕ ಕಾಯಿಲೆಗಳು ಕಾಣಿಸಿಕೊಂಡಿವೆ. ಕಸ ವಿಲೇವಾರಿ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಬಹುದಾಗಿದ್ದರೂ, ಅಧ್ಯಕ್ಷರು ಮತ್ತು ಅಧಿಕಾರಿಗಳಿಗೆ ಬದ್ಧತೆ ಯಿಲ್ಲದಂತಾಗಿದೆ.
(ಮೊದಲ ಪುಟದಿಂದ) ಇದರಿಂದಾಗಿ ಸಮಸ್ಯೆಗಳು ಉಲ್ಬಣಗೊಂಡಿದೆ ಎಂದು ಸದಸ್ಯ ಕೆ.ಎ. ಆದಮ್ ಹಾಗೂ ಇಂದ್ರೇಶ್ ಆರೋಪಿಸಿದರು.
ಕಸ ವಿಲೇವಾರಿ ಬಗ್ಗೆ ಇತ್ತೀಚೆಗೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಕಚೇರಿ ಸಿಬ್ಬಂದಿಗಳನ್ನು ಹೊರಹಾಕಿದ್ದಾರೆ. ಸದಸ್ಯರುಗಳ ಬಗ್ಗೆಯೂ ಧಿಕ್ಕಾರ ಕೂಗಿದ್ದು, ನಮಗಳಿಗೆ ನೋವುಂಟುಮಾಡಿದೆ. ಆದರೂ ಅಧ್ಯಕ್ಷರು ಗಂಭೀರವಾಗಿ ಚಿಂತಿಸುತ್ತಿಲ್ಲ. ತ್ಯಾಜ್ಯ ವಿಲೇವಾರಿ ಬಗ್ಗೆ ಸದಸ್ಯರುಗಳು ಅಭಿಪ್ರಾಯ ಪಡೆಯುತ್ತಿಲ್ಲ. ಅಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಸದಸ್ಯೆ ಶೀಲಾ ಡಿಸೋಜ, ಆದಂ ಅವರುಗಳು ದೂರುಗಳ ಸುರಿಮಳೆಗೈದರು.
ಇದಕ್ಕೆ ಉತ್ತರಿಸಲು ಎದ್ದುನಿಂತ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಚೇರಿಯಲ್ಲಿ ಮಹಿಳಾ ಅಧ್ಯಕ್ಷರು, ಸದಸ್ಯರುಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕೆಲವು ಸದಸ್ಯರು ದೌರ್ಜನ್ಯಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಭಾವುಕರಾದರು.
ಈ ಸಂದರ್ಭ ಮತ್ತೊಮ್ಮೆ ಮುಗಿಬಿದ್ದ ವಿಪಕ್ಷ ಸದಸ್ಯರು, ತ್ಯಾಜ್ಯ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ, ಇಲ್ಲ ಸಲ್ಲದ ವಿಷಯಗಳನ್ನು ಎಳೆದು ತರಬೇಡಿ ಎಂದು ಆಕ್ರೋಶಿತರಾದರು. ನಂತರ ಮಾತನಾಡಿದ ಅಧ್ಯಕ್ಷರು 30 ಲಕ್ಷ ರೂ ವೆಚ್ಚದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅನುಮೋದನೆ ಪಡೆದ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಪ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಧ್ಯಕ್ಷರು ವಿಫಲವಾಗಿದ್ದು, ಆಡಳಿತದಲ್ಲೂ ವಿಫಲತೆ ಕಂಡಿದ್ದಾರೆ. ನಿಮ್ಮಿಂದ ಪ.ಪಂ. ಅಭಿವೃದ್ಧಿ ಸಾಧ್ಯವಿಲ್ಲ ತಕ್ಷಣ ಎಲ್ಲರೂ ರಾಜೀನಾಮೆ ನೀಡಿ ಚುನಾವಣೆ ಎದುರಿಸೋಣ, ಮುಂದಿನ ಆಡಳಿತ ಮಂಡಳಿಯಿಂದಲಾದರೂ ಅಭಿವೃದ್ಧಿ ಸಾಧಿಸೋಣ ಎಂದು ಕೆ.ಎ. ಆದಂ ಸೇರಿದಂತೆ ವಿಪಕ್ಷ ಸದಸ್ಯರು ಸವಾಲು ಹಾಕಿದರು.
ಬಾಣವಾರ ಸಮೀಪದ ಸಿದ್ಧಲಿಂಗಪುರ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳವನ್ನು ಮೀಸಲಿರಿಸಲಾಗಿದ್ದು, ಈಗಾಗಲೇ ಸ್ಥಳವನ್ನು ಸರ್ವೇ ಮಾಡಿಸಲಾಗಿದೆ. ಆಗಸ್ಟ್ 3ರಂದು ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ಕರೆದು ತ್ಯಾಜ್ಯ ವಿಲೇವಾರಿ ನಿರ್ವಹಣೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಹಾರ ಕುರಿತು ಚರ್ಚಿಸಲಾಗುವದು ಎಂದರು.
ಪಟ್ಟಣದಲ್ಲಿ ಬೀಡಾಡಿ ದನಗಳು ಮತ್ತು ನಾಯಿಗಳ ಹಾವಳಿಯಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಹುಚ್ಚು ನಾಯಿಗಳ ಸಂಖ್ಯೆ ಹೆಚ್ಚಿದ್ದು, ದನಗಳಿಗೆ ಕಚ್ಚುತ್ತಿರುವರಿಂದ ದನಗಳು ಸಾಯುತ್ತಿವೆ. ಜನರು ರಸ್ತೆಯಲ್ಲಿ ತಿರುಗಾಡಲು ಕಷ್ಟವಾಗಿದೆ ಎಂದು ಸದಸ್ಯೆ ಶೀಲಾ ಡಿಸೋಜಾ ಆರೋಪಿಸಿದರು. ತ್ಯಾಜ್ಯ ವಿಲೇವಾರಿ, ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಮುಂದಿನ 15ದಿಗಳಲ್ಲಿ ಸಮಸ್ಯೆಯನ್ನು ಪರಿಹರಿಸಲು ಪಂಚಾಯಿತಿ ಆಡಳಿತ ವಿಫಲವಾದಲ್ಲಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ವಿಪಕ್ಷ ಸದಸ್ಯರು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಯಾವದೇ ದಾಖಲೆಗಳನ್ನು ಸದಸ್ಯರಿಗೆ ನೀಡುತ್ತಿಲ್ಲ. ಈ ಹಿಂದೆಯೂ ಇದರ ಬಗ್ಗೆ ಚರ್ಚಿಸಲಾಗಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮುಂದಿನ ಸಭೆಗಳಿಗೆ ಅಧಿಕಾರಿಗಳು ದಾಖಲೆಗಳನ್ನು ಕಡ್ಡಾಯವಾಗಿ ಸಭೆಯಲ್ಲಿಟ್ಟುಕೊಳ್ಳಬೇಕೆಂದು ಸದಸ್ಯೆ ಶೀಲಾ ಡಿಸೋಜಾ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿಗೂ ನೆಲಬಾಡಿಗೆ ಆಧಾರದಲ್ಲಿ ವ್ಯಾಪಾರ ನಡೆಸುತ್ತಿರುವ ವರ್ತಕರಿಂದ ಪಂಚಾಯಿತಿ ನಿಗದಿಗೊಳಿಸಿರುವ ಬಾಡಿಗೆಯನ್ನು ವಸೂಲಿ ಮಾಡಬೇಕು. ಎಲ್ಲ ವರ್ತಕರೂ ಅಂಗಡಿ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರುವಂತೆ ಸೂಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ತಪ್ಪಿದಲ್ಲಿ ದಂಡ ವಿಧಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ, ಸದಸ್ಯರುಗಳಾದ ಈಶ್ವರ್, ಲೀಲಾ ನಿರ್ವಾಣಿ, ಮೀನಾಕುಮಾರಿ, ಸುಶೀಲ, ವೆಂಕಟೇಶ್, ನಾಗರಾಜು, ಉದಯಶಂಕರ್, ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.