ಮಡಿಕೇರಿ, ಜು. 26: ಉದ್ಯೋಗ ಕೊಡಿಸುವದಾಗಿ ಬೆಂಗಳೂರಿಗೆ ಸುಮಾರು 40 ವಿದ್ಯಾರ್ಥಿನಿಯರ್ನು ಕರೆದೊಯ್ದು ವಂಚಿಸಿರುವ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ.ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೆಲ ತಿಂಗಳ ಹಿಂದೆ ಬೆಂಗಳೂರಿನ ‘ಆಕ್ಸೆಂಚರ್’ ಎಂಬ ಕಂಪೆನಿ ಯೊಂದರಿಂದ ಕ್ಯಾಂಪಸ್ ಸಂದರ್ಶನ ನಡೆದಿತ್ತು ಎನ್ನಲಾಗಿದೆ. ಈ ಸಂದರ್ಭ ಸುಮಾರು 40 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಉದ್ಯೋಗ ಆದೇಶ ಪತ್ರದೊಂದಿಗೆ ಗಣೇಶ್ ಶೆಟ್ಟಿ ಎಂಬಾತ ಬೆಂಗಳೂರಿಗೆ ಕರೆದೊಯ್ದಿದ್ದ ಯೆನ್ನಲಾಗಿದೆ. ಮಾತ್ರವಲ್ಲದೆ ವಾಸ್ತವ್ಯದ ವ್ಯವಸ್ಥೆಗಾಗಿ ವಿದ್ಯಾರ್ಥಿನಿಯರಿಂದ 7 ಸಾವಿರ, 4 ಸಾವಿರದಂತೆ ಹಣವನ್ನು ಸಂಗ್ರಹಿಸಿ ಬೆಂಗಳೂರಿನ ಮಾರತಹಳ್ಳಿ ಎಂಬಲ್ಲಿನ ಪಿ.ಜಿ.ಯೊಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ. ಆದರೆ ಹಲವು ದಿನಗಳೇ ಕಳೆದರೂ ವಿದ್ಯಾರ್ಥಿನಿಯರಿಗೆ ಉದ್ಯೋಗ ಸಿಗಲಿಲ್ಲ. ಈ ಬಗ್ಗೆ ನಿನ್ನೆ ದಿನ ವಿದ್ಯಾರ್ಥಿನಿಯರು ಗಣೇಶ್ ಶೆಟ್ಟಿ ಬಳಿ ವಿಚಾರಿಸಿದಾಗ ಉದ್ಯೋಗಕ್ಕಾಗಿ ವೈದ್ಯಕೀಯ ಹಾಗೂ ದೈಹಿಕ ಪರೀಕ್ಷೆ ಮಾಡಿಸಬೇಕೆಂದು ಹೇಳಿದ್ದು, ಇದರಿಂದ ಸಂಶಯಗೊಂಡ ವಿದ್ಯಾರ್ಥಿನಿಯರು ಪೋಷಕರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಅರಿತ ಗಣೇಶ್ ಶೆಟ್ಟಿ ಪರಾರಿಯಾಗಿದ್ದ. ಆತನ ಪತ್ತೆಗೆ ಬಲೆ ಬೀಸಿದ ಬೆಂಗಳೂರು ಪೊಲೀಸರು ಹಾಗೂ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಬೆಂಗಳೂರಿನ ಪೊಲೀಸರೊಂದಿಗೆ ಕೊಡಗಿನ ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಸಿಕ್ಕಿತ್ತು ಎನ್ನಲಾದ ಉದ್ಯೋಗ ಆದೇಶ ಪತ್ರ ಅಸಲಿಯೋ ನಕಲಿಯೋ ಎಂಬ ಬಗ್ಗೆ ವಿಚಾರಣೆಯಿಂದ ತಿಳಿದು ಬರಬೇಕಿದೆ. ಜೊತೆಗೆ ಗಣೇಶ್ ಶೆಟ್ಟಿ ಎಂಬಾತ ವಿದ್ಯಾರ್ಥಿನಿಯರನ್ನು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಸಲು ಹೇಳಿದ ಉದ್ದೇಶದ ಬಗ್ಗೆಯೂ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಬೆಂಗಳೂರು ಪೊಲೀಸರು ಪ್ರಕರಣದ ತನಿಖೆ ಮಾಡಲಿದ್ದು, ಕೊಡಗು ಪೊಲೀಸರೂ ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.