ಮಡಿಕೇರಿ, ಜು. 26: ಭಾರತ ಭೂಮಿಯಿಂದ ಸ್ನೇಹಸ್ತವನ್ನು ಧಿಕ್ಕರಿಸಿ ಪಾಕಿಸ್ತಾನ ಎಸಗಿದ ವಿಶ್ವಾಸಘಾತದ 1999ರ ಕಾರ್ಗಿಲ್ ಯುದ್ಧ ಮತ್ತು ಭಾರತ ಸೈನ್ಯ ಗಳಿಸಿದ ವಿಜಯವನ್ನು ಇತಿಹಾಸ ಎಂದಿಗೂ ಮರೆಯಬಾರದು ಎಂದು ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಬಣ್ಣಿಸಿದರು.ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಇಲ್ಲಿನ ಯುದ್ಧ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1999ರಲ್ಲಿ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದ ಲಾಹೋರ್‍ಗೆ ಬಸ್ ಸಂಪರ್ಕ ಸಹಿತ ನೆರೆಯ ರಾಷ್ಟ್ರಕ್ಕೆ ಸ್ನೇಹ ಹಸ್ತ ಚಾಚಿದರೆ, ವಿದ್ರೋಹಿ ಪಾಕ್ ತಮ್ಮ ನೆಲವನ್ನೇ ಕಬಳಿಸಲು ವಿಫಲ ಯತ್ನ ನಡೆಸಿದ್ದಾಗಿ ನೆನಪಿಸಿದರು.

ಹಾಗಾಗಿ ಇಂತಹ ಕುಹಕಿ ಪಾಕಿಸ್ತಾನ ಎಸಗಿರುವ ದ್ರೋಹವನ್ನು ಎಂದಿಗೂ ಮರೆಯದಂತೆ, ವಿಹಿಂಪ ಹಾಗೂ ಬಜರಂಗದಳ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ ಎಂದು ನುಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಪಾಕಿಸ್ತಾನಕ್ಕೆ ಭಾರತ ಸೈನ್ಯ ಇತಿಹಾಸದಲ್ಲಿ ಅನೇಕ ಭಾರೀ ಮರೆಯಲಾರದ ಪಾಠ ಕಲಿಸಿದ್ದು, ಇಲ್ಲಿ ಸೈನಿಕರ ಬಲಿದಾನ ವ್ಯರ್ಥವಾಗದಂತೆ ಯುವ ಜನಾಂಗ ಜಾಗೃತಿ ವಹಿಸಬೇಕೆಂದು ಕರೆ ನೀಡಿದರು. ಪತ್ರಕರ್ತ ಚಿ.ನಾ. ಸೋಮೇಶ್, ಕಾರ್ಗಿಲ್ ಹೋರಾಟದ ದಿನಗಳು ಮತ್ತು ಭಾರತ ಸೈನ್ಯ ಮೆರೆದ ಹೋರಾಟದ ಯಶೋಗಾಥೆಯನ್ನು ಮೆಲುಕು ಹಾಕುತ್ತಾ, ದೇಶ ಕಾಯುವ ಸೈನ್ಯ ಮತ್ತು ದೇಶಕ್ಕಾಗಿ ಮಡಿದ ಯೋಧರ ಕುಟುಂಬಗಳ ಸ್ಥೈರ್ಯ ಕಾಪಾಡುವಲ್ಲಿ

(ಮೊದಲ ಪುಟದಿಂದ) ಜನಕೋಟಿ ಸದಾ ಜಾಗೃತರಾಗಿರುವಂತೆ ಸಲಹೆ ನೀಡಿದರು.

ಮರೆಯಲಾರದ ನೆನಪು : ಆ ಬಳಿಕ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಅಶ್ವಿನಿ ಆಸ್ಪತ್ರೆಯ ಗೌರವ ಕಾರ್ಯದರ್ಶಿ ಹಾಗೂ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ, ಕೊಡಗಿನ ಜನತೆಯು 1999ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರೂಪಿಸಿದ್ದ ಸೈನಿಕರ ಕಲ್ಯಾಣ ನಿಧಿಗೆ ರೂ. 17 ಲಕ್ಷ ಅರ್ಪಿಸಿದ ಕ್ಷಣ ಎಂದಿಗೂ ಮರೆಯಲಾರದ ನೆನಪಾಗಿ ಉಳಿದಿದೆ ಎಂದರು. ‘ಶಕ್ತಿ’ ಮೂಲಕ ಜಿಲ್ಲೆಯಾದ್ಯಂತ ಜನತೆ ಅರ್ಪಿಸಿದ ಮೊತ್ತವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಂದಿನ ಪ್ರಧಾನಿಗಳಿಗೆ ನೇರ ಅರ್ಪಿಸಿದ ಕ್ಷಣದ ಬಗ್ಗೆ ಅವರು ಮೆಲುಕು ಹಾಕಿದರು. ಇಂದಿಗೂ ಆಸ್ಮರಣೆಯಲ್ಲಿ ಯುವಕರು ರಕ್ತದಾನ ಮಾಡುತ್ತಿರುವದು ಮೆಚ್ಚತಕ್ಕ ಸೇವೆಯೆಂದು ಶ್ಲಾಘಿಸಿದರು.

ವಿ.ಹಿಂ.ಪ. ಜಿಲ್ಲಾಧ್ಯಕ್ಷ ಎಂ.ಎಂ. ಬೋಪಯ್ಯ ಮಾತನಾಡಿ, ಒಂದೆಡೆ ಸಮಾಜದಲ್ಲಿ ಮುಗ್ಧರನ್ನು ಕ್ರೌರ್ಯದಿಂದ ಕಡಿದು ಕೊಲ್ಲುವ ಮೂಲಕ ರಕ್ತ ಹರಿಸುವವರಿದ್ದರೆ, ಇನ್ನೊಂದೆಡೆ ಜೀವ ಉಳಿಸುವದಕ್ಕಾಗಿ ರಕ್ತದಾನ ಮಾಡುತ್ತಿರುವದು ಹೆಮ್ಮೆ ಎಂದರಲ್ಲದೆ, ಒಳ್ಳೆಯದಕ್ಕೆ ಸದಾ ದೇವರ ದಯೆ ಇರಲಿದೆ ಎಂದರು.

ಹುತಾತ್ಮರಿಗೆ ಗೌರವ ನಮನ ಸಲ್ಲಿಸುವಲ್ಲಿ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ, ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಶಾಸಕ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ನಿವೃತ್ತ ಸೈನಿಕರೊಂದಿಗೆ ಹಾಲಿ ಉದ್ಯೋಗಿ ಲೆ. ವಿಶ್ವಾಸ್ ಪೈ, ಎನ್‍ಸಿಸಿ ಪ್ರಮುಖರು, ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ವಿ.ಹಿಂ.ಪ. ಕಾರ್ಯದರ್ಶಿ ಡಿ. ನರಸಿಂಹ ಸ್ವಾಗತಿಸಿದರೆ, ಸಾಂಸ್ಕøತಿಕ ಪ್ರಕೋಷ್ಠದ ಭಾರತಿ ರಮೇಶ್ ವಂದೇ ಮಾತರಂ ಹಾಡಿದರು. ಬಜರಂಗದಳದ ವಿನಯ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ಬಿಜೆಪಿ ಪದಾಧಿಕಾರಿಗಳಾದ ಬಿ.ಕೆ. ಅರುಣ್‍ಕುಮಾರ್, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಅರುಣ್ ಶೆಟ್ಟಿ ಸೇರಿದಂತೆ ಪಕ್ಷದ ಇತರ ಪ್ರಮುಖರು, ವಿಹಿಂಪ, ಹಿಂದೂ ಜಾಗರಣಾ ವೇದಿಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಜಿಲ್ಲಾ ಸಂಯೋಜಕ ಎನ್.ಕೆ. ಅಜಿತ್‍ಕುಮಾರ್ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಗಿಲ್ ವಿಜಯೋತ್ಸವಕ್ಕೆ ತೆರೆ ಎಳೆಯಲಾಯಿತು.

ಶನಿವಾರಸಂತೆ

ಶನಿವಾರಸಂತೆಯಲ್ಲಿ ನಿವೃತ್ತ ಸೈನಿಕರ ಸಂಘದ ವತಿಯಿಂದ 18ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ನಿವೃತ್ತ ಸೈನಿಕರ ಸಂಘದ ಕಚೇರಿ ಶನಿವಾರಸಂತೆ ಮುಖ್ಯ ಬೀದಿಯಲ್ಲಿ ನಿವೃತ್ತ ಸೈನಿಕರು, ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳ ಪ್ರಾಂಶುಪಾಲರು, ಶನಿವಾರಸಂತೆ ಗ್ರಾಮ ಪಂಚಾಯಿತಿ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಸದಸ್ಯರುಗಳು, ಕಂದಾಯ ಇಲಾಖೆ, ಆಟೋ ಚಾಲಕರ ಸಂಘ, ವರ್ತಕರ ಸಂಘ, ಜನರಲ್ ಕಾರ್ಯಪ್ಪ ಅಭಿಮಾನಿಗಳ ಸಂಘ, ಶನಿವಾರಸಂತೆ ಗಣ್ಯರು ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ನಡೆದ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಸರೋಜಮ್ಮ ಮಾತನಾಡುತ್ತಾ, ದೇಶವನ್ನು ಸಮಾಜವನ್ನು ತಿದ್ದುವ ಶಿಕ್ಷಕರು, ಅನ್ನಕೊಡುವ ರೈತರು ಹಾಗೂ ದೇಶವನ್ನು ಕಾವಲುಗಾರನಂತೆ ಕಾಯುವ ಸೈನಿಕರು ಈ ಮೂವರು ನಮ್ಮ ದೇಶದ ಬೆನ್ನೆಲುಬುಗಳು ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ಪ್ರಾಂಶುಪಾಲರು ಗಳಾದ ಉಮಾಶಂಕರ್, ದೇವರಾಜ್, ನಿವೃತ್ತ ಸೈನಿಕ ಕೆ.ಎ. ಮಂಜುನಾಥ್ ಮಾತನಾಡಿದರು. ಸಭೆಯಲ್ಲಿ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಮಾಜಿ ಅಧ್ಯಕ್ಷೆ ಭುವನೇಶ್ವರಿ, ಸದಸ್ಯರುಗಳಾದ ಸರ್ದಾರ್ ಅಹಮ್ಮದ್, ಬೆಳ್ಳಿ, ವಕೀಲ ಎಸ್.ವಿ. ಜಗದೀಶ್, ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಗಣಪಯ್ಯ, ಸದಸ್ಯರುಗಳಾದ ಎಸ್.ಎನ್. ಪಾಂಡು, ಮಹೇಶ್, ಪುಟ್ಟಸ್ವಾಮಿ, ಗಂಗಾಧರ, ದಿನೇಶ್, ಆನಂದ, ಎಸ್.ಟಿ. ನಾಗ, ಚಂದ್ರಪ್ಪ, ಮಂಜಣ್ಣ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಶಿಕ್ಷಕ ಆರ್. ದಿವಾಕರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವೀರಾಜಪೇಟೆ

1999 ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಯೋಧÀರು ದೇಶಕ್ಕಾಗಿ ಮಾಡಿದ ಬಲಿದಾನ ಎಲ್ಲರಿಗೂ ರಾಷ್ಟ್ರ ಪ್ರೇಮ ಮೂಡಿಸುವಂತಾಗಲಿ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆಯಲ್ಲಿ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಭಾಗದಲ್ಲಿರುವ “ಅಮರ್ ಜವಾನ್” ಯೋಧರ ಸ್ಮಾರಕದಲ್ಲಿ ಕಾರ್ಗಿಲ್ ಯದ್ದದಲ್ಲಿ ಹುತಾತ್ಮರಾದ ಯೋಧÀರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು.

ಕಾರ್ಗಿಲ್ ಯುದ್ದದಲ್ಲಿ 527 ಯೋಧರು ದೇಶ ರಕ್ಷಣೆಗಾಗಿ ಹುತಾತ್ಮರಾದರು, ಅಂದಿನಿಂದ ಇಂದಿನವರಗೆ ಅವರ ಬಲಿದಾನವನ್ನು ಸ್ಮರಿಸುತ್ತಿದ್ದೇವೆ. ಈ ಯೋಧರÀ ಬಲಿದಾನ ದೇಶದ ಯುವಕರಿಗೆ ದೇಶ ಪ್ರೇಮ ಮೂಡಿಸುವದಲ್ಲದೆ ಪ್ರೇರಣಾ ಶಕ್ತಿಯಾಗಿರಲಿ ಎಂದರು.

ಈ ಸಂದರ್ಭ ಕರ್ನಲ್ ಭರತ್, ಪ. ಪಂ. ಅಧ್ಯಕ್ಷ ಜೀವನ್, ಉಪಾಧ್ಯಕ್ಷೆ ತಸ್ಲಿಂ ಅಕ್ತರ್, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಪ ಪಂ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಂಡಂಡ ರಚನ್ ಮೇದಪ್ಪ, ಕಾವೇರಿ ಲಘು ವಾಹನ ಚಾಲಕರ ಸಂಘದವರು, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಉಪಾಧ್ಯಕ್ಷ ಪಟ್ರಪಂಡ ರಮೇಶ್ ಕರುಂಬಯ್ಯ, ಸದಸ್ಯರಾದ ಪುಗ್ಗೇರ ನಂದ, ಚಪ್ಪಂಡ ಹರೀಶ್, ಕಾವಡಿಚಂಡ ಗಣಪತಿ, ಬಾಳೆಯಡ ಮಂದಪ್ಪ, ಚೇನಂಡ ಕಾರ್ಯಪ್ಪ ಇನ್ನಿತರ ಪ್ರಮುಖರು , ಮಾಜಿ ಸೈನಿಕರು ಉಪಸ್ಥಿತರಿದ್ದರು.

ಕುಶಾಲನಗರ

ಬಿಜೆಪಿ ಆಶ್ರಯದಲ್ಲಿ ಕುಶಾಲನಗರದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಯೋಧರಿಗೆ ಜಯಕಾರ ಹಾಕುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. 1 ನಿಮಿಷ ಮೌನಚರಣೆ ಮೂಲಕ ಯುದ್ದದಲ್ಲಿ ಮಡಿದ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

ಈ ಸಂದರ್ಭ ಹಿರಿಯ ನಾಗರಿಕ ಜಿ.ಎಲ್.ನಾಗರಾಜ್, ಪಟ್ಟಣ ಪಂಚಾಯ್ತಿ ಸದಸ್ಯ ಡಿ.ಕೆ.ತಿಮ್ಮಪ್ಪ ದಿನದ ಮಹತ್ವದ ಕುರಿತು ಮಾತನಾಡಿ, ಯುದ್ಧದಲ್ಲಿ ಹೋರಾಡಿ ಮಡಿದ ವೀರಯೋಧರ ಶೌರ್ಯವನ್ನು ಸ್ಮರಿಸಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ಮಧುಸೂದನ್, ರೇಣುಕಾ, ಮುಳ್ಳುಸೋಗೆ ಗ್ರಾಮಪಂಚಾಯ್ತಿ ಸದಸ್ಯರಾದ ದೊಡ್ಡಣ್ಣ, ನೀಲಾಂಬಿಕೆ, ಕೂಡುಮಂಗಳೂರು ಗ್ರಾಮಪಂಚಾಯ್ತಿ ಸದಸ್ಯ ಭಾಸ್ಕರ್ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗಣಿಪ್ರಸಾದ್, ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಪ್ರಮುಖರಾದ ಎಂ.ಎನ್.ಕುಮಾರಪ್ಪ, ನಿಡ್ಯಮಲೆ ದಿನೇಶ್, ಹೆಚ್.ಡಿ. ಶಿವಾಜಿರಾವ್, ದೇವರಾಜ್, ಮಂಜುನಾಥ್, ನವನೀತ್ ಮೊದಲಾದವರು ಇದ್ದರು.

ಪಾಲಿಟೆಕ್ನಿಕ್ ಕುಶಾಲನಗರ : ದೇಶಕ್ಕಾಗಿ ಬಲಿದಾನಗೈದ ಹಾಗೂ ದೇಶಸೇವೆ ಸಲ್ಲಿಸಿ ನಿವೃತ್ತರಾಗಿರುವ ಯೋಧರು ಹಾಗೂ ಕುಟುಂಬ ಸದಸ್ಯರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣುವಂತಾಗಬೇಕು ಎಂದು ವಾಯುಸೇನೆ ನಿವೃತ್ತ ಅಧಿಕಾರಿ ಹಾಗೂ ಉಪನ್ಯಾಸಕ ಕೆ.ವಿ.ಉದಯಕುಮಾರ್ ಕರೆ ನೀಡಿದರು.

ಅವರು ಕುಶಾಲನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಸಂಘಗಳ ಆಶ್ರಯದಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಯುವಪೀಳಿಗೆ ದೇಶದ ಬಗ್ಗೆ ಕಾಳಜಿ ಹೊಂದುವದರೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.

ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೌನಾಚರಣೆ ಮೂಲಕ ಮಡಿದ ವೀರ ಯೋಧರಿಗೆ ನಮನ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರ ಮೋಹನ್ ಸರಕಾರಿ ಇಂಜಿನಿಯ ರಿಂಗ್ ಕಾಲೇಜು ವಿದ್ಯಾರ್ಥಿ ಸಂಘದ ಪ್ರಮುಖ ದರ್ಶನ್ ಸೇರಿದಂತೆ ಉಪನ್ಯಾಸಕರು ಇದ್ದರು.

ಸೋಮವಾರಪೇಟೆ

ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅನನ್ಯವಾಗಿದ್ದು, ಇವರುಗಳ ಆತ್ಮಸ್ಥೈರ್ಯ ಕುಗ್ಗಿಸುವ ವರದಿಗಳನ್ನು ಕೆಲವೊಂದು ಮಾಧ್ಯಮಗಳು ಮಾಡುತ್ತಿರುವದು ಸರಿಯಲ್ಲ. ದೇಶದ ಭದ್ರತೆಯ ವಿಚಾರದಲ್ಲಿ ಯಾವದೇ ರಾಜಿಗೂ ಆಡಳಿತಗಾರರು ಮುಂದಾಗಬಾರದು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯಕುಮಾರ್ ಹೇಳಿದರು.

ಇಲ್ಲಿನ ಜೈ ಜವಾನ್ ಮಾಜೀ ಸೈನಿಕರ ಸಂಘದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಮತ್ತು ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಸೈನಿಕರ ರಾಷ್ಟ್ರಭಕ್ತಿ ಪ್ರಶ್ನಾತೀತ. ಅವರಿಗೆ ಸರಿಸಾಟಿ ಯಾರೂ ಇಲ್ಲ. ಹವಾಮಾನ ವೈಪರೀತ್ಯಗಳ ನಡುವೆಯೂ ದೇಶದ ರಕ್ಷಣೆಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಡುವ ಸೈನಿಕರ ಕಾರ್ಯಕ್ಕೆ ಸಮಾಜ ಸದಾ ಋಣಿಯಾಗಿರಬೇಕು. ಇಂದಿನ ಕೆಲ ಮಾಧ್ಯಮಗಳು ಭಾರತೀಯ ಸೈನ್ಯದ ಸಾಮಥ್ರ್ಯವನ್ನೇ ಪ್ರಶ್ನಿಸಿ ಅವರುಗಳ ಸ್ಥೈರ್ಯ ಕುಗ್ಗಿಸುವಂತಹ ವರದಿಗಳನ್ನು ಬಿತ್ತರಿಸುತ್ತಿರುವದು ಖಂಡನೀಯ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿದರು.

ಅಧ್ಯಕ್ಷತೆಯನ್ನು ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ವಹಿಸಿದ್ದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಹೇಶ್, ಮೇಜರ್ ಮಂದಪ್ಪ, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್, ಕರವೇ ನಗರಾಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಮಾಜೀ ಸೈನಿಕರಾದ ಗಣೇಶ್, ಧರ್ಮಸ್ಥಳ ಯೋಜನೆಯ ರುಬೀನಾ, ಪ.ಪಂ. ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಅವರುಗಳು ಉಪಸ್ಥಿತರಿದ್ದರು.

ಪವಿತ್ರ ಮತ್ತು ಜ್ಯೋತಿ ಪ್ರಾರ್ಥಿಸಿ, ‘ಶಕ್ತಿ’ ವರದಿಗಾರ ವಿಜಯ್ ಹಾನಗಲ್ ನಿರೂಪಿಸಿ, ವಂದಿಸಿದರು. ಕಾರ್ಯ ಕ್ರಮಕ್ಕೂ ಮುನ್ನ ಇಲ್ಲಿನ ವಿವೇಕಾನಂದ ವೃತ್ತದಿಂದ ವಿಜಯೋತ್ಸವ ಮೆರವಣಿಗೆ ನಡೆಯಿತು. ಜೇಸೀ ವೇದಿಕೆಯಲ್ಲಿ ಹುತಾತ್ಮಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.