ವೀರಾಜಪೇಟೆ, ಜು. 26: ರಾಜ್ಯದ ಆಹಾರ ಮತ್ತು ನಾಗರಿಕ ಇಲಾಖೆ ನ್ಯಾಯ ಬೆಲೆ ಅಂಗಡಿಗಳಿಗೆ ಹೊರಡಿಸಿರುವ ಗಣಕೀಕೃತ ಯಂತ್ರದಲ್ಲಿ ಹೆಬ್ಬೆಟ್ಟಿನ ಗುರುತು ನೀಡಿ (ಬಯೋ ಮೆಟ್ರಿಕ್ ವ್ಯವಸ್ಥೆ) ಪಡಿತರ ಚೀಟಿಯ ಸಾಮಗ್ರಿಗಳನ್ನು ಪಡೆಯುವಂತೆ ಆದೇಶಿಸಿರುವದಕ್ಕೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ಆದೇಶ ಹೊರಡಿಸಿದೆ.
ವೀರಾಜಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಗಳ ಊರಿನ 21 ನ್ಯಾಯಬೆಲೆ ಅಂಗಡಿ ಮಾಲೀಕರು ಬಯೋಮೆಟ್ರಿಕ್ ವ್ಯವಸ್ಥೆಯನ್ನು ವಿರೋಧಿಸಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 108 ನ್ಯಾಯಬೆಲೆ ಅಂಗಡಿಗಳಿದ್ದು ಪಡಿತರ ಚೀಟಿದಾರರ ಹಸ್ತದ ಗುರುತು ನೀಡಿ ಸಾಮಗ್ರಿಗಳನ್ನು ವಿತರಣೆ ಮಾಡಲು ಸಾಧ್ಯವಾಗುವದಿಲ್ಲ. ಮಧ್ಯಮ ವಯಸ್ಸಿನವರು ಹಾಗೂ ವಯೋವೃದ್ಧರಿಗೆ ಹಿಂದಿನ, ಇಂದಿನ ಹೆಬ್ಬೆಟ್ಟಿನ ಗುರುತು ವ್ಯತ್ಯಾಸ ಕಂಡುಬಂದು ಅಗತ್ಯ ಕೂಪನ್ ಲಭಿಸದೆ ಪಡಿತರ ಆಹಾರ ಸಾಮಗ್ರಿಗಳಿಂದÀ ವಂಚಿತರಾಗುತ್ತಾರೆ. ಇದರ ವ್ಯವಸ್ಥೆಯು ಮಾಲೀಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹಿಂದಿನ ರೀತಿಯಲ್ಲಿಯೇ ಪಡಿತರ ವಿತರಣೆಗೆ ಆದೇಶಿಸಬೇಕೆಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿತ್ತು.
ಕಳೆದ ಜೂನ್ ತಿಂಗಳಿನಲ್ಲಿ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ಬಂದಿತ್ತಾದರೂ ತಾಲೂಕಿನ 108 ನ್ಯಾಯಬೆಲೆ ಅಂಗಡಿಗಳಲ್ಲಿ ಶೇ. 20 ರಿಂದ 25 ರಷ್ಟು ಪಡಿತರ ಚೀಟಿದಾರರು ಹೆಬ್ಬೆಟ್ಟು ಗುರುತಿನ ವ್ಯತ್ಯಾಸದಿಂದ ಪಡಿತರ ಆಹಾರ ಸಾಮಗ್ರಿಗಳನ್ನು ಪಡೆಯದೆ ವಂಚಿತರಾಗಿದ್ದು ಈ ಬಾಕಿಯಾದ ಪಡಿತರ ಆಹಾರ ಸಾಮಗ್ರಿಗಳನ್ನು ಸರಕಾರದ ಆಹಾರ ಇಲಾಖೆಗೆ ಹಿಂದಿರುಗಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಮಾಲೀಕರ ಪರವಾಗಿ ಹೈಕೋರ್ಟ್‍ನಲ್ಲಿ ವಕೀಲರಾದ ಎನ್. ರವೀಂದ್ರನಾಥ್ ಕಾಮತ್ ವಕಾಲತು ವಹಿಸಿದ್ದರು.