ಸಿದ್ದಾಪುರ, ಜು. 26: ಪಡಿತರ ಚೀಟಿ ಗೊಂದಲದಿಂದಾಗಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಅನ್ನಭಾಗ್ಯದ ಉಚಿತ ಅಕ್ಕಿಯನ್ನು ಪಡೆಯಲು ನೂರಿನ್ನೂರು ರೂ.ಗಳನ್ನು ಖರ್ಚು ಮಾಡುವಂತಹ ಅನಿವಾರ್ಯತೆಗೆ ಪಡಿತರ ಚೀಟಿದಾರರು ಸಿಲುಕಿರುವಂತಹ ಪ್ರಸಂಗ ಸಿದ್ದಾಪುರದಲ್ಲಿ ನಡೆದಿದೆ.

ಯಾರೊಬ್ಬರು ಹಸಿದು ಮಲಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಆದರೆ ಯೋಜನೆಯ ಲಾಭ ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ತಲಪುತ್ತಿದೆಯೇ ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪಡಿತರ ಚೀಟಿ ಸಮಸ್ಯೆಯ ಪರಿಹಾರ ಎಂಬದು ಗಗನಕುಸುಮ ಎಂಬಂತಾಗಿದೆ. ಪಡಿತರ ಚೀಟಿಗಾಗಿ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು ಎಂಬ ಕಾರಣದಿಂದಾಗಿ ಗಣಕ ಕೇಂದ್ರಗಳ ಎದುರು ತಮ್ಮ ದೈನಂದಿನ ಕೆಲಸಕಾರ್ಯಗಳನ್ನು ಬಿಟ್ಟು ದಿನವಿಡೀ ಸರತಿ ಸಾಲಿನಲ್ಲಿ ನಿಂತು ಆಧಾರ್ ಕಾರ್ಡ್ ಜೋಡಣೆ ಮಾಡಿದರೂ ಕೂಡಾ ಫಲಾನುಭವಿಗಳು ತಾವು ವಾಸಿಸುವ ಊರಿನಿಂದ ಮತ್ತೊಂದು ಊರಿನಲ್ಲಿರುವ ನ್ಯಾಯಬೆಲೆ ಅಂಗಡಿಗೆ ತೆರಳಿ ಅನ್ನಭಾಗ್ಯದ ಅಕ್ಕಿಯನ್ನು ಪಡೆಯಬೇಕಾದಂತಹ ವಿಪರ್ಯಾಸದ ಸ್ಥಿತಿ ನಿರ್ಮಾಣವಾಗಿದೆ.

ಸಿದ್ದಾಪುರ ಸಮೀಪದ ಪಾಲಿಬೆಟ್ಟದ ಮಹಿಳೆ ಭಾಗ್ಯವತಿ ತಮ್ಮ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆಗಾಗಿ ಬರೋಬ್ಬರಿ ನಾಲ್ಕು ತಿಂಗಳು ಅಲೆದಾಡಿದ್ದಾರೆ. ಪಡಿತರ ಚೀಟಿ ಪಡೆದುಕೊಳ್ಳಲು ಈ ಫಲಾನುಭವಿಗಳು ವೀರಾಜಪೇಟೆಯಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಾಕಷ್ಟು ಬಾರಿ ಅಲೆದಾಡಿದ್ದಾರೆ. ನಾಲ್ಕು ಮಂದಿ ಇರುವ ಈ ಫಲಾನುಭವಿಗೆ ಅಂತೂ ಇಂತೂ ಪಡಿತರ ಚೀಟಿ ದೊರೆತಿದೆ. ಆದರೆ ಇವರು ‘ಅನ್ನಭಾಗ್ಯ’ದ ಅಕ್ಕಿಯನ್ನು ಕೊಳ್ಳಲು ‘ಹಣಭಾಗ್ಯ’ವನ್ನು ಕಳೆದುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರಣವಿಷ್ಟೇ ಇವರು ವಾಸಿಸುತ್ತಿರುವದು ಪಾಲಿಬೆಟ್ಟದಲ್ಲಿ. ಇವರಿಗೆ ಪಡಿತರ ಪಡೆಯಲು ಸೂಚಿಸಿರುವ ನ್ಯಾಯಬೆಲೆ ಅಂಗಡಿ ಇರುವದು ಸಿದ್ದಾಪುರದಲ್ಲಿ! ಪಾಲಿಬೆಟ್ಟದಿಂದ 7 ಕೆ.ಜಿ. ಉಚಿತ ಅಕ್ಕಿಯನ್ನು ಪಡೆಯಲು ಇವರು ನೂರಿನ್ನೂರು ರೂ.ಗಳನ್ನು ಖರ್ಚುಮಾಡುವಂತಹ ಪ್ರಮೇಯ ಬಂದೊದಗಿದೆ. ಇದು ಕೇವಲ ಇವರೊಬ್ಬರ ಕಥೆಯಲ್ಲ ಅನ್ನಭಾಗ್ಯ ಯೋಜನೆಯ ಕೆಲವು ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯಲ್ಲದ ದೂರದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಬೇಕು..! ಪಾಲಿಬೆಟ್ಟ ಪ್ಯಾಪ್ತಿಯ 8ಕ್ಕೊ ಹೆಚ್ಚು ಪಡಿತರದಾರರು ಈ ಸಮಸ್ಯೆ ಎದುರಿಸುತ್ತಿದ್ದಾರೆ

ಇದರೊಂದಿಗೆ ಕರಡಿಗೊಡು, ಮಾಲ್ದಾರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ನ್ಯಾಯ ಬೆಲೆ ಅಂಗಡಿ ಹೆಸರು ಪಡಿತರದಾರರಿಗೆ ಬದಲಾವಣೆಯಾಗಿದೆ.

ಈ ಹಿಂದೆ ಸರ್ಕಾರವು ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ, ಸಕ್ಕರೆ, ತಾಳೆ ಎಣ್ಣೆ, ಉಪ್ಪು ನೀಡಲಾಗುತ್ತಿದ್ದಾದರೂ ಈಗ ಇದೆಲ್ಲವನ್ನು ಮೊಟಕುಗೊಳಿಸಿ ಪ್ರತಿಯೋಬ್ಬರಿಗೆ ಕೇವಲ ಉಚಿತ ಏಳು ಕೆ.ಜಿ. ಅಕ್ಕಿಯನ್ನು ಮತ್ತು ಹೆಸರು ಕಾಳು ಮಾತ್ರ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೀಮೆಎಣ್ಣೆ ದೊರೆಯದಿರುವದರಿಂದ ಕತ್ತಲಿನಲ್ಲಿಯೇ ಕಾಲ ಕಳೆಯಬೇಕಾಗಿದೆ ಎಂಬದು ಸಾರ್ವಜನಿಕರ ಆರೋಪವಾಗಿದೆ.

ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಅನ್ನಭಾಗ್ಯ ಯೋಜನೆ ಸಫಲತೆಯನ್ನು ಕಾಣಲು ಇಂತಹ ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ ಹಾಗೂ ಪಡಿತರ ಚೀಟಿ ಗೊಂದಲಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಇಲ್ಲದಿದ್ದಲ್ಲಿ ಮಹತ್ವಕಾಂಕ್ಷೆಯ ಯೋಜನೆ ತನ್ನ ಮಹತ್ವ ಕಳೆದುಕೊಳ್ಳುವದರಲ್ಲಿ ಯಾವದೇ ಅನುಮಾನವಿಲ್ಲ.

ಕೆಲವು ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರನ್ನು ದಿಕ್ಕು ತಪ್ಪಿಸುವದು ಪ್ರಮುಖ ಕಾರಣವಾಗಿದ್ದು ಚೀಟಿ ಇದ್ದರು ಅಕ್ಕಿ ಸಿಗುತ್ತಿಲ್ಲ ಎಂದು ವಂಚಿತರಾದ ಮಹಿಳೆಯರು ಶಕ್ತಿಯೊಂದಿಗೆ ದೂರಿಕೊಂಡಿದ್ದಾರೆ

- ಅಂಚೆಮನೆ ಸುಧಿ