ಗೋಣಿಕೊಪ್ಪಲು, ಜು. 26: ದಕ್ಷಿಣ ಕೊಡಗಿನ ಪ್ರಮುಖ ಅಂತರರಾಜ್ಯ ಹೆದ್ದಾರಿ ರಸ್ತೆ ಕುಸಿತದ ಕಾಮಗಾರಿ ಪೆರುಂಬಾಡಿಯಲ್ಲಿ ಬಿರುಸಿನಿಂದ ನಡೆಯಿತು. ಕಾಡುಕಲ್ಲುಗಳ ಬದಲಿಗೆ ಕಲ್ಲು ಕೋರೆಯಿಂದ ಭಾರೀ ಗಾತ್ರದ ಕಲ್ಲುಗಳನ್ನು ತಂದು ಸುರಿಯಲಾಯಿತು. ಇರಿಟ್ಟಿ ಕಾರ್ಮಿಕರು ಕಾಡುಕಲ್ಲು ಗಳಿಂದ ರಸ್ತೆಯ ತಳಭಾಗವನ್ನು ಸಮತಟ್ಟು ಮಾಡಿದ್ದರೆ, ಸೈಜ್ ಕಲ್ಲುಗಳಿಂದ ಸಮತಟ್ಟು ಮಾಡ ತೊಡಗಿದರು. ಅಂತರರಾಜ್ಯ ಹೆದ್ದಾರಿ ಯಲ್ಲಿ ಅಪಾಯಕಾರಿ ಕೆರೆಯ ಏರಿಯ ಮೇಲೆ ಹಲವು ಪ್ರಯಾಣಿಕರು ಸಾಗಿ ಕೇರಳದ ವಾಹನದಲ್ಲಿ ಇರಿಟ್ಟಿ ಮುಂತಾದೆಡೆ ಪ್ರಯಾಣಿಸುವದು ಕಂಡು ಬಂತು. ರಸ್ತೆ ದುರಸ್ತಿಗೊಳಗಾದ ಬಗ್ಗೆ ತಿಳಿಯದ ಹಲವು ಕೇರಳದ ವಾಹನ ಮಾಲೀಕರು, ದ್ವಿಚಕ್ರ ಸವಾರರು ಬಿಟ್ಟಂಗಾಲ-ಬಾಳುಗೋಡು ಮಾರ್ಗ ಪೆರುಂಬಾಡಿಯತ್ತ ಸಾಗಿ ವಿಚಾರ ತಿಳಿದ ನಂತರ ವಾಪಾಸ್ಸು ಕುಟ್ಟ- ಮಾನಂದವಾಡಿ ಮಾರ್ಗ ತಲಚೇರಿ, ಕಣ್ಣಾನೂರಿಗೆ ತೆರಳುತ್ತಿದ್ದುದು ಕಂಡು ಬಂತು.
‘ಶಕ್ತಿ’ಯಲ್ಲಿ ಕೆರೆಯಲ್ಲಿರುವ ಮೀನುಗಳ ಬಗ್ಗೆ ಮಾಹಿತಿಯನ್ನು ನೋಡಿ ವೀರಾಜಪೇಟೆಯ ಕಡೆಯಿಂದ ಬಂದ ಹಲವು ಯುವಕರು ಮೀನಿಗೆ ಗಾಳ ಹಾಕಿ ಬೆಳಗ್ಗಿನಿಂದಲೇ ಸಣ್ಣ ಪುಟ್ಟ ಮೀನು ಹಿಡಿಯುವದು ಅಲ್ಲಿ ಕಂಡು ಬಂತು. ಮತ್ತೊಂದೆಡೆ ಕಾಡುಗಳು, ಬೆಟ್ಟ ಗುಡ್ಡಗಳಿಂದ ಹರಿದು ಬಂದ ನೀರು ಕೆರೆಯನ್ನು ಸೇರುತ್ತಿದ್ದು, ಸಾಕಷ್ಟು ನೀರು ಮಿನಿ ಜಲಪಾತವಾಗಿ ಹರಿದು ಹೋಗುತ್ತಿತ್ತು. ಹೀಗೆ ಹರಿದು ಹೋದ ನೀರು ಬರಪೆÇಳೆಗೆ ಸೇರಲಿದ್ದು, ಮತ್ತೆ ಕೇರಳದ ಕೂಟುಹೊಳೆಗೆ ಸೇರಲಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಕಾಮಗಾರಿ ಮತ್ತಷ್ಟು ದಿನ ಮುಂದುವರಿಯಲಿದೆ ಎಂದು ಅಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.