ಮಡಿಕೇರಿ, ಜು. 26: ಕರ್ನಾಟಕ ಅರಣ್ಯ ನಿಗಮ ಉಪಾಧ್ಯಕ್ಷರು ಹಾಗೂ ಮೇಲ್ಮನೆಯ ಮಾಜಿ ಸದಸ್ಯರೊಬ್ಬರು ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವದು ಖಂಡನೀಯ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ತಾಲೂಕು ಕಾರ್ಯದರ್ಶಿ ಚಲನ್‍ಕುಮಾರ್ ಹಾಗೂ ಪ್ರಮುಖರಾದ ಮುದ್ದಿಯಡ ಮಂಜು, ಕಟ್ಟೆರ ಈಶ್ವರ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರುಗಳು, ವರ್ಗಾವಣೆ ದಂಧೆಯಲ್ಲಿರುವ ಅರಣ್ಯ ನಿಗಮ ಉಪಾಧ್ಯಕ್ಷರು, ಪೊನ್ನಂಪೇಟೆ ತಾಲೂಕು ರಚನೆಯಂತಹ ಗಂಭೀರ ವಿಚಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗತಕ್ಕದ್ದು ಎಂಬ ಅಂಶವನ್ನು ಅರ್ಥೈಸಿಕೊಳ್ಳ ಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ.
ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಗೌರವ ಅಧ್ಯಕ್ಷರಾಗಿರುವ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಈಗಾಗಲೇ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ ಹಾಗೂ ಸಮಿತಿಯ ಇತರ ಪ್ರಮುಖರು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿದ ಸಂದರ್ಭ ಪದ್ಮಿನಿ ಪೊನ್ನಪ್ಪ ನಾಪತ್ತೆಯಾಗಿದ್ದರು ಎಂದು ಬಿಜೆಪಿ ಪ್ರಮುಖರು ತಿರುಗೇಟು ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಅವರವರ ಇತಿಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಯಕ್ರಮ ಅನುಷ್ಠಾನ ಸಂಬಂಧ ಜನಪರ ಕಾಳಜಿಯಿಂದ ಶ್ರಮಿಸುತ್ತಿದ್ದು, ಪದ್ಮಿನಿ ಪೊನ್ನಪ್ಪ, ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮರೆಮಾಚಿ ಜನರನ್ನು ತಪ್ಪು ದಾರಿಗೆ ಎಳೆಯುವ ಹೇಳಿಕೆಗಳಲ್ಲಿ ತೊಡಗಿದ್ದಾರೆ ಎಂದು ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇನ್ನಾದರೂ ಮಾಹಿತಿ ಅಥವಾ ತಿಳುವಳಿಕೆ ಕೊರತೆಯಿಂದ ಜವಾಬ್ದಾರಿ ಸ್ಥಾನದಲ್ಲಿರುವ ಪದ್ಮಿನಿ ಪೊನ್ನಪ್ಪ ಹಾಗೂ ಇತರ ಕಾಂಗ್ರೆಸ್ಸಿಗರು ಸಲ್ಲದ ಸುಳ್ಳು ಹೇಳಿಕೆ ನೀಡದಿರಲಿ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.