ಮಡಿಕೇರಿ, ಜು. 26: ಹಳ್ಳಿಯಿಂದ ದಿಲ್ಲಿಯ ತನಕ ದೇಶದೆಲ್ಲೆಡೆ ಬಿ.ಜೆ.ಪಿ.ಯಿಂದ ಕಾರ್ಯ ವಿಸ್ತಾರ ಯೋಜನೆಯ ಕುರಿತು ಚರ್ಚೆಯಾಗುತ್ತಿದೆ. ಆದರೆ ಬಿ.ಜೆ.ಪಿ. ಕಾರ್ಯಕರ್ತರು ಮಾತ್ರ ಪಕ್ಷದ ಅಣತಿಯಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೂತ್ರದೊಂದಿಗೆ ಪಕ್ಷ ಸಂಘಟನೆಯತ್ತ ಕಾರ್ಯೋನ್ಮುಖರಾಗಿದ್ದಾರೆ.ಭಾರತೀಯ ಜನತಾ ಪಕ್ಷದ ವಿವಿಧ ಸಮಿತಿಗಳಲ್ಲಿ ಗುರುತಿಸಿಕೊಂಡಿರುವ ಪದಾಧಿಕಾರಿಗಳಿಗೆ ‘ವಿಸ್ತಾರಕ ಯೋಜನೆ’ಯಲ್ಲಿ ತೊಡಗಿಸಿಕೊಳ್ಳುವಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಮಂತ್ರಿಯಾದರೂ ಸರಿ, ಶಾಸಕರಾದರೂ ಸರಿ, ಅವರಿಗೆ ಗುರುತಿಸಿರುವ ಜಾಗದಲ್ಲಿ ಹೋಗಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನತೆಯಲ್ಲಿ ವಿವರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ನೆಲೆಸಬೇಕು. ಕೇಂದ್ರ ಸರಕಾರದ ಯೋಜನೆಗಳು ತಲುಪದಿದ್ದಲ್ಲಿ ಜನತೆಗೆ ಅದನ್ನು ತಲುಪಿಸುವ ಜವಾಬ್ದಾರಿ ಹೊರಬೇಕು.
ಪ್ರತಿನಿತ್ಯ ತಾವು ಮಾಡಿದ ಕೆಲಸಗಳ ವಿವರವನ್ನು ಕೇಂದ್ರ ಕಚೇರಿಗೆ ತಲುಪಿಸಬೇಕು. ಎಷ್ಟು ಜನರನ್ನು ಭೇಟಿ ಮಾಡಿದ್ದೇವೆ, ಅವರ ದೂರವಾಣಿ ಸಂಖ್ಯೆ ಏನು, ಅವರ ಕಷ್ಟವೇನು ಎಂದು ಲಿಖಿತ ರೂಪದಲ್ಲಿ ವಿವರಿಸಬೇಕು. ಜಿಲ್ಲೆಯಲ್ಲಿ ಕಾರ್ಯಕರ್ತರ ಕೆಲಸವನ್ನು ನಿಯಂತ್ರಿಸುತ್ತಿರುವವರು ಅವರ ಕಾರ್ಯನಿಷ್ಠೆಯನ್ನು ದಿಢೀರ್ ಆಗಿ ಪರಿಶೀಲಿಸುತ್ತಾರೆ. ಭೇಟಿ ಮಾಡಿದ್ದೇವೆಂದು ಮನೆಯವರಿಗೆ ದೂರವಾಣಿ ಕರೆ ಮಾಡಿ, ಕಾರ್ಯಕರ್ತರು ಬಂದ ಬಗ್ಗೆ ಖಚಿತ ಪಡಿಸಿಕೊಳ್ಳುತ್ತಾರೆ.
ವಿಸ್ತಾರಕರಾಗಿ ಕಾರ್ಯ ಮಾಡುವವರಿಗೆ ನಿರ್ಧಿಷ್ಟ ವೇಳಾಪಟ್ಟಿ ನೀಡಲಾಗಿದೆ. ತಾ. 1 ರಿಂದ ಈ ಕೆಲಸವೂ ಇಡೀ ದೇಶದಲ್ಲಿ ಪ್ರಾರಂಭಗೊಂಡಿದೆ. ಅದು ಬಿ.ಜೆ.ಪಿ.ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಯಾವದೋ ಒಂದು ಪುಟ್ಟ ಹಳ್ಳಿಯಲ್ಲಿ ಪಕ್ಷ ಸಂಘಟನೆಯಲ್ಲಿ ಜೋಡಣೆಯಾಗಿರುವ ಸಾಮಾನ್ಯ ಕಾರ್ಯಕರ್ತನಿಗೂ ಅನ್ವಯಿಸುತ್ತದೆ. ಆತ ಅಥವ ಆಕೆಯ ಕೆಲಸದ ದಿನಚರಿ ಹೀಗಿದೆ.
ತಾನು ನಿಯೋಜನೆಗೊಂಡಿರುವ ಕಾರ್ಯ ಕ್ಷೇತ್ರದಲ್ಲಿ ನಿತ್ಯ ಬೆಳಿಗ್ಗೆಯಿಂದ ಮುಸ್ಸಂಜೆಯೊಳಗೆ 25 ಮನೆಗಳನ್ನು ಸಂಪರ್ಕಿಸಬೇಕು. ಒಂದು ಮತಗಟ್ಟೆ ಕ್ಷೇತ್ರದಲ್ಲಿ ಈ ಕೆಲಸ ಮಾಡುತ್ತಾ, ಪಕ್ಷದ ತತ್ವ - ಸಿದ್ಧಾಂತಗಳು ಹಾಗೂ ಪ್ರಸಕ್ತ ಕೇಂದ್ರ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ, ಪ್ರತಿಯೊಬ್ಬರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು.
ಪಕ್ಷದ ಸಂಘಟನೆಗಾಗಿ ಈ ಮೂಲಕ ಪ್ರಯತ್ನಿಸುತ್ತಾ 18 ವರ್ಷ ಮೇಲ್ಪಟ್ಟು ಇದುವರೆಗೆ ರಾಜಕೀಯ ಸದಸ್ಯತ್ವ ಪಡೆಯದವರಿಂದ ಕನಿಷ್ಟ 50 ಸದಸ್ಯರನ್ನು ನೋಂದಾಯಿಸಬೇಕು. ಬಿ.ಜೆ.ಪಿ.ಯ ನಾಯಕರಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ತ್ಯಾಗ, ಬಲಿದಾನದ ಕುರಿತು ಜನತೆಗೆ ತಿಳಿಸುವ ಮೂಲಕ ಪ್ರಸಕ್ತ ಅವರ ಜನ್ಮಶತಾಬ್ಧಿ ವರ್ಷಾಚರಣೆಯನ್ನು ಅಲ್ಲಲ್ಲಿ ಆಚರಿಸುವಂತಾಗಬೇಕು.
ಶಾರೀರಿಕ ದೃಢತೆಗಾಗಿ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವದರೊಂದಿಗೆ ಇತರರಿಗೆ ಮಾದರಿ ಜೀವನಕ್ಕೆ ಪ್ರೇರಣೆ ನೀಡುವ ರೀತಿ ಕಾರ್ಯಕರ್ತರು ನಡೆದುಕೊಳ್ಳಬೇಕು.