ಸೋಮವಾರಪೇಟೆ, ಜು. 26: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮೀನು ಕೃಷಿಯನ್ನು ಲಾಭದಾಯಕ ವನ್ನಾಗಿಸಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.
ಮೀನುಗಾರಿಕಾ ಇಲಾಖೆ ವತಿಯಿಂದ ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮೀನು ಕೃಷಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೀನುಗಾರಿಕೆಯೂ ಸಹ ಲಾಭ ತಂದುಕೊಡುವ ವೃತ್ತಿಯಾಗಿದ್ದು, ಸೂಕ್ತ ರೀತಿಯಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಮಾಡಿಕೊಳ್ಳಬೇಕು. ಮೀನುಗಾರಿಕೆ ಸಂದರ್ಭ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಲಾಭದಾಯಕ ಸೀಗಡಿ ಕೃಷಿ ಕೈಗೊಳ್ಳಲು ಕೃಷಿಕರು ಮುಂದೆ ಬರಬೇಕು. ವಾತಾವರಣಕ್ಕೆ ಅನುಗುಣವಾದ ತಳಿಗಳನ್ನು ಬೆಳೆಸಬೇಕು ಎಂದರು. ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಹೊಳೆ, ನದಿ, ಕೆರೆಗಳಲ್ಲಿ ಡೈನಮೈಟ್ ಸಿಡಿಸಿ ಮೀನು ಹಿಡಿಯುವ ಪದ್ದತಿಯನ್ನು ಕೈಬಿಟ್ಟು, ಜಲಸಂಪನ್ಮೂಲಗಳ ಆರೋಗ್ಯ ರಕ್ಷಣೆಯತ್ತಲೂ ಗಮನಹರಿಸಬೇಕು ಎಂದರು.
ಜಿ.ಪಂ.ನ ಮತ್ತೋರ್ವ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ ಮೀನುಗಾರಿಕೆ ಇಲಾಖೆಯು ಕೃಷಿಕರಿಗೆ ಉತ್ತಮ ಸೇವೆ ಮತ್ತು ಮಾರ್ಗದರ್ಶನ ಒದಗಿಸುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾದರಿ ಕೃಷಿಕರಾದ ಅಕ್ವಾ ವೆಂಚರ್ನ ಬಬಿನ್ ಬೋಪಣ್ಣ ಕೃಷಿಕರಿಗೆ ಮೀನು ಕೃಷಿಕ ಬಗ್ಗೆ ಮಾಹಿತಿ ನೀಡಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದರ್ಶನ್ ಮೀನು ಮಾರಾಟಕ್ಕೆ ಸಹಾಯಧನ, ಮೀನು ಕೃಷಿ ಕೊಳ ನಿರ್ಮಾಣ, ಹರಿಗೋಲು ವಿತರಣೆ, ಅಲಂಕಾರಿಕಾ ಮೀನುಕೃಷಿ, ಮೀನು ಮರಿ ಖರೀದಿಗಳಿಗೆ ದೊರೆಯುವ ಸಹಾಯಧನಗಳ ಬಗ್ಗೆ ಮಾಹಿತಿ ನೀಡಿದರು. ಸೋಮವಾರಪೇಟೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮತ್ತು ಸಿಬ್ಬಂದಿ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯ ವಲಯ ಮತ್ತು ತಾ.ಪಂ. ವಿಶೇಷ ಘಟಕ ಯೋಜನೆಯಡಿ ಫಲಾನುಭವಿಗಳಿಗೆ ಬಲೆ, ಕ್ರೇಟ್ ಸೇರಿದಂತೆ ಇತರ ಸಲಕರಣೆಗಳನ್ನು ವಿತರಿಸಲಾಯಿತು.