ಮಡಿಕೇರಿ, ಜು. 26: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಸುಮಾರು 28 ಕಿ.ಮೀ. ದೂರವಿರುವ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಮುಟ್ಲು ಗ್ರಾಮ ಇತಿಹಾಸದ ಕುರಿತು ಸಂಶೋಧನೆಗೆ ಹೊರಡುವವರಿಗೂ ಸವಾಲಾದೀತು. ಕಾರಣ ಕೊಡಗಿನ ಇತರ ಎಲ್ಲಾ ಗ್ರಾಮಗಳಿಗಿಂತಲೂ ಈ ಮುಟ್ಲು ಭಿನ್ನ. ಈ ಗ್ರಾಮದಲ್ಲಿ ವಾಸವಿರುವ ಜನರು ತಾವೇ ನಿರ್ಮಿಸಿಕೊಂಡಿರುವ ವಾಸದ ಮನೆಗಳ ಹೊರತು ಇತ್ತೀಚಿನ ವರ್ಷಗಳ ತನಕ ಯಾವದೇ ಸಾರ್ವಜನಿಕ ಕಟ್ಟಡಗಳನ್ನು ಇಲ್ಲಿ ಕಾಣುವದು ಸಾಧ್ಯವಾಗಿಲ್ಲ.
ಈಚೆಗೆ ಆರೆಂಟು ವರ್ಷ ಹಿಂದೆ ಗ್ರಾಮದ ನಡುವೆ ನಿರ್ಮಾಣ ಗೊಂಡಿರುವ ಅಂಗನವಾಡಿ ಕಟ್ಟಡ ಹೊರತು ಇಂದಿಗೂ ಸಾರ್ವಜನಿಕ ಸ್ವತ್ತು, ಬೇರೇನೂ ನೋಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿದರೆ, ಅಲ್ಲೊಂದು ಶಾಲಾ ಕಟ್ಟಡ, ಊರಿಗೊಂದು ಅಥವ ಎರಡು - ಮೂರು ದೇವಾಲಯಗಳು ಸೇರಿದಂತೆ ಈಗಿನ ದಿನಗಳಲ್ಲಿ ಹೆಚ್ಚಿನ ಸಂಗತಿಗಳು ಗೋಚರಿಸಲಿವೆ.
ಮುಟ್ಲು ಗ್ರಾಮದಲ್ಲಿ ಇಂತಹ ಯಾವದೇ ಕುರುಹುಗಳು ಅಲಭ್ಯ. ಬದಲಾಗಿ ಗ್ರಾಮಸ್ಥರು ನಂಬಿಕೊಂಡು ಬಂದಿರುವ ಸಹಸ್ರಮಾನಗಳ ಇತಿಹಾಸದ ಶ್ರೀಮಂಜುನಾಥ ದೇವರು ಕೂಡ ನೆಲೆನಿಂತಿರುವ ಸಂಪಿಗೆ ಹೊಳೆ ತಟದ ಮರವೊಂದರಡಿ. ಇಂದಿಗೂ ಈ ದೇವರಿಗೆ ದೇವಾಲಯ ಇಲ್ಲದಿರುವದು ವಿಶೇಷ. ಕೊಡಗಿನ ಜೀವನ ಮೌಲ್ಯಗಳೊಂದಿಗೆ ಆಚಾರ - ವಿಚಾರ, ಪದ್ಧತಿ, ಪರಂಪರೆ ಮುಂದುವರೆಸಿಕೊಂಡು ಬಂದಿರುವ ಗ್ರಾಮಸ್ಥರು, ಕೃಷಿ ಅವಲಂಬಿತ ಬದುಕು ಕಂಡುಕೊಂಡಿದ್ದಾರೆ. ಭತ್ತ, ಸೊಪ್ಪು, ತರಕಾರಿ ಹೊರತು ಯಾವದೇ ವಾಣಿಜ್ಯ ಬೆಳೆಯನ್ನು ಇಂದಿಗೂ ಮುಟ್ಲುವಿನಲ್ಲಿ ಬೆಳೆಯಲು ಸಾಧ್ಯವಾಗಿಲ್ಲ.
ಇಲ್ಲಿ ಮುಖ್ಯವಾಗಿ ಚಿಲ್ಲಜಮ್ಮಾನ, ನಾಳಿಯಮ್ಮನ, ಉದಿಯಂಡ, ಪುದಿಯತ್ತಂಡ, ಮಿನ್ನಂಡ, ಬೊಟ್ಟೋಳಂಡ, ಓಡಿಯಂಡ ಕುಟುಂಬಗಳಿಗೆ ಸೇರಿದ ಒಂದಿಷ್ಟು ಮನೆ ಮಂದಿ ವಾಸವಿದ್ದಾರೆ. ಆಯ ಕುಟುಂಬಗಳಿಗೆ ಸಂಬಂಧಪಟ್ಟಂತೆ ವೀರಭದ್ರ, ಲಕ್ಷ್ಮೀ, ಕರಿಕೋಟ, ಪಾಷಾಣ ಮೂರ್ತಿಯಂತಹ ದೈವಗಳಿಗೆ ವಾರ್ಷಿಕ ಉತ್ಸವಗಳನ್ನು ಸಂಬಂಧಪಟ್ಟವರು ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನ ಹುತ್ತರಿ, ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ, ಮಹಾಶಿವರಾತ್ರಿ, ಯುಗಾದಿ ಮುಂತಾದ ಹಬ್ಬ ಹರಿದಿನಗಳು ಸಡಗರದಿಂದಲೇ ಆಚರಣೆಗೊಂಡರೂ ಸಾಮೂಹಿಕವಾಗಿ ನಡೆಸಲು ಇಲ್ಲಿ ದೇವಮಂದಿರ, ಗುಡಿಗೋಪುರಗಳು ಇಲ್ಲ. ಜನಸಂಖ್ಯೆ ಕೂಡ ಅಷ್ಟಕಷ್ಟೆ. ಇಂತಹ ಗ್ರಾಮವೊಂದರಲ್ಲಿ ಐತಿಹಾಸಿಕ ಹಿನ್ನೆಲೆ ಸೂಚಿಸುವ ವೀರಕಲ್ಲುಗಳು ಯಾವ ಕಾಲಮಾನದಲ್ಲಿ ಹಾಗೂ ಯಾವ ಉದ್ದೇಶದೊಂದಿಗೆ ಕೆತ್ತಲ್ಪಟ್ಟಿವೆ ಎನ್ನುವದು ಗ್ರಾಮಸ್ಥರಿಗಿರುವ ಅಚ್ಚರಿ. ಈ ಕುರಿತು ಇತಿಹಾಸಕಾರರು ಅಧ್ಯಯನ ನಡೆಸಿ ಹೆಚ್ಚಿನ ಬೆಳಕು ಚೆಲ್ಲಿದರೆ, ಭವಿಷ್ಯತ್ತಿನಲ್ಲಿ ಈ ವೀರಕಲ್ಲುಗಳಿಗೆ ಕಾಯಕಲ್ಪ ನೀಡಿ, ಯುವ ಪೀಳಿಗೆಗೂ ಇತಿಹಾಸದ ಅರಿವು ಮೂಡಿಸಲು ಸಾಧ್ಯವೆಂದು ಮುಟ್ಲು ನಿವಾಸಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.
- ಸಿ.ಎಸ್. ಪವನ್