ಚೆಟ್ಟಳ್ಳಿ, ಜು. 26: ಹಲವಾರು ವರ್ಷಗಳ ಹಿಂದೆ ಹಾರಂಗಿ ಜಲಾಶಯದ ಹತ್ತಿರವೇ ಪ್ರಾರಂಭವಾದ ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಕೊಡಗಿಗೆ ಯೋಗ್ಯವಾದ ಮೀನು ತಳಿಗಳನ್ನು ಅಭಿವೃದ್ಧಿಪಡಿಸಿ ಕೃಷಿಕರಿಗೆ ನೀಡಲಾಗುತ್ತಿದೆ. ಕೊಡಗಿನಲ್ಲಿ ಮೀನುಗಾರಿಕೆಯ ಅಭಿವೃದ್ಧಿಯಲ್ಲಿ ಮೀನುಗಾರಿಕೆ ಇಲಾಖೆಯ ಪಾತ್ರ ಹಿರಿಯದಾಗಿದ್ದು 1958ರಲ್ಲಿ ಮಡಿಕೇರಿಯಲ್ಲಿ ಪ್ರಾರಂಭವಾಗಿ 1987ರಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಶ್ರೇಣಿ 1 ಎಂದು ಬದಲಾಯಿಸಿ ಹಲವು ವರ್ಷಗಳ ನಂತರ ಶ್ರೇಣಿ 2ಕ್ಕೆ ಮೇಲ್ದರ್ಜೆಗೆ ಏರಿಸಲಾಗಿದೆ. ಹಾರಂಗಿ ಮೀನು ಉತ್ಪಾದನಾ ಕೇಂದ್ರದಲ್ಲಿ ಕೊಡಗಿಗೆ ಯೋಗ್ಯವಾದ ಕಾಟ್ಲ, ರೋವು, ಮ್ರಗಾಲ್, ಗ್ರಾಸ್‍ಕೋಪರ್ (ಹುಲ್ಲುಗೆಂಡೆ), ಕಾಮನ್‍ಕಾರ್ಪ್ (ಸಾಮಾನ್ಯಗೆಂಡೆ) ತಳಿಯ ಮೀನು ಮರಿಗಳನ್ನು ನೀರಿನ ಸಿಮೆಂಟ್ ಟ್ಯಾಂಕ್‍ಗಳಲ್ಲಿ ಉತ್ಪಾದಿಸಿ ಅವುಗಳು ಬೆರಳಿನ ಗಾತ್ರಕ್ಕೆ ಬೆಳೆದ್ದಾಗ ಮೀನು ಮರಿಗಳನ್ನು ಕೃಷಿಕರಿಗೆ ರಿಯಾತಿ ದರದಲ್ಲಿ ನೀಡಲಾಗುತ್ತಿದೆ.

ಪ್ರತೀ ವರ್ಷವೂ ಆಸಕ್ತ ಕೃಷಿಕರಿಂದ ಸರಕಾರವು ನಿಗದಿತ ದರದಲ್ಲಿ ಮೀನು ಮರಿಗಳನ್ನು ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು ಅರ್ಜಿ ಸಲ್ಲಿಸಿದ ಕೃಷಿಕರಿಗೆ ಮೀನುಮರಿಗಳನ್ನು ವಿತರಿಸುವ ಮೂಲಕ ಕೊಡಗಿನಲ್ಲಿ ಮೀನು ಕೃಷಿಗೆ ಪ್ರೋತ್ಸಾಹ ನೀಡುತಿದೆ. ಕೊಡಗಿನ ಹಲವು ಕೃಷಿಕರು ಭತ್ತ, ಕಾಫಿ, ಏಲಕ್ಕಿ, ಕರಿಮೆಣಸು, ಅಡಿಕೆ ಜೊತೆಗೆ ಕಡಿಮೆ ಬಂಡವಾಳದಿಂದ ಹೆಚ್ಚಿನ ಲಾಭ ಗಳಿಕೆಯ ಮೀನು ಕೃಷಿಯನ್ನು ತಮ್ಮ ಕೆರೆಕುಂಟೆಗಳಲ್ಲಿ ಬೆಳೆಸಿ ಕೃಷಿಯಲ್ಲಿ ತೊಡಗಿಸಿ ಕೊಂಡಿರುವಂತದ್ದು ಕಾಣಬರುತ್ತಿದೆ.

ಮಾರ್ಚ್‍ನಿಂದ ಏಪ್ರಿಲ್‍ವರೆಗೆ ಸಾಮಾನ್ಯ ಗೆಂಡೆಮೀನಿನ ಉತ್ಪಾದನೆಯನ್ನು ಜೂನ್ ತಿಂಗಳಿಂದ ಅಕ್ಟೋಬರ್‍ವರೆಗೆ ಕಾಟ್ಲ, ರೋವು, ಮ್ರಗಾಲ್, ಹುಲ್ಲುಗೆಂಡೆ ತಳಿಯನ್ನು ಪ್ರತೀ ವರ್ಷ ಕೇಂದ್ರದಲ್ಲಿ ಉತ್ಪಾದಿಸಲಾಗುತಿದ್ದು ಮೀನು ಮರಿಗಳು ಬೆಳೆವಣಿಗೆಯಾದ ನಂತರ ಟ್ಯಾಂಕುಗಳಿಗೆ ಸಣ್ಣಗಿನ ಬೀಸು ಬಲೆಗಳನ್ನು ಹಾಕಿ ನೀರಿಗೆ ಆಮ್ಲಜನಕವನ್ನು ತುಂಬಿದ ಪ್ಲಾಸ್ಟಿಕ್ ಕವರಿಗೆ ಮೀನಿನ ಮರಿಗಳನ್ನು ತುಂಬಿ ಕೃಷಿಕರಿಗೆ ನೀಡಲಾಗುವದು. ಜೊತೆಗೆ ಮೀನು ಸಾಕಣೆಯ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಹಾಗೂ ಮೀನುಗಾರಿಕಾ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಹಾರಂಗಿಯಲ್ಲಿ ಬೆಳೆಸಲಾಗುತ್ತಿರುವ ಮೀನು ಮರಿಗಳಿಗೆ ಪ್ರತೀ ವರ್ಷವೂ ಕೃಷಿಕರಿಂದ ಬೇಡಿಕೆಯಿದೆ ಎಂದು ನಿವೃತ್ತ ಫೀಲ್ಡ್‍ಮ್ಯಾನ್ ಶಿವ ಹೇಳುತ್ತಾರೆ.

ಮೀನು ಉತ್ಪಾದನಾ ಕೇಂದ್ರವನ್ನು ಉನ್ನತೀಕರಿಸಬೇಕಿದೆ

ಕೊಡಗಿನಲ್ಲಿ ಹಲವಾರು ವರ್ಷಗಳಿಂದ ಮೀನು ಕೃಷಿಗೆ ಮೀನು ಮರಿಗಳನ್ನು ವಿತರಿಸುತ್ತಿರುವ ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರವು ಹಳೆಯ ಮಾದರಿಯಲ್ಲಿದ್ದು ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಅಳವಡಿಕೆ ಯಾಗುತ್ತಿರುವಂತೆ ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರಕ್ಕೂ ಹೈಟೆಕ್ ಸ್ಪರ್ಶ ಬೇಕಿದೆ.