ಮಡಿಕೇರಿ, ಜು. 27 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ 2016 ಮತ್ತು 2017ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಡಾ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್, ಜೂ.29ರಂದು ನಡೆದ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಈ ಆರು ಮಂದಿಯನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಗೌರವ ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ತಲಾ 50 ಸಾವಿರ ರೂ.ನಗದು ಪುರಸ್ಕಾರ ಹಾಗೂ ಪ್ರಶಸ್ತಿಪತ್ರ ಮತ್ತು ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. ಆಗಸ್ಟ್ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವದು ಎಂದು ಹೇಳಿದರು.

ಅಕಾಡೆಮಿಯ 2016ನೇ ಸಾಲಿನ ಪ್ರಶಸ್ತಿಗೆ ಅರೆಭಾಷೆ ಜನಪದ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ

(ಮೊದಲ ಪುಟದಿಂದ) ಸಾಧನೆ ಮಾಡಿರುವ ಕೇಪು ಅಜಿಲ, ಅರೆಭಾಷೆ ಸಾಹಿತ್ಯ ಮತ್ತು ಕಲೆಯಲ್ಲಿ ಸಾಧನೆ ಮಾಡಿರುವ ಪಟ್ಟಡ ಪ್ರಭಾಕರ್, ಅರೆಭಾಷೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಮ್ಮಾಜಿರ ಪೊನ್ನಪ್ಪ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ 2017ರ ಪ್ರಶಸ್ತಿಗೆ ಅರೆಭಾಷೆ ಜನಪದ ಸಂಶೋಧನೆಯಲ್ಲಿ ಕೆಲಸ ಮಾಡಿರುವ ಡಾ. ಪುರುಷೋತ್ತಮ ಬಿಳಿಮಲೆ, ಅರೆಭಾಷೆ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಕುಲ್ಲಚನ ಕಾರ್ಯಪ್ಪ ಹಾಗೂ ಅರೆಭಾಷೆ ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಎಂ.ಜಿ.ಕಾವೇರಮ್ಮ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಸದಾನಂದ ಮಾವಾಜಿ, ಮಂದ್ರೀರ ಮೋಹನ್‍ದಾಸ್, ಕುಡೆಕಲ್ ಸಂತೋಷ್ ಹಾಗೂ ರಿಜಿಸ್ಟ್ರಾರ್ ಉಮರಬ್ಬ ಉಪಸ್ಥಿತರಿದ್ದರು.

ಸನ್ಮಾನಿತರ ಪರಿಚಯ

ಕೇಪು ಅಜಿಲ: ಸುಮಾರು 70 ವರ್ಷ ಪ್ರಾಯದ ಕೇಪು ಅಜಿಲ ಅವರು ಮಂಗಳೂರಿನ ಕೇಂದ್ರ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಸುಳ್ಯದಲ್ಲಿ ನೆಲೆಸಿದ್ದಾರೆ. ವಂಶ ಪಾರಂಪರ್ಯವಾಗಿ ಬಂದಿರುವ ಭೂತ ಕಟ್ಟುವ ಕಲೆಯನ್ನು ತಮ್ಮ 12ನೇ ವಯಸ್ಸಿನಿಂದಲೇ ಕರಗತ ಮಾಡಿಕೊಂಡಿರುವ ಇವರು ಭೂತಾರಾಧನೆಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ, ಅರೆಭಾಷಿಕರಿಂದ ಬಂಗಾರದ ಉಂಗುರ, ಕಡಗ ಮತ್ತು ಪಾರಿತೋಷಕಗಳನ್ನು ಪಡೆದಿದ್ದಾರೆ. ಯಕ್ಷಗಾನ ರಚನೆ, ಅದರಲ್ಲಿ ವೇಷ ಧರಿಸುವುದು, ಹರಿಕಥೆ ರಚನೆ, ಪದ್ಯ ರಚನೆ , ಕೀಲುಕುದುರೆ ನೃತ್ಯ , ಜಾನಪದ ಕುಣಿತಗಳಾದ ಆಟಿಕಳೆಂಜ, ಮಾದಿರ, ಸೋಣದ ಜೋಗಿ ಮುಂತಾದವಗಳನ್ನು ಮಾಡುವುದು ಇವರ ಹವ್ಯಾಸವಾಗಿದ್ದು, ತುಳು ಜಾನಪದ ಪಾಡ್ದನ, ಮಾಯೊದ ಜೋಕುಲು, ಪರಕೆ ಪಗರಿ, ಸಿರಿದೇವಿ, ಗಿರಿಬಾಲೆ ಎಂಬ ಯಕ್ಷಗಾನಗಳನ್ನು ರಚಿಸಿ ನಿರ್ದೇಶಿಸಿರುವ ಇವರು ಅರೆಭಾಷೆಯಲ್ಲಿ ಭಜನೆಯನ್ನೂ ಬರೆದಿದ್ದಾರೆ.

ಪಟ್ಟಡ ಪ್ರಭಾಕರ: ಪಟ್ಟಡ ಪ್ರಭಾಕರ್ ಅವರು ಮೂಲತಃ ಕೊಡಗಿನ ಆವಂದೂರು ಗ್ರಾಮದವರಾಗಿದ್ದು, ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ವಿಶ್ರಾಂತ ಜೀವನ ನಡೆಸುತ್ತಿರುವ ಇವರು, ಚಿಕ್ಕಪುಟ್ಟ ಬರಹಗಳಿಂದ ಪ್ರಾರಂಭಿಸಿ ಲೇಖನ, ವ್ಯಕ್ತಿಪರಿಚಯ, ಪತ್ರಿಕಾರಂಗ, ಸಾಹಿತ್ಯ, ಜನಸೇವೆ, ದೇಶಸೇವೆ ಬ್ಯಾಂಕಿಂಗ್ ಕ್ಷೇತ್ರ,ಕಲೆ, ಸಂಸ್ಕøತಿ,ಪರಿಸರ ಕಾಳಜಿ ಹೊಂದಿದ್ದಾರೆ. 1994ರಲ್ಲಿ ‘ನನ್ನ ಕನಸ್ಸಿನ ಮಡಿಕೇರಿ’ ಎಂಬ ಪ್ರವಾಸಿ ಕೃತಿಯನ್ನು ರಚಿಸಿರುವ ಇವರು 1997ರಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿರು ವಾಗಲೇ’ ಕೊಡಗು ಸಂಗಾತಿ’ ಎಂಬ ಪಾಕ್ಷಿಕವನ್ನು ಪ್ರಾರಂಭಿಸಿ ಸುಮಾರು 400ಕ್ಕೂ ಅಧಿಕ ಅರೆಭಾಷಿಕ ಲೇಖಕರನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಅಮ್ಮಾಜಿರ ಪೊನ್ನಪ್ಪ: ಇವರು ಕೂಡಾ ಆವಂದೂರು ಗ್ರಾಮದವ ರಾಗಿದ್ದು, ಪ್ರಸಕ್ತ ಬೆಂಗಳೂರಿನ ನೆಲಮಂಗಲದಲ್ಲಿ ಕಾವೇರಿ ನಾಡು ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಎಲ್‍ಕೆಜಿಯಿಂದ ಎಸ್‍ಎಸ್‍ಎಲ್‍ಸಿ ವರೆಗೆ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪೊನಿ ಧ್ವನಿ, ಮಲೆನಾಡ ಮಲ್ಲಿಗೆ, ಚೆಲುವ ನಾಡ ಐಸಿರಿ, ಕೊಡಗಿನ ವಾಲಗ ಕುಣಿತ, ಪುನರುತ್ಥಾನ ಎಂಬ ಧ್ವನಿಸುರುಳಿ, ಹಾಡುಗಳ ಸಿಡಿ ಮಾಡಿ ಪ್ರತಿ ಹಾಡುಗಳೂ ಅರೆಭಾಷೆ ಸಂಸ್ಕøತಿಯನ್ನು ಬಿಂಬಿಸುವ ಉತ್ತಮ ಧ್ವನಿಸುರುಳಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಇವರೇ ನೃತ್ಯ ಮಾಡುತ್ತಾ ಮಕ್ಕಳನ್ನು ಹುರಿದುಂಬಿಸಿ ಕಲಾತಂಡಗಳನ್ನು ರಚಿಸಿ ಹಲವಾರು ಕಡೆ ಅರೆಭಾಷೆ ಸಾಂಸ್ಕøತಿಕ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ. ಸುಮಾರು 108 ಹಾಡುಗಳನ್ನು ಮಹಿಳಾ ಒಕ್ಕೂಟದ ಮೂಲಕ ಧ್ವನಿಸುರುಳಿ ಮಾಡಿಸಿದ್ದು, ಪ್ರತಿದಿನ ಬೆಳಗಿನ ಸುಪ್ರಭಾತದ ಹಾಡುಗಳಾಗಿ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ. ಇವರು ಮಾಡಿಸಿರುವ ಸಿಡಿಯಲ್ಲಿ ಅರೆಭಾಷೆ ಹಾಡುಗಳು ಮತ್ತು ಇವರ ನೃತ್ಯ ಅರೆಭಾಷಿಕ ಯುವ ಜನರನ್ನು ಆಕರ್ಷಿಸುವಲ್ಲೂ ಯಶಸ್ವಿಯಾಗಿದೆ.

ಡಾ. ಪುರುಷೋತ್ತಮ ಬಿಳಿಮಲೆ : ಪುರುಷೋತ್ತಮ ಬಿಳಿಮಲೆ ಅವರು ಮದರಾಸ್ ವಿವಿಯಿಂದ ಕನ್ನಡದಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದು ಚಿನ್ನದ ಪದಕ ಗಳಿಸಿದವರಾಗಿದ್ದಾರೆ. ಸುಳ್ಯ ತಾಲೂಕಿನ ಪಂಜದವರಾದ ಇವರು ಪ್ರಸಕ್ತ ನವದೆಹಲಿಯಲ್ಲಿ ಜವಾಹರಲಾಲ್ ನೆಹರು ವಿವಿಯಲ್ಲಿ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅರೆಭಾಷೆಯ ಹಿರಿಯ ಸಂಶೋಧಕ ಮತ್ತು ಸಾಹಿತಿಯಾಗಿದ್ದು, 1984ರಲ್ಲಿ ತಮ್ಮ ಸಂಶೋಧನೆಗಾಗಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ.ಕನ್ನಡ ಸಾಹಿತ್ಯ ಸಂಶೋಧನೆ, ತುಳು ಸಂಸ್ಕøತಿ, ಅರಭಾಷೆ ಸಂಸ್ಕøತಿ, ಯಕ್ಷಗಾನ ಮತ್ತು ಜಾನಪದ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ. ಇವರು ಈಗಾಗಲೇ ಹಲವಾರು ಪ್ರಶಸ್ತಿ, ಸನ್ಮಾನಗಳಿಗೂ ಭಾಜನರಾಗಿದ್ದಾರೆ.

ಕುಲ್ಲಚನ ಕಾರ್ಯಪ್ಪ : 81 ವರ್ಷ ಪ್ರಾಯದ ಕುಲ್ಲಚನ ಕಾರ್ಯಪ್ಪ ಅವರು ನಿವೃತ್ತ ಶಿಕ್ಷಕರಾಗಿದ್ದು, ಕೊಡಗಿನ ಕುಂಬಳದಾಳು ಗ್ರಾಮದವರಾಗಿದ್ದಾರೆ. ಅರೆಭಾಷೆ ಹಿರಿಯ ಕವಿಗಳಾಗಿರುವ ಇವರು ಈಗಾಗಲೇ ಹಲವಾರು ಅರೆಭಾಷೆ ಚುಟುಕಗಳನ್ನು ರಚಿಸಿದ್ದು, ಪ್ರತಿಯೊಂದು ಚುಟುಕುಗಳೂ ಹಾಸ್ಯಮಯ ಮತ್ತು ಮನರಂಜನೀಯ ರೀತಿಯಲ್ಲಿ ಜನರ ಮನ ಗೆದ್ದಿವೆ. ಹಲವಾರು ಲೇಖನಗಳನ್ನೂ ಬರೆದಿರುವ ಇವರು, 1966ರಲ್ಲಿ ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ಹೊರತಂದ ಗೌಡ ಸಂಸ್ಕøತಿ ಸಂಚಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದು, ಇದು ಅರೆಭಾಷೆ ಜನಾಂಗದ ಪ್ರಥಮ ಅರೆಭಾಷೆ ಮತ್ತು ಕನ್ನಡದ ಸಂಚಿಕೆಯಾಗಿದೆ.

ಎಂ.ಜಿ.ಕಾವೇರಮ್ಮ: ಸುಳ್ಯದ ಮಾವಜಿ ಕುಟುಂಬದವರಾದ ಕಾವೇರಮ್ಮ ಅವರು ಚಿಕ್ಕ ವಯಸ್ಸಿನಲ್ಲೇ ಬರವಣಿಗೆಯನ್ನು ರೂಢಿಸಿಕೊಂಡು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿದ್ಯಾರ್ಥಿನಿಯಾಗಿದ್ದಾಗಲೆ ‘ಭಗಿನಿ’ ಎಂಬ ಕೈಬರಹದ ಮಾಸಪತ್ರಿಕೆಯನ್ನು ಹೊರತಂದಿದ್ದಾರೆ. ಹಲವು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಹೊರತಂದಿದ್ದಾರೆ.