ಸೋಮವಾರಪೇಟೆ,ಜು.28: ತಾಲೂಕು ಒಕ್ಕಲಿಗ ಯುವ ವೇದಿಕೆ ವತಿಯಿಂದ ತಾಲೂಕಿನ ಒಕ್ಕಲಿಗ ಜನಾಂಗ ಬಾಂಧವರಿಗೆ ತಾ. 29ರಂದು (ಇಂದು) ಗೌಡಳ್ಳಿ ಗ್ರಾಮದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ.

ಒಕ್ಕಲಿಗ ಜನಾಂಗ ಬಾಂಧವರಲ್ಲಿ ಪರಸ್ಪರ ಸಾಮರಸ್ಯ, ಕ್ರೀಡಾ ಮನೋಭಾವನೆ ಮೂಡಿಸುವ ದರೊಂದಿಗೆ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದ 4ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಜೆ. ದೀಪಕ್ ತಿಳಿಸಿದ್ದಾರೆ.

ಸುಳಿಮಳ್ತೆ ಗ್ರಾಮದ ದಿ. ಎಸ್.ಪಿ. ಪುಟ್ಟಸ್ವಾಮಿ ಮತ್ತು ಪಾರ್ವತಮ್ಮ ಸ್ಮರಣಾರ್ಥ ಗೌಡಳ್ಳಿ ಗ್ರಾಮದಲ್ಲಿರುವ ಗದ್ದೆಯಲ್ಲಿ ಕ್ರೀಡಾಕೂಟ ಆಯೋಜಿಸ ಲಾಗಿದ್ದು, ಒಕ್ಕಲಿಗ ಜನಾಂಗದ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ, ಕೆಸರುಗದ್ದೆ ಓಟದೊಂದಿಗೆ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಇತರ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಕ್ರೀಡಾಕೂಟದಲ್ಲಿ ವಿಜೇತ ರಾದವರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುವದು. ಕ್ರೀಡಾಕೂಟದ ಉದ್ಘಾಟನೆ ಬೆಳಿಗ್ಗೆ 9 ಗಂಟೆಗೆ ನಡೆಯಲಿದ್ದು, ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ ಅವರುಗಳು ಭಾಗವಹಿಸಲಿದ್ದಾರೆ.

ಕ್ರೀಡಾಕೂಟದಲ್ಲಿ ಒಕ್ಕಲಿಗ ಜನಾಂಗ ಬಾಂಧವರು ಪಾಲ್ಗೊಳ್ಳ ಬಹುದಾಗಿದೆ ಎಂದು ದೀಪಕ್ ತಿಳಿಸಿದ್ದಾರೆ.