ಗೋಣಿಕೊಪ್ಪಲು, ಜು. 28: ರಾತ್ರಿ ವೇಳೆ ಗ್ರಾಮಕ್ಕೆ ನುಸುಳಿ ಮುಂಜಾನೆ ಅರಣ್ಯ ಸೇರುವ ಸುಮಾರು 14 ಆನೆಗಳ ಹಿಂಡು ತಿತಿಮತಿ ಆರ್‍ಆರ್‍ಟಿ ಪಡೆಯ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ.

ನೊಕ್ಯಾ ಗ್ರಾಮದ ಎಡತೊರೆ ಎಂಬಲ್ಲಿ ದಿನಂಪತ್ರಿ ಮರಿಗಳೊಂದಿಗೆ ಗ್ರಾಮಕ್ಕೆ ದಾಳಿ ಇಡುತ್ತಿದ್ದ ಆನೆಗಳನ್ನು ಪತ್ತೆ ಹಚ್ಚಿರುವ ತಂಡ ಆನೆ ನುಸುಳುವ ಜಾಗದಲ್ಲಿ ಕಂದಕ ತೆಗೆದು ಗ್ರಾಮಕ್ಕೆ ಬಾರದಂತೆ ಕ್ರಮಕೈಗೊಳ್ಳಲು ಮುಂದಾಗಿದೆ.

ಸ್ಥಳೀಯರ ಮಾಹಿತಿಯಂತೆ ಶುಕ್ರವಾರ ಮುಂಜಾನೆ 5 ಗಂಟೆಯಿಂದ ಕ್ಷಿಪ್ರ ಕಾರ್ಯಪಡೆ ತಂಡವು ನೊಕ್ಯಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿತು. ರಾತ್ರಿ ಗ್ರಾಮದ ತೋಟಗಳಿಗೆ ಬಂದಿದ್ದ ಆನೆಗಳ ಹಿಂಡು ಮುಂಜಾನೆ 5.30 ಸುಮಾರಿಗೆ ಕಾಡಿನತ್ತ ತೆರಳುತ್ತಿದ್ದಾಗ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲಾಯಿತು. ಸಾಮಾನ್ಯವಾಗಿ ಬಂದು ಹೋಗುತ್ತಿದ್ದ ಆನೆಗಳಿಗೆ ಅನಿರೀಕ್ಷಿತ ಕಾರ್ಯಚರಣೆ ಗಾಬರಿಗೊಳ್ಳುವಂತೆ ಮಾಡಿದೆ. ಅರಣ್ಯಕ್ಕೆ ತೆರಳುತ್ತಿದ್ದ ದಾರಿಯನ್ನು ಕೂಡ ಮುಚ್ಚಿದ್ದರಿಂದ ಗಾಬರಿಗೊಂಡು ಆನೆಗಳು ಪರದಾಡಿ, ಬೇರೆ ಮಾರ್ಗದ ಮೂಲಕ ಅರಣ್ಯಕ್ಕೆ ಸೇರಿಸಲಾಯಿತು.

ಕಾರ್ಯಾಚರಣೆ ವೇಳೆ ಆರ್‍ಆರ್‍ಟಿ ತಂಡವು ಒಂಟಿ ಸಲಗದಿಂದ ಪರಾಗಿದೆ. ಹಿಂಡಿನ ಮೂಲಕ ಬಂದ ಆನೆಗಳನ್ನು ಹಿಂಬದಿ ಮೂಲಕ ಪಟಾಕಿ ಸಿಡಿಸಿ ಕಾಡಿಗೆ ಅಟ್ಟುವ ಸಂದರ್ಭ ತಡವಾಗಿ ಬಂದ ಒಂಟಿ ಸಲಗವೊಂದು ಅಪಾಯದ ಸೂಚನೆ ನೀಡಿತು. ದೊಡ್ಡ ಮರದ ಹಿಂದೆ ತಂಡದ ಸದಸ್ಯರು ಅವಿತುಕೊಂಡಿದ್ದರಿಂದ ಆನೆ ಹಿಂಡು ಸೇರಿಕೊಂಡು ಅರಣ್ಯ ಸೇರಿತು ಎಂದು ತಂಡದ ಸದಸ್ಯರು ಅನುಭವ ಹಂಚಿಕೊಂಡರು. ಸುಮಾರು ಒಂದು ಗಂಟೆÀ ಕಾಲ ಕಾರ್ಯಾಚರಣೆ ನಡೆಯಿತು.

ಕಾರ್ಯಾಚರಣೆ ಸಂದರ್ಭ ಆರ್‍ಆರ್‍ಟಿ ಪಡೆಯ ಸಂಜು, ರಾಜು, ಸುರೇಶ್, ಮೋಹನ್, ದಿನೇಶ್ ಹಾಗೂ ಜೆ ಆರ್ ಸುರೇಶ್ ಪಾಲ್ಗೊಂಡಿದ್ದರು.