ಕೂಡಿಗೆ, ಜು. 28: ಸಮೀಪದ ಹುಲುಗುಂದ (ಹಾರಂಗಿ) ಮಹಿಳಾ ಸಮಾಜದ ಸಭಾಂಗಣದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿರವರ ಅಧ್ಯಕ್ಷತೆಯಲ್ಲಿ ನಡೆದ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಯ ಗ್ರಾಮಸಭೆಯಲ್ಲಿ ತೋಟಗಾರಿಕ ಇಲಾಖೆ ಮತ್ತು ಆಹಾರ ಇಲಾಖೆಯ ವಿಷಯದ ಬಗ್ಗೆ ಪರ ವಿರುದ್ಧದ ಚರ್ಚೆಯೇ ನಡೆಯಿತು.
ಇಲಾಖೆಯ ಅಧಿಕಾರಿಗಳು ಪರಿಚಯ ಮಾಡಿಕೊಂಡು ತೋಟ ಗಾರಿಕಾ ಇಲಾಖೆಯ ಹಾರಂಗಿ ಕ್ಷೇತ್ರದ ಅಧಿಕಾರಿ ತೋಟಗಾರಿಕೆ ವಿಷಯವಾಗಿ ಮಾಹಿತಿ ನೀಡುತ್ತಿದ್ದ ಸಂದರ್ಭ ತೋಟಗಾರಿಕಾ ಇಲಾಖೆಯ ವತಿಯಿಂದ ರೂ. 26 ಲಕ್ಷ ಹಣ ವಿನಿಯೋಗಿಸಿ ಹಾರಂಗಿಯ ತೋಟಗಾರಿಕಾ ಕೃಷಿ ಕ್ಷೇತ್ರದಲ್ಲಿ ಕಾಮಗಾರಿ ಕೈಗೊಂಡಿದ್ದೀರಿ. ಆದರೆ ತೆಂಗಿನ ತೋಟದಲ್ಲಿ ಒಂದೂ ತೆಂಗಿನ ಮರಗಳ ಬೆಳವಣಿಗೆ ಕಾಣುತ್ತಿಲ್ಲ. ಆನೆ ದಾಟದ ಹಾಗೆ ಕಂದಕಗಳನ್ನು ತೋಡುವದ ಕಾರ್ಯಕ್ಕೆ ಹಣವನ್ನು ವ್ಯಯ ಮಾಡಿದ್ದೀರಿ. ಈ ತೆಂಗಿನ ತೋಟ ಹಾರಂಗಿ ಅಣೆಕಟ್ಟೆಯ ಸಮೀಪದಲ್ಲೇ ಇದ್ದು, ಹಾರಂಗಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿರುವ ಕಾಡಾನೆಗಳು ಈ ತೋಟಗಳಿಗೆ ನುಗ್ಗಿ ದಿನಂಪ್ರತಿ ತೆಂಗಿನ ಮರಗಳನ್ನು ಹಾಳು ಮಾಡುತ್ತಿವೆ. ಇವುಗಳನ್ನು ರಕ್ಷಣೆ ಮಾಡಲು ಇಲಾಖೆಯ ವತಿಯಿಂದ ತೋಟಗಾರಿಕಾ ಇಲಾಖೆಗೆ ಹಣ ಬಿಡುಗಡೆಯಾಗಿದೆ. ಈ ಹಣವನ್ನು ಮನಬಂದಂತೆ ಅಧಿಕಾರಿ ವಿನಿಯೋಗಿ ಸಿದ್ದಾರೆ ಎಂದು ಕೂಡುಮಂಗಳೂರು ಗ್ರಾಮದ ಬಿಜೆಪಿ ಯುವ ಮೋರ್ಚಾದ ಶಶಿಕಿರಣ್, ಸ್ಥಳೀಯರು ಆರೋಪಿಸಿದರು.
ಇದಕ್ಕುತ್ತರಿಸಿದ ತೋಟಗಾರಿಕಾ ಇಲಾಖೆಯ ಅಧಿಕಾರಿ ಕಾಡಾನೆಗಳನ್ನು ಕಟ್ಟಿಹಾಕಲು ಸಾಧ್ಯವೇ ಎನ್ನುತ್ತಿದ್ದಂತೆ ಸಭೆಯಲ್ಲಿ ಮಾತಿಗೆ ಮಾತು ಪ್ರಾರಂಭವಾಗಿ ಗದ್ದಲವೇರ್ಪಟ್ಟಿತು. ನಂತರ ಅಧಿಕಾರಿ ಮುಂದಿನ ದಿನಗಳಲ್ಲಿ ಕಾಮಗಾರಿಯ ವಿಷಯವನ್ನು ಸಮರ್ಪಕವಾಗಿ ತಿಳಿಸುವದರ ಬಗ್ಗೆ ಮಾಹಿತಿ ನೀಡಿದರು.
ನಂತರ ಸಭೆಯಲ್ಲಿ ನೂರಾರು ಗ್ರಾಮಸ್ಥರು ಪ್ರಮುಖವಾಗಿ ಈ ಗ್ರಾಮಸಭೆಗೆ ಆಹಾರ ಇಲಾಖೆಯ ಅಧಿಕಾರಿ ಬರಬೇಕೆಂದು ಒತ್ತಾಯಿಸಿದರು. ಆಹಾರ ಇಲಾಖೆಯ ಅಧಿಕಾರಿ ಕಾರ್ಯನಿಮಿತ್ತ ತಡವಾಗಿ ಸಭೆಗೆ ಬಂದಾಗ ಪಡಿತರ ಚೀಟಿ ವ್ಯವಸ್ಥೆ ಹಾಗೂ ಪಡಿತರ ವಸ್ತುಗಳ ಬಗ್ಗೆ ಆಯಾ ಆಯಾ ಗ್ರಾಮಗಳಲ್ಲಿ ತೆರೆದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ವಿತರಣೆಯಾಗದ ಬಗ್ಗೆ ಮತ್ತು ಕಳೆದ ಎರಡು ತಿಂಗಳುಗಳಿಂದ ಗ್ರಾಮೀಣ ಭಾಗದ ಜನರಿಗೆ ಸೀಮೆಎಣ್ಣೆಯನ್ನು ತಡೆಹಿಡಿಯಲು ಕಾರಣವೇನು ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮಂಜುನಾಥ್ಗುರುಲಿಂಗಪ್ಪ, ರೇವಣ್ಣ, ಕುಮಾರ್, ಗಣೇಶ್ ಸಮರ್ಪಕ ಮಾಹಿತಿ ನೀಡುವಂತೆ ಆಹಾರ ಇಲಾಖೆಯ ಅಧಿಕಾರಿಯ ಮೇಲೆ ಹರಿಹಾಯ್ದರು.
ಇದಕ್ಕುತ್ತರಿಸಿದ ಸೋಮವಾರ ಪೇಟೆ ತಾಲೂಕು ಆಹಾರ ನಿರೀಕ್ಷಕ ಅಧಿಕಾರಿ ರಾಜಣ್ಣ, ಸರಕಾರದ ನಿಯಮನುಸಾರ ಆಯಾ ಗ್ರಾಮಗಳಲ್ಲಿ ಕುಟುಂಬಗಳ ಜನಸಂಖ್ಯೆಯ ಆಧಾರದ ಮೇಲೆ ಪಡಿತರ ಚೀಟಿ ಯನ್ನು ನೀಡಲಾಗಿದೆ. ಇದರನ್ವಯ 300 ರಿಂದ 500 ಪಡಿತರ ಚೀಟಿಗಳಿಗೆ ಒಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಲಾಗಿದೆ. ಆಯಾ ನ್ಯಾಯಬೆಲೆ ಅಂಗಡಿಯವರು ಪಡಿತರದಾರರಿಗೆ ನಿಯಮಾನುಸಾರ ವಿತರಿಸಲು ಸೂಚನೆ ನೀಡಲಾಗಿದೆ. ಇದರಂತೆ ಪಡಿತರ ಚೀಟಿದಾರರು ಆಹಾರ ವಸ್ತುಗಳನ್ನು ಪಡೆದು ಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಗಳಲ್ಲಿ ಸರ್ಕಾರದ ನಿಯಮದನುಗುಣವಾಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳುವದು ಮುಖ್ಯ.
ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ವಾಸವಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಕೊಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ವಿಷಯಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಣ್ಣಪ್ಪ ಉತ್ತರಿಸುತ್ತಾ, ಈ ವಿಚಾರವು ರಾಜ್ಯ ಮಟ್ಟಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದು, ಕಂದಾಯ ಇಲಾಖೆಯವರು ಕಂದಾಯ ಜಾಗವನ್ನು ಗುರುತಿಸಿ ಇವರುಗಳಿಗೆ ನಿವೇಶನಗಳನ್ನು ಒದಗಿಸುವದರಲ್ಲಿ ಮುಂದಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗುವದು ಎಂದು ಹೇಳಿದರು.
ಸಭೆಯಲ್ಲಿ ಅಣೆಕಟ್ಟೆಯ ನಿರ್ವಹಣೆ, ಶುಚಿತ್ವ ಹಾಗೂ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮಿ ಮಾತನಾಡಿ, ಗ್ರಾಮ ಸಭೆಯಲ್ಲಿ ಚರ್ಚೆಯಾದ ಎಲ್ಲಾ ವಿಚಾರಗಳನ್ನು ನೋಂದಣಿ ಮಾಡಲಾಗಿದ್ದು, ಇವುಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರವ್ಯವಹಾರ ನಡೆಸಲಾಗುವದು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಭೆಯಲ್ಲಿ ತಿಳಿಸಿದರು.
ಗ್ರಾಮಸಭೆಯಲ್ಲಿ ಜಿ.ಪಂ. ಸದಸ್ಯೆ ಮಂಜುಳಾ, ತಾ.ಪಂ. ಸದಸ್ಯ ಗಣೇಶ್, ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಸೇರಿದಂತೆ ಸದಸ್ಯರುಗಳು ಇದ್ದರು. ನೋಡಲ್ ಅಧಿಕಾರಿಯಾಗಿ ತಾಲೂಕು ಪಂಚಾಯಿತಿ ಅಧಿಕಾರಿ ಸುನೀಲ್ ಕಾರ್ಯನಿರ್ವಹಿಸಿದರು.