ಗುಡ್ಡೆಹೊಸೂರು, ಜು. 28: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೋಳೆ ಜಲಾಶಯವು ಭರ್ತಿಯಾಗಿ ಹೇಚ್ಚುವರಿ ನೀರು ಕಾವೇರಿ ನದಿ ಸೇರುತ್ತಿದೆ. ಜಿಲ್ಲೆಯ ಎರಡನೆಯ ಪುಟ್ಟ ಜಲಾಶಯವಾದ ಈ ಜಲಾಶಯ ದಿಂದ ನಾಲಾ ವ್ಯಾಪ್ತಿಯ ಒಟ್ಟು 15 ಗ್ರಾಮಗಳಿಗೆ ಗದ್ದೆ ವ್ಯವಸಾಯಕ್ಕೆ ನೀರು ಪೂರೈಸಬೇಕಾಗಿದೆ. ಮಳೆ ಕೊರತೆಯ ನಡುವೆಯೂ ಜಲಾಶಯ ಭರ್ತಿಯಾಗಿದೆ. ಈ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡು ಇದೀಗ ಜಲಾಶಯದತ್ತ ಬರುತ್ತಿದೆ. ನಾಲಾ ವ್ಯಾಪ್ತಿಯ ಎಡದಂಡೆಯ ರಂಗಸಮುದ್ರ, ಬಾಳುಗೋಡು, ಬೆಟ್ಟಗೇರಿ, ಬಸವನಹಳ್ಳಿ, ಮಾದಪಟ್ಟಣ, ಗೊಂದಿಬಸವನಹಳ್ಳಿ, ಈ ಗ್ರಾಮಗಳಿಗೆ ನಾಟಿ ಕಾರ್ಯಕ್ಕೆ ನೀರು ಪೂರೈಸಬೇಕಾಗಿದೆ. ಅದೇ ರೀತಿ ಬಲದಂಡೆ ನಾಲಾ ವ್ಯಾಪ್ತಿಯ ಹೊಸಪಟ್ಟಣ, ನಂಜರಾಯಪಟ್ಟಣ, ರಂಗಸಮುದ್ರ ಗ್ರಾಮಗಳ ರೈತರು ಈ ನೀರನ್ನೇ ಅವಲಂಭಿಸಿದ್ದಾರೆ. ಸಸಿಮಡಿ ತಯಾರಿಸಿಕೊಂಡು ಈ ವಿಭಾಗದ ರೈತರು ಗದ್ದೆ ನಾಟಿ ಕಾರ್ಯಕ್ಕೆ ನೀರಿಗಾಗಿ ಕಾಯುತ್ತಿದ್ದಾರೆ. ತಕ್ಷಣದಿಂದಲೇ ನಾಲೆಗಳಿಗೆ ನೀರನ್ನು ಹರಿಸುವಂತೆ ಅಲ್ಲಿನ ರೈತರು ನೀರಾವರಿ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

- ಗಣೇಶ್ ಕುಡೆಕಲ್