ಮಡಿಕೇರಿ, ಜು. 27: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಒತ್ತಿನ ಮದ್ಯದಂಗಡಿ ಹಾಗೂ ಬಾರ್‍ಗಳನ್ನು ಸ್ಥಳಾಂತರಗೊಳಿಸಬೇಕೆಂಬ ಸುಪ್ರೀಂಕೋರ್ಟ್‍ನ ನಿರ್ದೇಶನ ಜಾರಿಯಾದ ಬಳಿಕ ಕೊಡಗು ಜಿಲ್ಲೆಯಲ್ಲಿ ಒಟ್ಟು 218 ವಿವಿಧ ಪರವಾನಗಿಯ ಪೈಕಿ ಕೇವಲ 107 ಪರವಾನಗಿ ಮಾತ್ರ ನವೀಕರಣಗೊಂಡಿದೆ. ಕೊಡಗು ಜಿಲ್ಲೆ ಮದ್ಯ ಬಳಕೆಯ ವಿಚಾರದಲ್ಲಿ ರಾಜ್ಯದ ಇತರೆಡೆಗಳಿಗಿಂತ ವಿಶೇಷವಾಗಿ ಗುರುತಿಸಿಕೊಂಡಿರುವದು ಎಲ್ಲರಿಗೂ ತಿಳಿದ ವಿಚಾರ. ಜಿಲ್ಲೆಯಲ್ಲಿ ಸಂಸ್ಕøತಿಯ ಒಂದು ಭಾಗವಾಗಿಯೂ ಮದ್ಯ ಬಳಕೆ ವಿಶೇಷವಾಗಿದೆ. ಜಿಲ್ಲೆಯಲ್ಲಿನ ಬಹುತೇಕ ಸಮಾರಂಭಗಳು ಮಾತ್ರವಲ್ಲದೆ ಧಾರ್ಮಿಕ ವಿಚಾರಗಳಲ್ಲೂ ಮದ್ಯ ಬಳಕೆ ಸರ್ವೇ ಸಾಮಾನ್ಯ. ಆದರೆ ಜುಲೈ 1ರಿಂದ ಸುಪ್ರೀಂಕೋರ್ಟ್‍ನ ನಿರ್ದೇಶನ ಜಾರಿಗೆ ಬಂದ ಬಳಿಕ ಮದ್ಯಪ್ರಿಯರು ಪರದಾಡುವಂತಾಗಿದ್ದರೆ ಈ ಉದ್ಯಮವನ್ನು ನಡೆಸುತ್ತಿದ್ದ ಮಾಲೀಕರು ಮುಂದೇನು ಎಂದು ಒದ್ದಾಡುತ್ತಿದ್ದಾರೆ. ಇದರೊಟ್ಟಿಗೆ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಹಲವಾರು ಅವಲಂಬಿತರು ಅತಂತ್ರರಾಗಿದ್ದಾರೆ. ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿ ಮಾತ್ರ ಡಿನೋಟಿಫೈ ಮಾಡಿ ಸರಕಾರ ತೀರ್ಮಾನ ಕೈಗೊಂಡಿದೆ. ಉಳಿದಂತೆ ಹೆದ್ದಾರಿಯಲ್ಲಿ 500 ಮೀಟರ್ ಹಾಗೂ 220 ಮೀಟರ್ ಅಂತರದಲ್ಲಿನ ಎಲ್ಲಾ ಮದ್ಯದಂಗಡಿ ಸ್ಥಳಾಂತರ ಅನಿವಾರ್ಯವಾಗಿದೆ. ಕೊಡಗು ಜಿಲ್ಲೆ ಒಂದು ನಗರಸಭೆ ಹಾಗೂ ಮೂರು ಪಟ್ಟಣ ಪಂಚಾಯಿತಿಗಳನ್ನು ಮಾತ್ರ ಒಳಗೊಂಡಿದೆ. ಇದರಲ್ಲೂ ಉಳಿದುಕೊಂಡಿರುವದು ಸೋಮವಾರಪೇಟೆ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾತ್ರ. ಕುಶಾಲನಗರ ಪಟ್ಟಣ ಪಂಚಾಯಿತಿಯಾಗಿದ್ದರೂ, ರಾಷ್ಟ್ರೀಯ ಹೆದ್ದಾರಿ ಯಾಗಿರುವದರಿಂದ ಡಿನೋಟಿಫೈಯ (ಭಾಗ್ಯ) ದೊರೆತಿಲ್ಲ.

(ಮೊದಲ ಪುಟದಿಂದ) ಮಡಿಕೇರಿ ನಗರದಲ್ಲಿ ಸುದರ್ಶನ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತ ವ್ಯಾಪ್ತಿಯಲ್ಲಿನ 12 ಪರವಾನಗಿಗಳು ನವೀಕರಣಗೊಂಡಿಲ್ಲ. ಇನ್ನು ಉಳಿದ ಬಹುತೇಕ ಪರವಾನಗಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಹೆದ್ದಾರಿಯ ಸಂಕಟ ಅನುಭವಿಸುವಂತಾಗಿದೆ. ಅದರಲ್ಲೂ ಜಿಲ್ಲೆ ಗ್ರಾಮೀಣ ಪ್ರದೇಶದಂತಿದ್ದು, ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಅಗತ್ಯ ಸೌಲಭ್ಯಗಳಿಲ್ಲ. ಕುಟ್ಟ, ಬಿರುನಾಣಿಯಂತಹ ಗಡಿಭಾಗದ ಜನ ಮದ್ಯ ಬೇಕೆಂದರೆ 50 ಕಿ.ಮೀ. ದೂರದ ವೀರಾಜಪೇಟೆಯನ್ನು ಅವಲಂಬಿಸಬೇಕಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ಸಣ್ಣ ಪಟ್ಟಣಗಳು ಮಾತ್ರ ಇದ್ದು, ಇಲ್ಲಿ ಒಂದಷ್ಟು ಮದ್ಯದಂಗಡಿಗಳಿದ್ದವು. ಆದರೆ ಇದೀಗ ನಿಯಮಾನುಸಾರ ಎಲ್ಲವೂ ಬಂದ್ ಆಗಿವೆ. ಸ್ಥಳಾಂತರ ಮಾಡುವ ಅವಕಾಶವಿದೆಯಾದರೂ ಸೂಕ್ತ ಜಾಗ ಲಭ್ಯವಾಗುತ್ತಿಲ್ಲ. ಒಂದೋ ಕಾಫಿ ತೋಟ, ಅರಣ್ಯ ಅಥವಾ ಭೌಗೋಳಿಕ ಲಕ್ಷಣದ ಪರಿಸ್ಥಿತಿಯಿಂದ ಇದಕ್ಕೂ ಅಡಚಣೆಯಾಗಿದೆ.

111 ಮಾತ್ರ ನವೀಕರಣ

ಜಿಲ್ಲೆಯಲ್ಲಿ ಒಟ್ಟು 218 ಪರವಾನಗಿ ಇದ್ದು, ಈ ಪೈಕಿ ಹೆದ್ದಾರಿಯ ಸಮಸ್ಯೆ ಇಲ್ಲದೆ 19 ಕ್ಲಬ್‍ಗಳು ಸೇರಿ 99 ಪರವಾನಗಿ ನವೀಕರಣಗೊಂಡಿತ್ತು. ಇದೀಗ 8 ಪರವಾನಗಿ ಮಾತ್ರ ಸ್ಥಳಾಂತರ ವಾಗಿದ್ದು, ಇದು ಸೇರಿದಂತೆ ಒಟ್ಟು 107 ಪರವಾನಗಿ ಚಾಲ್ತಿಯಲ್ಲಿದೆ. ಮಡಿಕೇರಿ ತಾಲೂಕಿನಲ್ಲಿ 35, ಸೋಮವಾರಪೇಟೆ ತಾಲೂಕಿನಲ್ಲಿ 28, ವೀರಾಜಪೇಟೆ ತಾಲೂಕಿನಲ್ಲಿ 36 ಪರವಾನಗಿ ನವೀಕರಣಗೊಂಡಿದೆ. ಮಡಿಕೇರಿ ತಾಲೂಕಿನಲ್ಲಿ 20, ಸೋಮವಾರಪೇಟೆ ತಾಲೂಕಿನಲ್ಲಿ 48 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 43 ಪರವಾನಗಿ ಸೇರಿ ಒಟ್ಟು 111 ಪರವಾನಗಿ ಇನ್ನು ಸ್ಥಳಾಂತರಗೊಂಡು ನವೀಕರಣ ವಾಗಬೇಕಿದೆ. ಆದರೆ ಸೂಕ್ತ ಜಾಗ ಲಭ್ಯವಾಗದೆ ಮಾಲೀಕರು ಪರದಾಡುತ್ತಿದ್ದಾರೆ.

ಗುಡ್ಡಗಾಡು ಪ್ರದೇಶ ಪರಿಗಣನೆಗೆ ಯತ್ನ

ಪರವಾನಗಿ ನವೀಕರಣ ವಾಗದಿರುವ ಮಾಲೀಕರು ಇದೀಗ ಮತ್ತೆ ಸುಪ್ರೀಂಕೋರ್ಟ್‍ನ ಮೊರೆ ಹೋಗಲು ಪ್ರಯತ್ನ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ವಾತಾವರಣವೂ ವಿಭಿನ್ನವಾಗಿದೆ. ಮೇಘಾಲಯ, ಸಿಕ್ಕಿಂ, ಅಂಡಮಾನ್ ನಿಕೋಬಾರ್ ಪ್ರದೇಶಕ್ಕೆ ಗುಡ್ಡಗಾಡು ಪ್ರದೇಶದ ಪರಿಗಣನೆಯಂತೆ ವಿನಾಯಿತಿ ನೀಡಲಾಗಿದ್ದು, ಕೊಡಗು ಜಿಲ್ಲೆಗೂ ಈ ವಿನಾಯಿತಿ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ನ್ಯಾಯಾಲಯದ ಕದ ತಟ್ಟಲು ತೀರ್ಮಾನಿಸಲಾಗಿದೆ. ಖ್ಯಾತ ವಕೀಲ ಸಜನ್ ಪೂವಯ್ಯ ಅವರ ಮೂಲಕ ಈ ಬಗ್ಗೆ ಪ್ರಯತ್ನ ನಡೆಸಲು ನಿರ್ಧರಿಸಲಾಗಿದ್ದು, ತಾ. 28ರಂದು (ಇಂದು) ವಕೀಲರೊಂದಿಗೆ ಚರ್ಚೆ ನಡೆಸಲು ಕೆಲವರು ಬೆಂಗಳೂರಿಗೆ ತೆರಳುತ್ತಿದ್ದಾರೆ.

ಸ್ಥಳಾಂತರಕ್ಕೂ ವಿಘ್ನ

ಕೆಲವು ಮಾಲೀಕರು ಸ್ಥಳಾಂತರಕ್ಕೆ ಜಾಗ ವ್ಯವಸ್ಥೆ ಮಾಡಿ ಸ್ಥಳಾಂತರಕ್ಕೆ ಮುಂದಾದರೂ ಅಲ್ಲಲ್ಲಿ ಸಂಘ- ಸಂಸ್ಥೆ, ನಾಗರಿಕರಿಂದ ಪ್ರತಿಭಟನೆ ವ್ಯಕ್ತಗೊಳ್ಳುತ್ತಿವೆ. ಉಳಿದಂತೆ ಆಸ್ಪತ್ರೆ, ಸರಕಾರಿ ಕಚೇರಿ, ದೇವಾಲಯ, ಮಸೀದಿ, ಚರ್ಚ್‍ನ ಸನಿಹವೂ ಸ್ಥಳಾಂತರಕ್ಕೆ ಅವಕಾಶವಿಲ್ಲ.