ವೀರಾಜಪೇಟೆ, ಜು. 28: ಕೊಡಗು ಕೇರಳ ಗಡಿ ಪ್ರದೇಶದ ಪೆರಂಬಾಡಿಯ ಕೆರೆಯ ಬಳಿ ನಡೆಯುತ್ತಿರುವ ರಸ್ತೆ ಕುಸಿತದ ಸ್ಥಳಕ್ಕೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದರು.

ರಾಜ್ಯ ಹೆದ್ದಾರಿಯ ಕೆರೆಯ ಬಳಿಯ ಕುಸಿತಕ್ಕೆ ಬಿ.ಎಸ್.ಎನ್.ಎಲ್. ಸಂಸ್ಥೆ ಕೇಬಲ್ ಅಳವಡಿಸಲು ಭೂಮಿಯನ್ನು ಕೊರೆದಿರುವದು ಹಾಗೂ ಅರಣ್ಯ ಇಲಾಖೆಗೆ ಸೇರಿದ ಪೆರಂಬಾಡಿ ಕೆರೆಯ ಹೆಚ್ಚುವರಿ ನೀರು ಹರಿಯಲು ಸಣ್ಣ ರಂಧ್ರ ಮಾಡಿರುವದು ಕಾರಣವಾಗಿದೆ. ಮಳೆ ಹಾನಿ ಪರಿಹಾರದಲ್ಲಿ ಜಿಲ್ಲಾಧಿಕಾರಿ ರೂ. 19 ಲಕ್ಷ ಬಿಡುಗಡೆ ಮಾಡಿದ್ದಾರೆ. ರಸ್ತೆ ದುರಸ್ತಿಗೆ ರೂ. 19 ಲಕ್ಷ ಮಾತ್ರ ತಗಲಲಿದೆ. ಕೆರೆ ಭಾಗದ ರಸ್ತೆ ಅಂಚಿನಲ್ಲಿ ತಡೆಗೋಡೆ ಕಟ್ಟಲು

ರೂ. 46 ಲಕ್ಷ ಅಂದಾಜು ವೆಚ್ಚವಾಗಲಿದೆ. ತಡೆಗೋಡೆಯನ್ನು ಮುಂದಿನ ನವೆಂಬರ್‍ನಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿ ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬೋಪಯ್ಯ ತಿಳಿಸಿದರು.

ಸ್ಥಳದಲ್ಲಿಯೇ ಇದ್ದ ಇಲಾಖೆಯ ಸಹಾಯಕ ಇಂಜಿನಿಯರ್ ಎಂ. ಸುರೇಶ್ ಅವರು ಸಾಮಗ್ರಿಗಳ ಸಾಗಾಟ ವಿಳಂ¨ವಾಗಿರುವದರಿಂದ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಕೇರಳದಿಂದಲೂ ಸೈಜು ಕಲ್ಲನ್ನು ತರಿಸಲಾಗುತ್ತಿದೆ. ಗುತ್ತಿಗೆದಾರರು ತುರ್ತು ನಿಗಾ ವಹಿಸಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 1 ರಂದು ಲಘು ವಾಹನಗಳಿಗೆ ಈ ರಸ್ತೆ ಮುಕ್ತವಾಗಲಿದೆ. ನಂತರ 10 ದಿನಗಳಲ್ಲಿ ಬಸ್ಸು ಸಂಚಾರಕ್ಕೆ ಅವಕಾಶ ನೀಡಲಾಗುವದು ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸಮಿತಿಯ ಅಧ್ಯಕ್ಷ ಶಶಿ ಸುಬ್ರಮಣಿ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಬಿಜೆಪಿ ತಾಲೂಕು ಸಮಿತಿ ಅಧ್ಯಕ್ಷ ಕೆ. ಅರುಣ್ ಭೀಮಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಜೋಕೀಂ ರಾಡ್ರಿಗಸ್, ನರಸಿಂಹ ಮತ್ತಿತರರು ಹಾಜರಿದ್ದರು.