ವೀರಾಜಪೇಟೆ, ಜು. 27: ವೀರಾಜಪೇಟೆಯ ಛತ್ರಕೆರೆ ಬಳಿ ಇರುವ ಪರಿಶಿಷ್ಟ ಜಾತಿ ಬಾಲಕಿಯರ ವಸತಿ ಶಾಲೆಗೆ ನಿನ್ನೆ ರಾತ್ರಿ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಅಡುಗೆ ಮನೆಯನ್ನು ಪರಿಶೀಲಿಸಿದಾಗ ಕಳಪೆ ಆಹಾರ ಪತ್ತೆಯಾಗಿದೆ. ಜೊತೆಗೆ ಎಲ್ಲವೂ ಅಶುಚಿತ್ವದಿಂದ ಕೂಡಿದೆ ಎಂದು ಆರೋಪಿಸಿದರು.

ಅಧ್ಯಕ್ಷರ ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಅಡುಗೆ ಮನೆಯಲ್ಲಿ ಇಬ್ಬರು ಅಡುಗೆಯವರು ಗೈರು ಹಾಜರಾಗಿದ್ದರು. ಅಡುಗೆ ಮನೆಯ ಬಾಗಿಲಿನ ಬಳಿ ನಾಯಿಗಳ ಓಡಾಟ, ಒಳಗೆ ಬೆಕ್ಕುಗಳ ಓಡಾಟ ಮಾತ್ರ ನಿರಂತರವಾಗಿತ್ತು. ಇದಕ್ಕೆ ವಾರ್ಡನ್ ಮಾಯಮ್ಮಳನ್ನು ವಿಜು ಸುಬ್ರಮಣಿ ತರಾಟೆಗೆ ತೆಗೆದುಕೊಂಡರಲ್ಲದೆ ಹಾಸ್ಟೇಲ್ ಅನ್ನು ಶುಚಿಯಾಗಿಡದಿದ್ದರೆ ಬಾಲಕಿಯರಿಗೆ ರೋಗ ರುಜಿನಗಳು ಹಬ್ಬುವ ಸಾಧ್ಯತೆ ಇದೆ. ಊಟದ ತಟ್ಟೆಯನ್ನು ನೀರಿನಿಂದ ಶುದ್ಧವಾಗಿ ತೊಳೆದಿಲ್ಲ. ಮಕ್ಕಳು ಬಳಸುವ ಬೆಡ್‍ಶೀಟ್, ಬ್ಲಾಂಕೆಟ್‍ಗಳು ಮಲೀನವಾಗಿದ್ದರೂ ಅದನ್ನು ಈ ತನಕ ಒಗೆಯುವ ಗೋಜಿಗೆ ಹೋಗಿಲ್ಲ. 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಜ್ವರದಿಂದ ನರಳುತ್ತಿದ್ದು ಎರಡು ದಿನಗಳಿಂದಲೂ ಹಾಸಿಗೆಯಲ್ಲಿಯೇ ಮಲಗಿದ್ದರೂ ಆಕೆಗೆ ಈ ತನಕ ಚಿಕಿತ್ಸೆ ಕೊಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಸತಿ ನಿಲಯದಲ್ಲಿ 48ಮಂದಿ ಬಾಲಕಿಯರಿದ್ದು, ಸರಕಾರ ಎಲ್ಲ ಸೌಲಭ್ಯವನ್ನು ನೀಡುತ್ತಿದೆ. ಆದರೆ ಇದರ ಉಸ್ತುವಾರಿಗಳಾದ ಜಿಲ್ಲಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ವಸತಿ ನಿಲಯಕ್ಕೆ ಅಧಿಕಾರಿಗಳು ಒಮ್ಮೆಯು ಭೇಟಿ ನೀಡಿ ಪರಿಶೀಲಿಸಿಲ್ಲ. ಮಕ್ಕಳ ಆರೋಗ್ಯ, ಆಹಾರ ಪೂರೈಕೆ, ವಾಸ್ತವ್ಯದ ಕುರಿತು ವಿಚಾರಿಸಿಲ್ಲ. ಇದೇ ವಸತಿ ನಿಲಯದಲ್ಲಿ ನಿವೃತ್ತಿಗೊಂಡ ವಾರ್ಡನ್‍ನನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ವಿರುದ್ದ ಸರಕಾರಕ್ಕೆ ದೂರು ನೀಡುವದಾಗಿ ವಿಜು ಸುಬ್ರಮಣಿ ತಿಳಿಸಿದರಲ್ಲದೆ ಸಂದರ್ಶನ ಪುಸ್ತಕದಲ್ಲಿಯೂ ಆರೋಪಗಳನ್ನು ನಮೂದಿಸಿದರು. ನ್ಯಾಯ ಸಮಿತಿ ಅಧ್ಯಕ್ಷರ ಜೊತೆಯಲ್ಲಿ ವೀರಾಜಪೇಟೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಸಮಾಜ ಸೇವಕ ದೀಪಕ್ ಗಣಪತಿ ವಸತಿ ನಿಲಯಕ್ಕೆ ಭೇಟಿ ನೀಡಿದ್ದರು.