ಪೊನ್ನಂಪೇಟೆ, ಜು. 28: ಗೋಣಿಕೊಪ್ಪಲು ಸಮೀಪದ ಹಾತೂರಿನಲ್ಲಿ ಗುರುವಾರ ಸಂಜೆ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮರಣಪಟ್ಟ ಗಡಿ ಭದ್ರತಾ ಪಡೆಯ (ಬಿ.ಎಸ್.ಎಫ್) ಯೋಧ ಚಾರಿಮಂಡ ಎಸ್. ತಿಮ್ಮಯ್ಯ (ಅಪ್ಪಿ-44) ಅವರ ಅಂತ್ಯಕ್ರಿಯೆಯು, ಹುಟ್ಟೂರು ಕಿರುಗೂರಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಶುಕ್ರವಾರ ಮದ್ಯಾಹ್ನ ನಂತರ ಜರುಗಿತು. ಈ ವೇಳೆ ಸೇರಿದ್ದ ಸಹಸ್ರಾರು ಜನತೆ ಮೃತ ಯೋಧನ ಅಕಾಲಿಕ ಮರಣಕ್ಕೆ ಕಂಬನಿ ಮಿಡಿದರಲ್ಲದೆ ಮೃದು ಸ್ವಭಾವ ಮತ್ತು ಶ್ರೇಷ್ಠ ವ್ಯಕ್ತಿತ್ವದ ತಿಮ್ಮಯ್ಯ ಅವರಿಗೆ ಹೃದಯ ಸ್ಪರ್ಶಿ ಅಂತಿಮ ವಿದಾಯ ಹೇಳಿದರು. ಅಂತ್ಯಕ್ರಿಯೆಯ ವೇಳೆ ಸ್ಥಳದಲ್ಲಿದ್ದ ಮೃತರ ಪತ್ನಿ ಪವಿತ್ರ, ಇಬ್ಬರು ಮಕ್ಕಳಾದ ಗೌರವ್ ಗಣಪತಿ ಮತ್ತು ತೃಷಾ ದೇಚಮ್ಮ ಸೇರಿದಂತೆ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ವೀರಾಜಪೇಟೆಯಿಂದ ಕಾರ್ಯ ಮುಗಿಸಿ ಗುರುವಾರ ಸಂಜೆ ಗೋಣಿಕೊಪ್ಪಲಿನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿರುವಾಗ, ಅಪಘಾತದಲ್ಲಿ ಸಿ.ಎಸ್. ತಿಮ್ಮಯ್ಯ ಅವರು ಸ್ಥಳದಲ್ಲೆ ಮೃತಪಟ್ಟಿದ್ದರು. ಮೃತಯೋಧನ ಪಾರ್ಥಿವ ಶರೀರವನ್ನ ಕಿರುಗೂರಿಗೆ ತಂದು ಅಂತಿಮ ದರ್ಶನದ ವ್ಯವಸ್ಥೆಗೊಳಿಸಲಾಗಿತ್ತು. ಶುಕ್ರವಾರ ಹೆಗ್ಗಡೆ ಸಮಾಜದ ಸಂಪ್ರದಾಯದಂತೆ ವಿಧಿವಿದಾನ ಪೂರೈಸಿ, ಕಿರುಗೂರಿನ ಮುಖ್ಯ ರಸ್ತೆಯ ಬದಿಯಲ್ಲಿರುವ ಜನಾಂಗದ ರುದ್ರಭೂಮಿಗೆ ಮೃತದೇಹವನ್ನು ತರಲಾಯಿತು. ಇಲ್ಲಿ ಮಡಿಕೇರಿಯಿಂದ ಆಗಮಿಸಿದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯಿಂದ ಮೂರು ಸುತ್ತು ಕುಶಲತೋಪು ಹಾರಿಸಿ ಸರಕಾರಿ ಗೌರವ ನೀಡಲಾಯಿತು.

ಬೆಂಗಳೂರಿನಿಂದ ಆಗಮಿಸಿದ್ದ ಗಡಿ ಭದ್ರತಾ ಪಡೆಯ ಇನ್ಸ್‍ಪೆಕ್ಟರ್ ಲೇಕ್‍ರಾಮ್ ಶಿಯಾಂಗ್ ನೇತೃತ್ವದ ಜವಾನರ ತಂಡ ರಾಷ್ಟ್ರ ದ್ವಜವನ್ನು ಮೃತ ಶರೀರದ ಮೇಲೆ ಹೊದಿಸಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸೇನಾ ಗೌರವ ನೀಡಿತ್ತು. ಇದಾದ ನಂತರ ಇನ್ಸ್‍ಪೆಕ್ಟರ್ ಲೇಕ್‍ರಾಮ್ ಶಿಯಾಂಗ್ ಮೃತದೇಹದ ಮೇಲೆ ಹೊದಿಸಲಾಗಿದ್ದ ರಾಷ್ಟ್ರದ್ವಜವನ್ನು

(ಮೊದಲ ಪುಟದಿಂದ) ತೆಗೆದು ಮೃತ ಯೋಧನ ಪತ್ನಿ ಮತ್ತು ಮಕ್ಕಳ ಕೈಗೆ ಹಸ್ತಾಂತರಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಬಳಿಕ ಚಿತೆಯಲ್ಲಿ ಇರಿಸಲಾಗಿದ್ದ ಯೋಧನ ಪಾರ್ಥಿವ ಶರೀರಕ್ಕೆ 10 ವರ್ಷ ಪುತ್ರ ಗೌರವ್ ಅಗ್ನಿ ಸ್ಪರ್ಶ ನೀಡಿದರು. ಯೋಧ ತಿಮ್ಮಯ್ಯ ಪಂಚಭೂತಗಳಲ್ಲಿ ಲೀನವಾದರು. ಪುತ್ರ ಗೌರವ್ ಗಣಪತಿ ತೀರಾ ಭಾವುಕನಾಗಿದ್ದನಲ್ಲದೆ ‘ಇಷ್ಟು ವರ್ಷ ಅಪ್ಪ ನಮ್ಮೊಂದಿಗಿರಲಿಲ್ಲ ಇನ್ನೆಂದೂ ನಮ್ಮೊಂದಿಗೆ ಇರುವದಿಲ್ಲವಲ್ಲ’ ಎಂದು ರೋದಿಸುತ್ತಿದ್ದಾಗ ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

ಅಂತ್ಯಕ್ರಿಯೆ ವೇಳೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ, ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ, ಉಪಾಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ, ಕಾಂಗ್ರೆಸ್ ಮುಖಂಡರಾದ ತೀತಿರ ಧರ್ಮಜ ಉತ್ತಪ್ಪ, ಶಾಜಿ ಅಚ್ಯುತ್ತನ್, ಎಂ.ಎಸ್. ಕುಶಾಲಪ್ಪ, ಕೆ.ಎಂ. ಸರ ಚಂಗಪ್ಪ, ಬಿ.ಜೆ.ಪಿ. ಮುಖಂಡ ಅರುಣ್ ಭೀಮಯ್ಯ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ನಾಗರಿಕ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಮೃತ ಯೋಧನ ಅಂತಿಮ ದರ್ಶನ ಪಡೆದರು. -ಚಿತ್ರ, ವರದಿ: ರಫೀಕ್ ತೂಚಮಕೇರಿ