*ಗೋಣಿಕೊಪ್ಪಲು, ಜು. 27: ಸ್ಕೂಟರ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಬಿ.ಎಸ್.ಎಫ್ ಯೋಧ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹಾತೂರು ಶಾಲೆ ಸಮೀಪ ಈ ದುರ್ಘಟನೆ ನಡೆದಿದ್ದು, ಚಾರಿಮಂಡ ಅಪ್ಪಿ ತಿಮ್ಮಯ್ಯ (45) ಮೃತಪಟ್ಟ ದುರ್ದೈವಿ. ಮೂಲತಃ ಕಿರುಗೂರು ಗ್ರಾಮದ ನಿವಾಸಿಯಾಗಿರುವ ಇವರು ಗೋಣಿಕೊಪ್ಪಲುವಿನ ಪಟೇಲ್‍ನಗರದಲ್ಲಿ ವಾಸವಾಗಿದ್ದಾರೆ.

ವೀರಾಜಪೇಟೆಯಿಂದ ಗೋಣಿಕೊಪ್ಪಲುವಿನ ಮಾರ್ಗವಾಗಿ ತಮ್ಮ ಮನೆ ಕಿರುಗೂರಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಮುಂಭಾಗದಿಂದ ಬರುತ್ತಿದ್ದ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮೃತ ತಿಮ್ಮಯ್ಯನವರ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಸ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ತಲೆಯ ಭಾಗಕ್ಕೆ ಗಂಭೀರ ಗಾಯವಾದರಿಂದ ಹೆಚ್ಚು ರಕ್ತ ಸೋರಿ ಮೃತ ಪಡಲು ಕಾರಣ ಎಂದು ತಿಳಿದುಬಂದಿದೆ. ಚತ್ತಿಸ್‍ಗಡಲ್ಲಿ ಕಳೆದ 24 ವರ್ಷಗಳಿಂದ

(ಮೊದಲ ಪುಟದಿಂದ) ಬಿ.ಎಸ್.ಎಫ್‍ನ 19 ಬೆಟಾಲಿಯನ್‍ನಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಮ್ಮಯ್ಯ ಜುಲೈ 10ರಂದು ಮೃತಪಟ್ಟ ತಂದೆಯ ಅಂತಿಮ ದರ್ಶನಕ್ಕಾಗಿ ಮನೆಗೆ ರಜೆಯಲ್ಲಿ ಬಂದಿದ್ದರು. ತಂದೆಯ ಅಂತ್ಯಕ್ರಿಯೆ ಹಾಗೂ ಶಾಸ್ತ್ರ, ತಿಥಿ ಕರ್ಮಗಳನ್ನು ಮುಗಿಸಿ ಗುರುವಾರ ರಾತ್ರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ತೆರಳುವದರಲ್ಲಿದ್ದರು.

ರೋಧನ: ಮರೋಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಶವಗಾರಕ್ಕೆ ಮೃತ ದೇಹವನ್ನು ತಂದಾಗ ಪತ್ನಿ ಹಾಗೂ ಮಕ್ಕಳ ರೋಧನ ಕರಳು ಹಿಂಡುವಂತಿತ್ತು. ಶಾಲೆಯಿಂದ ಹಿಂದುರುಗಿದ ಮಕ್ಕಳು ಅಪ್ಪನ ಸಾವಿನ ಸುದ್ದಿ ಕೇಳಿ ಅಪ್ಪ ಮಾತನಾಡು ಎಂಬ ಕಂಬನಿ ಮಿಡಿದ ಹೃದಯಗಳು ಜನರನ್ನು ಮತ್ತಷ್ಟು ದುಃಖದ ಮಡುವಿಗೆ ತಳ್ಳಿತು. ಮಕ್ಕಳು ಸ್ಥಳೀಯ ಸಂತ ಥೋಮಸ್ ಶಾಲೆಯಲ್ಲಿ 8 ಹಾಗೂ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮೃತಪಟ್ಟ ತಿಮ್ಮಯ್ಯ ಅವರ ರಜೆಯ ಅವಧಿ ಮುಗಿದ್ದಿತ್ತು. ಇಂದು ಬೆಳಿಗ್ಗೆ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಮಾಡಲು ವೀರಾಜಪೇಟೆಗೆ ತೆರಳಿದ್ದರು. ಹಿಂದಿರುಗುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾವಿರಾರು ಜನರು ಆಗಮಿಸಿ ದುಃಖಪಟ್ಟರು. ಶವಾಗಾರದ ಎದುರು ಜನಸಂದಣೆ ಹೆಚ್ಚಾಗಿ ಕಂಡುಬಂತು.

ಬೈಕ್ ಹಾಗೂ ಸ್ಕೂಟರ್ ನಡುವಿನ ಮುಖಾಮುಖಿಯಲ್ಲಿ ತಿಮ್ಮಯ್ಯ ಸ್ಥಳದಲ್ಲೇ ಮೃತಪಟ್ಟಿರುವದು ಗೋಚರಿಸಿದೆ. ಆದರೆ ಎದುರಿನಿಂದ ಬಂದ ಬೈಕಿಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಮೃತ ತಿಮ್ಮಯ್ಯನ ತಲೆಯ ಭಾಗ ರಸ್ತೆಗೆ ಅಪ್ಪಳಿಸಿದ್ದರಿಂದ ಮೃತ ಪಟ್ಟಿರಬಹುದು ಎಂದು ಅಂದಾಜಿಸಿದರೂ ಸಾರ್ವಜನಿಕರ ಅಭಿಪ್ರಾಯದ ಪ್ರಕಾರ ಮೃತನ ತಲೆಯ ಮೇಲೆ ಯಾವದೋ ವಾಹನ ಹರಿದಿರಬಹುದೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಸಂಜೆ 4ರ ಹೊತ್ತಿಗೆ ಅಪಘಾತ ನಡೆದರೂ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಅಪಘಾತ ನಡೆದ ಮಾರ್ಗವಾಗಿ ಪತ್ರಕರ್ತ ಚಮ್ಮಟ್ಟೀರ ಪ್ರವೀಣ್ ಎಂಬವವವರು ಸಂಚರಿಸುತ್ತಿದ್ದಾಗ ಘಟನೆಯನ್ನು ಮನಗಂಡು ತಕ್ಷಣ ಪೆÇಲೀಸರಿಗೆ ಸುದ್ದಿ ಮುಟ್ಟಿಸಿದ್ದಲ್ಲದೇ, ಮೃತಪಟ್ಟ ತಿಮ್ಮಯ್ಯ ಅವರ ಜೇಬಿನಲ್ಲಿದ್ದ ಮೊಬೈಲನ್ನು ತೆಗೆದು ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಭವ್ಯ, ವೃಕ್ತನಿರೀಕ್ಷಕ ರಾಜು ಹಾಗೂ ಠಾಣಾಧಿಕಾರಿ ರಾಜು ಭೇಟಿ ನೀಡಿ ಪರಿಶೀಲಿಸಿದರು. ಅಂತ್ಯಕ್ರಿಯೆ ತಾ. 28ರಂದು (ಇಂದು) ಕಿರುಗೂರಿನಲ್ಲಿ ನಡೆಯಲಿದೆ.

ಸಂತಾಪ : ಯೋಧ ತಿಮ್ಮಯ್ಯ ಸಾವಿಗೆ ಶಾಸಕ ಕೆ.ಜಿ. ಬೋಪಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿತ್ರವರದಿ: ಎನ್.ಎನ್. ದಿನೇಶ್