ಕೂಡಿಗೆ, ಜು. 27: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ ವಾಹನ, ಸಾರ್ವಜನಿಕರು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ.

ಸಮೀಪದಲ್ಲಿ ಕಲ್ಲು ಕೋರೆಗಳಿದ್ದು, ಕಲ್ಲುಗಳನ್ನು ತುಂಬಿಸಿದ 50 ಕ್ಕೂ ಅಧಿಕ ಲಾರಿಗಳು ಈ ಮಾರ್ಗದಲ್ಲೇ ಚಲಿಸುವದರಿಂದ ರಸ್ತೆ ಕಳೆದ 5 ವರ್ಷಗಳಿಂದ ತೀರಾ ಹದಗೆಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ವರಿಗೂ, ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ಸ್ಥಳೀಯ ಮುಖಂಡ ಜಿ.ಎಲ್. ನಾರಾಯಣ್ ಸೇರಿದಂತೆ ಈ ವ್ಯಾಪ್ತಿಯ ಸಾರ್ವಜನಿಕರು ತಿಳಿಸಿದ್ದಾರೆ.

ಈ ಗ್ರಾಮಗಳ ರಸ್ತೆ ಬದಿಯ ಮನೆಗಳು ದೂಳುಮಯವಾಗುವದರ ಜೊತೆಗೆ ಮಳೆಗಾಲದಲ್ಲಿ ರಸ್ತೆಯು ಕೆಸರು ಗುಂಡಿಗಳಾಗಿ ಮಾರ್ಪಾಡಾಗುತ್ತಿದೆ. ಭಾರೀ ಕಲ್ಲು ತುಂಬಿದ ಲಾರಿಗಳಿಂದ ರಸ್ತೆ ಬದಿಯ ಮನೆಗಳು ಬಿರುಕುಬಿಟ್ಟು ಬೀಳುವ ಹಂತ ತಲಪಿವೆ ಎಂದು ಸ್ಥಳೀಯ ಗ್ರಾಮಸ್ಥರಾದ ಮೋಹನ್, ಕಿರಣ್, ಚಿಣ್ಣಪ್ಪ ಹೇಳಿಕೆ ನೀಡಿದ್ದಾರೆ.

ಈ ಮಾರ್ಗದಲ್ಲಿ ದಿನಂಪ್ರತಿ ಖಾಸಗಿ ಬಸ್ ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಚಲಿಸುತ್ತವೆ. ಆದರೆ ಸಮೀಪದ ಕೂಡಿಗೆ, ಕುಶಾಲನಗರಕ್ಕೆ ಬರುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಸಚಿವರ ಆದೇಶದನ್ವಯ 2 ಕಿ.ಮೀ.ವರೆಗೆ ರಸ್ತೆಗೆ ಡಾಂಬರು ಹಾಕಿದರೂ, ಇನ್ನುಳಿದ ಪಿಪಾಯಿ ಹಳ್ಳದಿಂದ ಮದಲಾಪುರದವರೆಗೆ ಯಾವದೇ ಡಾಂಬರು ಕಾಮಗಾರಿಯನ್ನು ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಡಿ. ಅಣ್ಣಯ್ಯ, ಈ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವದೆಂದು ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ