ಸೋಮವಾರಪೇಟೆ, ಜು. 27: ಜಿ.ಪಂ., ತಾ.ಪಂ., ಪ.ಪಂ. ಸೇರಿದಂತೆ ಯಾವದೇ ಸಭೆಗಳಲ್ಲಾದರೂ ಅಧ್ಯಕ್ಷರ ಪರವಾಗಿ ಆಡಳಿತ ಪಕ್ಷದ ಸದಸ್ಯರುಗಳು ನಿಲ್ಲುವದು ಸಾಮಾನ್ಯ. ಆದರೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಪ್ರಸಂಗಗಳು ನಡೆಯುತ್ತಿರುತ್ತವೆ.

ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದರೂ ಸಹ ವಿಪಕ್ಷ ಸದಸ್ಯರು ಒಟ್ಟಾಗಿ ಮುಗಿಬೀಳುವ ಸಂದರ್ಭ ತಮ್ಮ ಅಧ್ಯಕ್ಷರ ಪರವಾಗಿ ನಿಲ್ಲಲು ಇಲ್ಲಿ ಯಾರೂ ಮುಂದೆ ಬರುವದಿಲ್ಲ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಮಾಡುವ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ಮೌನ ಸಮ್ಮತಿ ಸೂಚಿಸುವಂತೆ ಕಂಡುಬರುತ್ತಿದೆ.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ.ಪಂ. ವ್ಯಾಪ್ತಿಯಲ್ಲಿ ತಲೆದೋರಿರುವ ತ್ಯಾಜ್ಯ ಸಮಸ್ಯೆ ಮತ್ತು ನೂತನ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವರಾಜು ಅರಸು ಭವನ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು, ಆಡಳಿತ ಮಂಡಳಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡು ತೀವ್ರ ವಾಕ್ಸಮರ ನಡೆಸುತ್ತಿದ್ದರೂ ಆಡಳಿತ ಪಕ್ಷವಾದ ಬಿಜೆಪಿಯ ಸದಸ್ಯರುಗಳು ಯಾವದೇ ಪ್ರತಿಕ್ರಿಯೆ ನೀಡದೇ ಮೂಕ ಪ್ರೇಕ್ಷಕರಾಗಿದ್ದುದು ಕಂಡುಬಂತು.

ವಿಪಕ್ಷ ಸದಸ್ಯರುಗಳಾದ ಆದಂ, ಶೀಲಾ ಡಿಸೋಜ, ಇಂದ್ರೇಶ್, ವೆಂಕಟೇಶ್, ಮೀನಾಕುಮಾರಿ ಅವರುಗಳು ಅಧ್ಯಕ್ಷೆ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದರೆ, ಅಧ್ಯಕ್ಷೆ ವಿಜಯಲಕ್ಷ್ಮಿ ಅವರು ಕ್ಷಣಕಾಲ ಕಕ್ಕಾಬಿಕ್ಕಿಯಾದರು. ಒಂದೇ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ಸದಸ್ಯರೆಲ್ಲರೂ ಗದ್ದಲ ಎಬ್ಬಿಸುತ್ತಿದ್ದರೂ ಸಹ ಅಧ್ಯಕ್ಷೆಯ ಪರ ವಹಿಸಲು ಬಿಜೆಪಿ ಸದಸ್ಯರ್ಯಾರೂ ಮೇಲೇಳಲಿಲ್ಲ.

ನಾಲ್ಕೈದು ಮಂದಿ ಒಮ್ಮೆಲೆ ಮಾತಿನ ಬಾಣದಿಂದ ಅಧ್ಯಕ್ಷೆಯನ್ನು ಚುಚ್ಚುತ್ತಿದ್ದಂತೆ ಎದ್ದುನಿಂತ ವಿಜಯಲಕ್ಷ್ಮೀ ಅವರ ಪತಿ, ಸದಸ್ಯರೂ ಆಗಿರುವ ಬಿ.ಎಂ. ಸುರೇಶ್ ಅಧ್ಯಕ್ಷರ ಪರ ವಕಾಲತ್ತು ವಹಿಸಿ, ವಿಪಕ್ಷದವರ ತೀಕ್ಷ್ಣ ಮಾತುಗಳಿಂದ ರಕ್ಷಿಸಿದರು. ಎಲ್ಲರೂ ಒಮ್ಮೆಲೆ ಮಾತನಾಡಬೇಡಿ; ಒಬ್ಬೊಬ್ಬರೇ ಮಾತಾಡಿ, ಅಧ್ಯಕ್ಷರು ಉತ್ತರಿಸುತ್ತಾರೆ ಎಂದು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾದರು.

ಸಭೆಯಲ್ಲಿ ಭಾರೀ ಗಲಭೆ ನಡೆಯುತ್ತಿದ್ದ ಸಂದರ್ಭವೂ ಬಿಜೆಪಿ ಸದಸ್ಯರುಗಳಾದ ಲೀಲಾ ನಿರ್ವಾಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸುಶೀಲ, ಬಿ.ಎಂ. ಈಶ್ವರ್ ಅವರುಗಳು ಮೌನಕ್ಕೆ ಶರಣಾಗಿದ್ದರು. ‘ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ’ ಎಂದು ವಿರೋಧ ಪಕ್ಷದವರು ಮಾಡುತ್ತಿದ್ದ ಆರೋಪದಲ್ಲಿ ಸತ್ಯವಿರಬಹುದು ಎಂಬದನ್ನು ಇವರ ಮೌನ ಸಾರುತ್ತಿತ್ತು.

- ವಿಜಯ್ ಹಾನಗಲ್