ಗೋಣಿಕೊಪ್ಪಲು, ಜು. 28: ಕಾವೇರಿ ಕಾಲೇಜಿನ ಸುವರ್ಣ ಮಹೋತ್ಸವದ ಪ್ರಯುಕ್ತ ದಿವಂಗತ ಪುಚ್ಚಿಮಾಡ ತಿಮ್ಮಯ್ಯ, ಚೋಂದಮ್ಮ ತಿಮ್ಮಯ್ಯ ಮತ್ತು ದಿ. ಮೀನಾ ಸುಬ್ಬಯ್ಯ ಇವರ ಜ್ಞಾಪಕಾರ್ಥ ಕಾವೇರಿ ಕಾಲೇಜು ಮತ್ತು ಕಾವೇರಿ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ತಾ. 28 ರಂದು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.
ಭಾಷಣ ಸ್ಪರ್ಧೆಯ ವಿಷಯ “ಪ್ರಸ್ತುತ ಶಿಕ್ಷಣ ಪದ್ದತಿ ಉದ್ಯೋಗ ಕೇಂದ್ರೀಕೃತವೇ ?” (ಕನ್ನಡ), “ ಖಿhe ಖoಟe oಜಿ ಙouಣh iಟಿ ಓಚಿಣioಟಿ ಃuiಟಜiಟಿg” (ಇಂಗ್ಲೀಷ್) ಆಗಿರುತ್ತದೆ. ಕೊಡಗು ಜಿಲ್ಲೆಯ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವದು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವದು.
ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ. ಗಣಪತಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಭಾಗವಹಿಸಲಿದ್ದಾರೆ.
ಈ ಸಂದರ್ಭ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಚೆಪ್ಪುಡಿರ ಸುಜಾ ಕರುಂಬಯ್ಯ ಇವರನ್ನು ಸನ್ಮಾನಿಸಲಾಗುವದು ಎಂದು ಪ್ರಾಂಶುಪಾಲ ಪಟ್ಟಡ ಪೂವಣ್ಣ ತಿಳಿಸಿದ್ದಾರೆ.