ಮಡಿಕೇರಿ, ಜು. 27: ಕೊಡಗು ಜಿಲ್ಲೆಯೆಲ್ಲೆಡೆ ಇಂದು ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯೊಂದಿಗೆ, ಭಕ್ತರು ವಿವಿಧ ದೋಷ, ದುರಿತಗಳ ನಿವಾರಣೆಗಾಗಿ, ನಾಗಪ್ಪನಿಗೆ ಕ್ಷೀರಾಭಿಷೇಕ ನೆರವೇರಿಸಿ ಭಕ್ತಿ ನಮನ ಸಲ್ಲಿಸಿದರು.ನಗರದ ಮುತ್ತಪ್ಪ ಸನ್ನಿಧಿ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ ದೇವಾಲಯಗಳ ನಾಗ ಸನ್ನಿಧಿ, ಬ್ರಾಹ್ಮಣರ ಬೀದಿಯ ಅಶ್ವತ್ಥಕಟ್ಟೆ, ಕೂಡಿಗೆಯ ಉದ್ಭವ ಶ್ರೀ ಸುಬ್ರಹ್ಮಣ್ಯ ಸನ್ನಿಧಿ, ಬೈರಂಬಾಡ ದೇವಾಲಯ, ಉಡೋತ್‍ಮೊಟ್ಟೆ ಆದಿಶಕ್ತಿ ಗುಡಿಯ ನಾಗಕಟ್ಟೆ, ಕರಿಕೆ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ, ಗೋಣಿಕೊಪ್ಪಲು ಉಮಾಮಹೇಶ್ವರಿ ಸನ್ನಿಧಿ ಮುಂತಾದೆಡೆಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರದ್ಧಾಭಕ್ತಿಯಿಂದ ದೇವತಾ ಕೈಂಕರ್ಯ ನೆರವೇರಿದ್ದಾಗಿ ತಿಳಿದು ಬಂದಿದೆ.

ಕೊಡಗು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿರುವ ದೇಗುಲಗಳಲ್ಲಿ ಕೂಡ ಭಕ್ತರು ನಾಗರಪಂಚಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು, ಮಕ್ಕಳ ಸಹಿತ ನಾಗಪ್ಪನಿಗೆ ಹುತ್ತಗಳಲ್ಲಿ ಹಾಲೆರೆಯುವ ಮೂಲಕ ಭಕ್ತಿಯಿಂದ ಪೂಜಾ ಪ್ರಾರ್ಥನೆ ಸಲ್ಲಿಸಿದ ಕುರಿತು ವರದಿಗಳು ಲಭಿಸಿವೆ. ಜಿಲ್ಲೆಯ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲ ಸನ್ನಿಧಿಗಳ ಅಶ್ವತ್ಥ ಕಟ್ಟೆಯಲ್ಲಿನ ನಾಗ ದೇವತೆಗಳಿಗೆ ಇಂದು ನಾಗರಪಂಚಮಿ ಸಲುವಾಗಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಯಿತು. ಒಟ್ಟಿನಲ್ಲಿ ನಾಡಿನೆಲ್ಲೆಡೆ ಶ್ರಾವಣ ಮಾಸದ ಪಂಚಮಿಯ ಈ ಪರ್ವಕಾಲದಲ್ಲಿ ಅಲ್ಲಲ್ಲಿ ಸೇವೆಗಳು ನಡೆದು ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದಾಗಿ ಗೊತ್ತಾಗಿದೆ.

ಕರಿಕೆ

ಇಲ್ಲಿಗೆ ಸಮೀಪದ ಚೆತ್ತುಕಾಯ ಶ್ರೀ ವನಶಾಸ್ತವು ದೇವಸ್ಥಾನದಲ್ಲಿ ನಾಗರ ಪಂಚಮಿ ಉತ್ಸವವನ್ನು ಆಚರಿಸಲಾಯಿತು. ಪೂಜೆಯ ಪ್ರಯುಕ್ತ ದೇವರಿಗೆ ಎಳನೀರಿನ ಅಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ತಾರೇಶ್, ಪ್ರಮುಖರಾದ ಬಾಲಕೃಷ್ಣ, ರಾಘವ ಸೇರಿದಂತೆ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸೋಮವಾರಪೇಟೆ

ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಲ್ಲಿ ಪ್ರತಿಷ್ಠಾಪಿತ ನಾಗದೇವತೆಗಳಿಗೆ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಕಳೆದ ಹನ್ನೆರಡು ದಿನಗಳಿಂದ ಆಟಿ ಮಾಸದ ದುರ್ಗಾದೀಪ ನಮಸ್ಕಾರ ಪೂಜೆ ನಡೆಯುತ್ತಿದೆ. ಇದೇ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ವಿಗ್ರಹಕ್ಕೆ ಸಿಯಾಳ, ಅರಿಶಿಣ, ಕ್ಷೀರಾ ಸೇರಿದಂತೆ ವಿವಿಧ ಅಭಿಷೇಕಗಳು ಹಾಗೂ ವಿವಿಧ ಅರ್ಚನೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ನಾಯರ್ ಹಾಗೂ ಪದಾಧಿಕಾರಿಗಳು ಪೂಜಾ ಯಶಸ್ಸಿಗೆ ಶ್ರಮಿಸಿದ್ದರು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ನಾಗದೇವತೆಗಳಿಗೆ ಸೇವೆ ಮಾಡಿಸುವ ಮೂಲಕ ಕೃತಾರ್ಥರಾದರು.

ಮೂರ್ನಾಡು

ಕೋಡಂಬೂರು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

ನಾಗದೇವತೆ ಮೂರ್ತಿಗೆ ಪಂಚಾಭಿಷೇಕ, ಕ್ಷೀರಾಭಿಷೇಕ, ಅರಸಿನ ನೇಪನ ಗೈದು ಪೂಜೆ ಸಲ್ಲಿಸಲಾಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ನಾಗದೇವತೆಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಾಲಯದ ಅರ್ಚಕರಾದ ರಘುನಾಥ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಆಡಳಿತ ಮಂಡಳಿ ಅಧ್ಯಕ್ಷ ಅಚ್ಚಪ್ಪ, ಕಾರ್ಯದರ್ಶಿ ಬಾಲಕೃಷ್ಣ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ಸುಂಟಿಕೊಪ್ಪ

ಇಲ್ಲಿನ ಚಾಮುಂಡೇಶ್ವರಿ ದೇವಾಲಯದ ಸಮೀಪವಿರುವ ನಾಗನ ಕಟ್ಟೆಗೆ ಗ್ರಾಮದ ಮಹಿಳೆಯರು ನಾಗರ ಪಂಚಮಿ ಅಂಗವಾಗಿ ಹಾಲೆರೆದು ವಿಶೇಷೆ ಪೂಜೆ ಸಲ್ಲಿಸಿದರು ಈ ಸಂದರ್ಭ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಜಯರಾಮ ಸೋಮಾಯಜಿ ಪೂಜಾ ವಿಧಿ ವಿಧಾನ ನೆರವೇರಿಸಿ ಪ್ರಸಾದ ವಿತರಿಸಿದರು.