ಕುಶಾಲನಗರ, ಜು. 28: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ದುಬಾರೆ ಕಾವೇರಿ ನದಿಯಲ್ಲಿ ಪತ್ರಕರ್ತರಿಗೆ ಸಾಹಸಿ ರ್ಯಾಫ್ಟಿಂಗ್ ಕ್ರೀಡೆ ಆಯೋಜಿಸಲಾಗಿತ್ತು.

ಪತ್ರಕರ್ತರ ಸಂಘ ಹಾಗೂ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ಅವರ ನೇತೃತ್ವದಲ್ಲಿ ಪಾಲ್ಗೊಂಡ ಸದಸ್ಯರು ನದಿಯಲ್ಲಿ 7 ಕಿ.ಮೀ. ದೂರದ ತನಕ ಕ್ರೀಡೆಯಲ್ಲಿ ಪಾಲ್ಗೊಂಡರು. ತಮ್ಮ ದಿನನಿತ್ಯದ ಜಂಜಾಟದಿಂದ ಹೊರಬಂದ ಪತ್ರಕರ್ತರು ಹಾಗೂ ಮಾಧ್ಯಮ ಸದಸ್ಯರು ಜೀವರಕ್ಷಕ ಜಾಕೆಟ್ ಧರಿಸಿ ನದಿಯಲ್ಲಿ ಸರ್ಫಿಂಗ್, ಈಜಾಟ ಮುಂತಾದ ಸಾಹಸಿ ಜಲಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 6 ರ್ಯಾಫ್ಟರ್‍ಗಳಲ್ಲಿ ತರಬೇತಿ ಹೊಂದಿದ ಗೈಡ್‍ಗಳ ಮಾರ್ಗದರ್ಶನದೊಂದಿಗೆ 3 ಗಂಟೆಗಳ ಕಾಲ ಸಾಹಸಿ ಕ್ರೀಡೆಯ ಅನುಭವ ಪಡೆದುಕೊಂಡರು. ಕೆಲವು ಪತ್ರಕರ್ತರು ಸಾಹಸಿ ಕ್ರೀಡೆ ಸಂದರ್ಭ ನದಿಯ ನೀರಿನ ಏರಿಳತಕ್ಕೆ ಸಿಲುಕಿ ನದಿಗೆ ಆಯತಪ್ಪಿ ಬಿದ್ದ ಘಟನೆಗಳು ನಡೆಯಿತು.

ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸಿದ್ದಾಪುರ ವ್ಯಾಪ್ತಿಯ 40 ಕ್ಕೂ ಅಧಿಕ ಪತ್ರಕರ್ತರು, ಮಾಧ್ಯಮ ಸದಸ್ಯರು ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.