ಕೂಡಿಗೆ, ಜು. 27: ದಿಡ್ಡಳ್ಳಿ ನಿರಾಶ್ರಿತರನ್ನು ಕಳೆದೆರಡು ತಿಂಗಳ ಹಿಂದೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಸಮೀಪದ ಬಸವನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ನಿಯಮಾನುಸಾರ ನಿರ್ಮಿತಿ ಕೇಂದ್ರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪುನರ್ವಸತಿ ಕಾಮಗಾರಿ ನಡೆಸಲಾಗುತ್ತಿದೆ.

ಈ ಕಾಮಗಾರಿ ಉತ್ತಮವಾಗಿ ನಡೆಯಲು ಒಂದು ಮಾದರಿ ಮನೆಯನ್ನು ನಿರ್ಮಿಸುವದರ ಮೂಲಕ; ಆ ಮನೆಯಂತೆ ಇನ್ನುಳಿದ 328 ಮನೆಗಳ ನಿರ್ಮಾಣ ಹಂತ ಹಂತವಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆದಿವಾಸಿ ಕುಟುಂಬಗಳಿಗೆ ಬೇಕಾದ ಆಹಾರ ವಸ್ತುಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಆಧಾರ್ ಕಾರ್ಡ್ ನೊಂದಣಿ ಸೇರಿದಂತೆ ಇನ್ನಿತರ ಕಾರ್ಯಗಳು ಪ್ರಗತಿಯಲ್ಲಿವೆ.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಆಗಿಂದಾಗ್ಗೆ ನಿರಾಶ್ರಿತರ ಪುನರ್ವಸತಿ ಕೇಂದ್ರ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಗೆ ಭೇಟಿ ನೀಡಿ, ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಲಭೂತ ಸೌಲಭ್ಯಗಳಾದ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕಾಮಗಾರಿಯನ್ನು ಜಿಲ್ಲಾಧಿಕಾರಿಯವರೇ ಖುದ್ದು ಪರಿಶೀಲಿಸಿ ಕಾಮಗಾರಿ ಸಮರ್ಪಕವಾಗದ ಸಂದರ್ಭ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿ ಅಡಿಪಾಯವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಮೇಲ್ಮಟ್ಟದ ಕಟ್ಟಡ ನಿರ್ಮಾಣ ಮಾಡಲು ಸೂಚನೆ ನೀಡಿದರು. ತಳಪಾಯದ ಗುಣಮಟ್ಟ ಸರಿಯಿಲ್ಲದನ್ನು ತೆಗೆಸಿ ಉತ್ತಮವಾಗಿ ಕಾಮಗಾರಿ ನಡೆಸಲು ಖಡಕ್ ಆದೇಶ ನೀಡಿದರು.

ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಡೆಸುತ್ತಿರುವದ ರಿಂದ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರವು ನಗರದ ಹೊಸ ಬಡಾವಣೆಯಂತೆ ಕಂಗೊಳಿಸುತ್ತಿದೆ.

ಈ ಸ್ಥಳಕ್ಕೆ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಭೇಟಿ ನೀಡಿ, ಕಾಮಗಾರಿಗಳನ್ನು ಉತ್ತಮವಾಗಿ ನಿರ್ವಹಿಸುವಂತೆ ಸೂಚಿಸಿದನ್ವಯ ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಸ್ಥಳದಲ್ಲೇ ಇದ್ದು ಕಾಮಗಾರಿಯ ನಿರ್ವಹಣೆಯಲ್ಲಿ ತೊಡಗಿದ್ದಾರೆ.

ಬಿಡುಗಡೆ ಹಂತದಲ್ಲಿರುವ ಹಣ: ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಗ್ರಾಮದಲ್ಲಿ ಈಗಾಗಲೇ ಟೆಂಡರ್ ಮೂಲಕ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಮನೆಗಳ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಹಣವು ಬಿಡುಗಡೆಯ ಹಂತದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಇಲಾಖೆಗಳ ವತಿಯಿಂದ ಆಹಾರ ವಸ್ತುಗಳು ಹಾಗೂ ಇನ್ನಿತರ ವಸ್ತುಗಳು ದೊರಕುತ್ತಿವೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಆಗಿಂದಾಗೆ ಹಾಡಿಗೆ ಭೇಟಿ ನೀಡಿ ಕಾಮಗಾರಿ ಹಾಗೂ ಇಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಉತ್ತಮವಾದ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗಿದ್ದಾರೆ ಎಂದು ಆದಿವಾಸಿ ಕುಟುಂಬದ ಮುಖಂಡರುಗಳಾದ ಮಲ್ಲಪ್ಪ, ಅಪ್ಪು, ಸೋಮು, ಸೋಮಣ್ಣ, ಗಣೇಶ ಹಾಗೂ ರಾಜಾರಾವ್ ಮೊದಲಾದವರು ಸ್ಥಳಕ್ಕೆ ತೆರಳಿ ಸುದ್ದಿಗಾರರಿಗೆ ತಿಳಿಸಿದರು.

-ಕೆ.ಕೆ.ನಾಗರಾಜಶೆಟ್ಟಿ