ಮಡಿಕೇರಿ, ಜು. 27: ಭ್ರಷ್ಟಾಚಾರ ರಹಿತ ಹಾಗೂ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರವನ್ನು ಹೊದ್ದು ಮಲಗಿದೆ ಎಂದು ಆರೋಪಿಸಿರುವ ಮಾಜಿ ಸಂಸದ ಹಾಗೂ ಜೆಡಿಎಸ್ ಮುಖಂಡ ಅಡಗೂರು ವಿಶ್ವನಾಥ್ ಸರಕಾರ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಜೆಡಿಎಸ್ ಕಾರ್ಯರ್ಕತರ ಸಭೆ ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೃಷ್ಣಾ, ತುಂಗಾ ಹಾಗೂ ಕಾವೇರಿ ಸೇರಿದಂತೆ ಕನ್ನಡ ನಾಡಿನ ನದಿಗಳ ರಕ್ಷಣೆಯಾಗುತ್ತಿಲ್ಲ. ಅರಣ್ಯ ಸಂಪತ್ತು, ಖನಿಜ ಸಂಪತ್ತು ಲೂಟಿಯೊಂದಿಗೆ ಕರ್ನಾಟಕ ರಾಜ್ಯದ ಗಡಿ ದಾಟಿ ಹೋಗುತ್ತಿದೆ. ಗಣಿಧಣಿಗಳ ವಿರುದ್ಧ ತೊಡೆತಟ್ಟಿ 330 ಕಿಮೀ ಪಾದಯಾತ್ರೆ ನಡೆಸಿ ಗಣಿಧಣಿಗಳನ್ನು ಜೈಲಿಗಟ್ಟಿ ರಾಜ್ಯದ ಬೊಕ್ಕಸ ತುಂಬುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನರಿಗೆ ಕೊಟ್ಟ ವಚನವನ್ನು ಮರೆತಂತಿದೆ. ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 12,000 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಮೂರು ಜಿಲ್ಲೆಗೆ ಅನುದಾನ ವಿನಿಯೋಗವಾಗ ಬೇಕಾಗಿದೆ. ಆದರೆ ಮುಖ್ಯಮಂತ್ರಿಗಳಿಗೆ ಯೋಜನೆ ತಯಾರು ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಗಳ ಸುರಿಮಳೆಗೈದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಾಸು ತರುತ್ತೇವೆಂದು ಭರವಸೆ ನೀಡಿದ ಕೇಂದ್ರ ಸರಕಾರವೂ ವಚನ ಭ್ರಷ್ಟವಾಗಿದೆ. ಕೇಂದ್ರದ ಆರ್ಥಿಕ ನೀತಿಯೂ ಗೊಂದಲಕಾರಿಯಾಗಿದ್ದು, 4 ಲಕ್ಷ ಯುವಕರು ಉದ್ಯೋಗ ಕಳೆದು ಕೊಂಡಿದ್ದಾರೆ ಎಂದು ಆರೋಪಿಸಿದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಜನತೆ ಬೇಸತ್ತಿದ್ದಾರೆ.

(ಮೊದಲ ಪುಟದಿಂದ) ಕರ್ನಾಟಕದ ಅಭಿವೃದ್ಧಿಗೆ ಪ್ರಾಂತೀಯ ಪಕ್ಷದ ಅನಿವಾರ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಥದಿಂದ ಕುಮಾರ ಪಥದತ್ತ ನಡೆಯಬೇಕಾಗಿದೆ. ತನ್ನ ಝಂಡ ಬದಲಾಗಿದ್ದು, ಅಜೆಂಡಾ ಬದಲಾಗಿಲ್ಲ. ರಾಜಕಾರಣ ನಿಂತ ನೀರಲ್ಲ. ಭಾರತದ ರಾಜಕಾರಣ ಜಂಗಮ. ಸುದೀರ್ಘ 40 ವರ್ಷಗಳ ಯಾತ್ರೆ ಮಾಡಿದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಆ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರದಿಂದ ಜೀವಿಜಯ ಅವರನ್ನು ಗೆಲ್ಲಿಸಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಮುಖಂಡ ಜಿ.ಟಿ. ದೇವೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಸೇರಿಸುವಲ್ಲಿ ವಿಶ್ವನಾಥ್ ಅವರು ಶ್ರಮಪಟ್ಟಿದ್ದಾರೆ. ಆದರೆ ಈಗ ಅವರನ್ನೇ ಮುಖ್ಯಮಂತ್ರಿಗಳು ಮೂಲೆಗುಂಪು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವೀಯತೆ ಯನ್ನು ಕಳೆದು ಕೊಂಡಿದ್ದಾರೆ. ರಾಜ್ಯ ಸರಕಾರದಿಂದ ಮಾಡಿರುವ ಸಾಲಮನ್ನಾದಿಂದ ಎಷ್ಟು ರೈತರುಗಳಿಗೆ ಲಾಭ ತಂದಿದೆ ಎಂದು ಪ್ರಶ್ನಿಸಿದ ಅವರು ಕೇವಲ ಪ್ರಚಾರಕ್ಕಾಗಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಗಳಲ್ಲಿ ರೈತರ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಮಾಡುವದಾಗಿ ಹೇಳಿದ್ದು, ಜೆಡಿಎಸ್ ಪಕ್ಷ ಸಾಮಾಜಿಕ ನ್ಯಾಯದ ತಳಹದಿ ಯಲ್ಲಿ ರಾಜಕಾರಣ ಮಾಡುತ್ತಿದೆ ಎಂದರು.

ಹಾರಂಗಿ ಅಣೆಕಟ್ಟು ತುಂಬಿದ್ದು, ರೈತರ ಉಪಯೋಗಕ್ಕಾಗಿ ನೀರು ಬಿಡಿ ಅಂದರೆ ಸರಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ. ಜಾತಿಗಳ ಮಧ್ಯೆ ಸಂಘರ್ಷವನ್ನು ತಂದು ಸಮಾಜವನ್ನು ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಿ.ಎ. ಜೀವಿಜಯ ಪ್ರಾಸ್ತಾವಿಕವಾಗಿ ಮಾತನಾಡಿ ರಾಜಕಾರಣ ನಿಂತ ನೀರಲ್ಲ. ರಾಜಕೀಯ ತಿರುವು ಸಹಜ. ರಾಜಕಾರಣದಲ್ಲಿ ಸಾಮಾಜಿಕ ನ್ಯಾಯ, ಸರ್ವಜನರ ಸೇವೆ ಮಾಡುವ ಉದ್ದೇಶ ಹೊಂದಿರಬೇಕು. ಅಧಿಕಾರ ಶಾಶ್ವತವಲ್ಲ. ಸಮಾಜವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಅಗತ್ಯ. ‘ಹಕ್ಕಿ ಹಕ್ಕಿ’ಯ ಕತ್ತು ಹಿಸುಕುವ ಮುನ್ನ ಜೆಡಿಎಸ್‍ಗೆ ಬಂದಿದೆ. ಎಲ್ಲರೂ ಒಟ್ಟಾಗಿ ಪಕ್ಷ ಕಟ್ಟಿ ಮುನ್ನಡೆಯೋಣ ಎಂದರು.

ಮಾಜಿ ಶಾಸಕ ಹೆಚ್.ಡಿ. ಬಸವರಾಜು ಹಾಗೂ ಅಧ್ಯಕ್ಷತೆ ವಹಿಸಿದ ಜೆಡಿಎಸ್ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ ದರು. ಇದೇ ಸಂದರ್ಭ ಇಂದು ನಿಧನರಾದ ಮಾಜಿ ಮುಖ್ಯ ಮಂತ್ರಿ ಎನ್. ಧರ್ಮಸಿಂಗ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ವೀಕ್ಷಕರಾದ ಬಸವರಾಜು, ಮಾಜಿ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಆಲಿ, ಜಿ.ಪಂ. ಸದಸ್ಯ ಪುಟ್ಟರಾಜು, ಮುಖಂಡರಾದ ಬೆಳ್ಯಪ್ಪ, ಕಾರ್ಮಾಡು ಸುಬ್ಬಣ್ಣ, ದಯಾಚಂಗಪ್ಪ, ಶರೀಫ್, ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ, ಮಾಜಿ ಜಿ.ಪಂ. ಅಧ್ಯಕ್ಷೆ ಹೆಚ್.ಬಿ. ಜಯಮ್ಮ ಹಾಗೂ ಇನ್ನಿತರರು ಇದ್ದರು.

ಮಾಜಿ ಜಿ.ಪಂ. ಸದಸ್ಯೆ ಕಮಲಾ ಗಣಪತಿ ಪ್ರಾರ್ಥಿಸಿ, ನಗರ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಸ್ವಾಗತಿಸಿ, ಹೊಸೂರು ಸತೀಶ್ ವಂದಿಸಿದರು.