ವಿರಾಜಪೇಟೆ ಜು:28ದಕ್ಷಿಣ ಕೊಡಗಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಮೂವತ್ತುಮಾನಿಯ ಕೃಷಿ ಭೂಮಿಯಲ್ಲಿ ಅಕ್ರಮ ಫಿಲ್ಟರ್ ಮರಳು ಗಣಿಗಾರಿಕೆ ಮಾಡುತ್ತಿದ್ದುದನ್ನು ತಾಲೂಕು ತಹಶೀಲ್ದಾರ್ ಹಾಗೂ ರೆವಿನ್ಯೂ ಸಿಬ್ಬಂದಿಗಳು ಪತ್ತೆ ಹಚ್ಚಿ ಗಣಿಗಾರಿಕೆಗೆ ಬಳಸುತ್ತಿದ್ದ ಟಾಟಾ ಹಿಟಾಚಿ ಯಂತ್ರ, ಸುಮಾರು 450 ಅಡಿಗಳಷ್ಟು ಫಿಲ್ಟರ್ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮೂವತ್ತು ಮನೆ ವ್ಯಾಪ್ತಿಯ ರಸ್ತೆಯಿಂದ ಸುಮಾರು 250 ಮೀಟರ್ ಅಂತರದಲ್ಲಿ ಕೃಷಿ ಭೂಮಿಯ ಜಾಗದಲ್ಲಿ ಈ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಕಳೆದ 20ದಿನಗಳ ಅವಧಿಯಲ್ಲಿ ಸುಮಾರು 150ರಿಂದ200 ಲಾರಿಗಳಷ್ಟು ಫಿಲ್ಟರ್ ಮಾಡಿದ ಮರಳನ್ನು ಅಕ್ರಮವಾಗಿ ಮಾರಾಟ ಮಾಡಿರುವದು ಪತ್ತೆಯಾಗಿದೆ. ಗ್ರಾಮಸ್ಥರು ನೀಡಿದ ಸುಳಿವಿನ ಮೇರೆ ಇಂದು ಬೆಳಿಗ್ಗೆ ಗಣಿಗಾರಿಕೆ ಜಾಗಕ್ಕೆ ಹಠಾತ್ ಧಾಳಿ ನಡೆಸಿದ ತಹಶೀಲ್ದಾರ್ ಗೋವಿಂದರಾಜ್, ರೆವಿನ್ಯೂ ಸಿಬ್ಬಂದಿಗಳು ಹಿಟಾಚಿ ಯಂತ್ರ ಮರಳನ್ನು ವಶ ಪಡಿಸಿಕೊಳ್ಳುತ್ತಿರುವ ಸಮಯದಲ್ಲಿ ಪಕ್ಕದಲ್ಲಿಯೇ ಇದ್ದ ಮರಳು ಸಾಗಾಟಕ್ಕೆ ಬಂದಿದ್ದ ಒಂದು ಲಾರಿ ತಕ್ಷಣ ನಾಪತ್ತೆಯಾಗಿದೆ. ಈ ಲಾರಿ ಪತ್ತೆಗೆ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಪೊಲೀಸರಿಗೆ ಆದೇಶಿಸಿದ್ದಾರೆ.
ಸುಮಾರು ಮೂರು ಎಕರೆ ಜಾಗದಲ್ಲಿ ಅಕ್ರಮ
(ಮೊದಲ ಪುಟದಿಂದ) ಗಣಿಗಾರಿಕೆ ಅನೇಕ ತಿಂಗಳು ಹಿಂದೆಯೇ ನಡೆಯುತ್ತಿದ್ದು ತಹಶೀಲ್ದಾರ್ ಗೋವಿಂದ್ರಾಜ್ ಈ ಹಿಂದೆಯೂ ಈ ಮರಳು ಅಡ್ಡೆಯ ಮೇಲೆ ಮೂರು ಬಾರಿ ಧಾಳಿ ನಡೆಸಿ ಕ್ರಮ ಕೈಗೊಂಡಿದ್ದರು. ಪುನಹ ಗಣಿಗಾರಿಕೆ ಮುಂದುವರೆದಿದ್ದು, ಕೃಷಿ ಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ತಮಿಳುನಾಡಿನಿಂದ ಇದಕ್ಕಾಗಿ ಬಾಡಿಗೆಗೆ ಹಿಟಾಚಿ ಯಂತ್ರವನ್ನು ತರಿಸಲಾಗಿದೆ. ಅಲ್ಲಲ್ಲಿ ಭಾರೀ ಹೊಂಡಗಳನ್ನು ತೆಗೆದು ಮಣ್ಣು ಮಿಶ್ರಣಗೊಂಡಿರುವ ಮರಳನ್ನು ಫಿಲ್ಟರ್ ಮಾಡಿ ತೆಗೆಯುವದು ದಂಧೆಯಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದರು.
ಮರಳು ಗಣಿಗಾರಿಕೆಯ ಮೇಲೆ ತಹಶೀಲ್ದಾರ್ ಸಿಬ್ಬಂದಿಗಳು ಧಾಳಿ ನಡೆಸುವ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಕೆಲಸದ ಆಳುಗಳು, ಮಾಲೀಕರು ತಲೆಮರೆಸಿಕೊಂಡಿದ್ದಾರೆ. ಜಾಗದ ಮಾಲೀಕರು ಯಾರೆಂಬದು ತಿಳಿಯದ ಕಾರಣ ವೀರಾಜಪೇಟೆಯ ತಾಲೂಕು ಕಚೇರಿಯಲ್ಲಿ ಈ ಕೃಷಿ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ ದಾಖಲೆಯ ಆಧಾರದ ಮೇಲೆ ಮಾಲೀಕರನ್ನು ಪತ್ತೆ ಹಚ್ಚಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗವಹಿಸಿ ಸಹಕರಿಸಿದ ನೌಕರರು, ಚಾಲಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸಿಲಾಗುವದು ಎಂದು ಗೋವಿಂದರಾಜ್ ತಿಳಿಸಿದರು.
ಕೃಷಿ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಸಹಾಯಕ ಸಬ್ಇನ್ಸ್ಪೆಕ್ಟರ್ ಚಂದ್ರಪ್ಪ ಹಾಗೂ ಸಿಬ್ಬಂದಿಗಳು ಸ್ಥಳದ ಮಹಜರು ನಡೆಸಿ ಜಾಗದ ಮಾಲೀಕರು ಇತರರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಮೂವತ್ತುಮಾನಿಯ ಅಕ್ರಮ ಗಣಿಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. ಧಾಳಿಯ ಸಮಯದಲ್ಲಿ ರೆವಿನ್ಯೂ ಇನ್ಸ್ಪೆಕ್ಟರ್ ಪಳಂಗಪ್ಪ, ಸಿಬ್ಬಂದಿ ಹೇಮಂತ್ ಮತ್ತಿತರರು ಹಾಜರಿದ್ದರು.