ನಾಪೋಕ್ಲು, ಜು. 28: ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ಅಭಿಪ್ರಾಯಪಟ್ಟರು.

ನಾಪೋಕ್ಲು ಲಯನ್ಸ್ ಸಂಸ್ಥೆಯ ವತಿಯಿಂದ ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶಿಕ್ಷಕರಿಗೆ 3 ದಿನಗಳ ಕಾಲ ಆಯೋಜಿಸಿರುವ ಲಯನ್ಸ್ ಕ್ವಿಸ್ಟ್ ತರಬೇತಿವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿಯಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ನಮ್ಮ ಸಂಸ್ಥೆ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಇದನ್ನು ಕಾರ್ಯಗತಗೊಳಿಸಬೇಕೆಂದರು.

ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ| ಜಾಲಿ ಬೋಪಯ್ಯ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ಕ್ವಿಸ್ಟ್ ತರಬೇತುದಾರರಾದ ಕವಿತಾ ಶಾಸ್ತ್ರಿ, ಲಯನ್ಸ್ ಸಂಸ್ಥೆಯ ರತ್ನ ಚರ್ಮಣ, ಪ್ರೀತಂ ಪೊನ್ನಣ್ಣ, ಸೋಮಣ್ಣ, ಬಿ.ಸಿ.ಕಾವೇರಪ್ಪ, ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ. ಹ್ಯಾರಿ ಮಂದಣ್ಣ, ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಶಾರದಾ ಇನ್ನಿತರರು ಉಪಸ್ಥಿತರಿದ್ದರು.

ಸ್ಥಳೀಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ| ಪಂಚಂ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ಲಯನ್ಸ್‍ನ ಜಿಲ್ಲಾ ಕ್ವಿಸ್ಟ್ ಸಂಯೋಜಕ ಕೆ.ಎಸ್. ಕುಟ್ಟಪ್ಪ, ನಿರೂಪಿಸಿ, ಕೆ. ಮುತ್ತಪ್ಪ ಧ್ವಜ ವಂದನೆ ಗೈದರು. ಕೆ.ಇಂದಿರಾ ಅಯ್ಯಣ್ಣ ಅತಿಥಿ ಗಳನ್ನು ಪರಿಚಯಿಸಿದರು. ಬಳಿಕ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಿಬಿರಾರ್ಥಿಗಳಿಗೆ ಕವಿತಾಶಾಸ್ತ್ರಿ ಅವರಿಂದ ತರಬೇತಿ ಕಾರ್ಯಕ್ರಮ ಜರುಗಿತು. ಕಾರ್ಯದರ್ಶಿ ಕೆ.ವಿನಯ್ ವಂದಿಸಿದರು.

- ದುಗ್ಗಳ