ಮಡಿಕೇರಿ, ಜು. 27: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸುಮಾರು 40 ವಿದ್ಯಾರ್ಥಿನಿಯರನ್ನು ಉದ್ಯೋಗ ಕೊಡಿಸುವದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆದಿದೆ.

ಪ್ರಕರಣದ ಸಂಬಂಧ ಬಂಧಿಸಲ್ಪಟ್ಟಿರುವ ಆರೋಪಿ ಗಣೇಶ್ ಶೆಟ್ಟಿ ಬೆಂಗಳೂರು ವಿವೇಕನಗರದ ಈಜಿಪುರದ ನಿವಾಸಿಯಾಗಿದ್ದಾನೆ. ಉದ್ಯೋಗ ಸಲಹಾ ಕೇಂದ್ರವೊಂದನ್ನು ಐದಾರು ತಿಂಗಳ ಹಿಂದೆ ಈತ ಪ್ರಾರಂಭಿಸಿದ್ದ. ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಖಾಲಿ ಇರುವ ಬಗ್ಗೆ ಈತನಿಗೆ ಮಾಹಿತಿ ಲಭಿಸುತ್ತಿತ್ತು. ಆ ಮಾಹಿತಿಯನ್ನು ಆತ ಉದ್ಯೋಗ ಅರಸುವ ಮಂದಿಗೆ ತಿಳಿಸುವದು ಈತನ ಕಾಯಕ.

ಆದರೆ ಸಂದರ್ಶನ ಮಾಡುವ ಅಧಿಕಾರ ಗಣೇಶ್ ಶೆಟ್ಟಿಗೆ ಇರಲಿಲ್ಲ ವಾದರೂ ಈತ ಫೀ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ನಕಲಿ ಸಂದರ್ಶನ ನಡೆಸಿ ವಿದ್ಯಾರ್ಥಿನಿ ಯರಲ್ಲಿ ಉದ್ಯೋಗ ಕೊಡಿಸುವ ಆಸೆ ಹುಟ್ಟಿಸಿ ಕರೆದೊಯ್ದಿದ್ದ. ಬಳಿಕ ಪಿಜಿಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ತಂಗಲು ವ್ಯವಸ್ಥೆ ಮಾಡಿದ್ದ. ಇದಕ್ಕಾಗಿ ವಿದ್ಯಾರ್ಥಿನಿಯರಿಂದ ಹಣವನ್ನೂ ಸಂಗ್ರಹಿಸಿದ್ದ. ಆದರೆ ಹಲವು ದಿನಗಳು ಕಳೆದರೂ ಉದ್ಯೋಗ ಸಿಗದಿದ್ದಾಗ ಗಣೇಶ್ ಶೆಟ್ಟಿಯನ್ನು ವಿದ್ಯಾರ್ಥಿನಿ ಯರು ವಿಚಾರಿಸಿದ್ದಾರೆ.

ಈ ಸಂದರ್ಭ ಉದ್ಯೋಗ ಬೇಕಾದರೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗು ತ್ತದೆ ಎಂದು ಗಣೇಶ್ ಶೆಟ್ಟಿ ಹೇಳಿದ್ದರಿಂದ ಸಂಶಯಗೊಂಡ ವಿದ್ಯಾರ್ಥಿನಿಯರು ಪೋಷಕರ ಮೂಲಕ ಪೊಲೀಸರ ಮೊರೆ ಹೋಗಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಪರಾರಿಯಾಗಿದ್ದ ಗಣೇಶ್ ಶೆಟ್ಟಿಯನ್ನು ನಿನ್ನೆ ದಿನ ಬಂಧಿಸಿದ್ದರು. ಆರೋಪಿಯ ವಿಚಾರಣೆ ಮುಂದುವರೆದಿದ್ದು, ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.