*ಗೋಣಿಕೊಪ್ಪಲು: ಪೊನ್ನಂಪೇಟೆ ಜೆಸಿಐ ನಿಸರ್ಗ, ತಿತಿಮತಿ ವಲಯ ಅರಣ್ಯ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ನಾಂಗಲ ಯುವಕ ಸಂಘ, ಕಾವೇರಿ ಯುವಕ ಸಂಘ ಮಾಯಮುಡಿ, ಕಾವೇರಿ ಕಾಲೇಜು ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ತಿತಿಮತಿ ಅರಣ್ಯದಲ್ಲಿ ವಿವಿಧ ಜಾತಿ ಗಿಡಗಳನ್ನು ನೆಡಲಾಯಿತು.

ಉದ್ಯಮಿ ಕನಸು ದೇವಯ್ಯ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಜಾತಿಯ ಗಿಡ, ಬೀಜ, ಜಾತಿ ಹುಲ್ಲುಗಳನ್ನು ನೆಟ್ಟು ಅರಣ್ಯ ಸಂಪತ್ತು ಉಳಿಸಿ ಬೆಳಸಿ ಎಂದು ಸಂದೇಶ ಸಾರಿದರು.

ಪೊನ್ನಂಪೇಟೆ ಜೆಸಿಐ ನಿಸರ್ಗದ ಅಧ್ಯಕ್ಷ ಟಾಟು ಮೊಣ್ಣಪ್ಪ ಮಾತನಾಡಿ, ಅರಣ್ಯ ಸಂಪತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯುವ ಜನತೆ ಸಸ್ಯ ಸಂಕುಲ ಉಳಿವಿನ ಬಗ್ಗೆ ಜಾಗೃತ ಗೊಂಡು ಹಸಿರು ಉಳಿಸಬೇಕು ಎಂದರು.

ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಮಾತನಾಡಿ, ಸಂಘ ಸಂಸ್ಥೆಗಳು ಈ ರೀತಿಯ ಕಾರ್ಯಕ್ರಮ ಮಾಡುತ್ತಿರುವದು ಶ್ಲಾಘನೀಯ. ಯುವ ಜನಾಂಗ ಕೂಡ ಪರಿಸರ ಉಳಿವು ಮಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದರು.

ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಅಶೋಕ್ ಹನುಗುಂದ, ಪೊನ್ನಂಪೇಟೆ ಜೆಸಿಐ ನಿಸರ್ಗದ ಕಾರ್ಯದರ್ಶಿ ಸಿಂಗಿ ಸತೀಶ್, ಖಜಾಂಚಿ ವಿಕ್ರಂ, ನಿರ್ದೇಶಕರಾದ ವಿನೋದ್, ಧನಂಜಯ್, ಮೆಹರೂಫ್, ನಾಂಗಲ ಯುವಕ ಸಂಘದ ಅಧ್ಯಕ್ಷ ವಸಂತ್, ಸದಸ್ಯರಾದ ಕುಟ್ಟಪ್ಪ, ಬಿದ್ದಪ್ಪ, ಮುತ್ತಪ್ಪ, ಕಾವೇರಪ್ಪ, ಗೋಪಾಲ್, ಕಾವೇರಿ ಕಾಲೇಜ್ ಎನ್‍ಎಸ್‍ಎಸ್ ಅಧಿಕಾರಿ ವನಿತ್ ಕುಮಾರ್ ಹಾಗೂ ರೀತಾ ಪಾಲ್ಗೊಂಡಿದ್ದರು.ಮೂರ್ನಾಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿವಿಧ ಶಾಲೆ, ಮಹಿಳಾ ಸಮಾಜ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮೂರ್ನಾಡು ವಲಯದ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪಾರಾಣೆ, ಬಲಮುರಿ, ವಾಟೆಕಾಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಕಬ್ಬಡಕೇರಿ ಮಹಿಳಾ ಸಮಾಜ, ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ವಲಯ ಮೇಲ್ವಿಚಾರಕಿ ಪೂರ್ಣಿಮ ಆಚಾರ್ಯ, ಸೇವಾ ಪ್ರತಿನಿಧಿಗಳು, ಶಾಲಾ ಮುಖ್ಯ ಶಿಕ್ಷಕರು, ಸ್ವಸಹಾಯ ಸಂಘದ ಪದಾಧಿಕಾರಿಗಳು ಹಾಜರಿದ್ದರು.ವೀರಾಜಪೇಟೆ: ಅರಣ್ಯಗಳನ್ನು ನಾಶ ಮಾಡದೆ ಮರ-ಗಿಡಗಳನ್ನು ಬೆಳೆಸಿ ಉಳಿಸುವದರಿಂದ ಸಕಾಲದಲ್ಲಿ ಮಳೆ-ಬೆಳೆಗೆ ಅನುಕೂಲವಾಗಲಿದೆ ಎಂದು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಹೇಳಿದರು.

ವನ ಮಹೋತ್ಸವದ ಅಂಗವಾಗಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಯಕರ್ನಾಟಕ ತಾಲೂಕು ಹಾಗೂ ನಗರ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಜಯ ಕರ್ನಾಟಕ ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಸ್ವಚ್ಛತೆಯನ್ನು ಕಾಪಾಡಿಕೊಂಡು ಉತ್ತಮ ಪರಿಸರ ನಿರ್ಮಾಣವಾದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಇದೇ ಸಂದರ್ಭ ಸಂಘಟನೆಯ ತಾಲೂಕು ಸಮಿತಿ ಅಧ್ಯಕ್ಷ ಅನಿಲ್ ಅಯ್ಯಪ್ಪ, ಉಪಾಧ್ಯಕ್ಷ ಸುನು ಸುಬ್ಬಯ್ಯ, ಡಾ. ಗಿರಿಧರ್, ಡಾ. ಅನಿಲ್, ಅರಣ್ಯಾಧಿಕಾರಿ ಸೋಮಯ್ಯ, ಲೊಕೇಶ್ ಮತ್ತಿತರರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸ್ವಸಹಾಯ ಸಂಘದ ವತಿಯಿಂದ ಗದ್ದೆಹಳ್ಳದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಆಚರಿಸಲಾಯಿತು.

ಗದ್ದೆಹಳ್ಳದ ಸರಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಸದಸ್ಯರುಗಳಾದ ಕೆ.ಇ.ಕರೀಂ, ನಾಗರತ್ನ ಸುರೇಶ್ ಅವರುಗಳು ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಂಟಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಷ್ಮ, ಶಾಲೆಯ ಮುಖ್ಯೋಪಾಧ್ಯಾಯಿನಿ ಕುಮಾರಿ ಮೀನಾಕ್ಷಿ, ಸೇವಾ ಪ್ರತಿನಿಧಿ ಜ್ಯೋತಿಲಕ್ಷ್ಮಿ, ಸಹ ಶಿಕ್ಷಕಿಯರು ಹಾಗೂ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.