ಮಡಿಕೇರಿ, ಜು. 28: ಭಾರತದ ಸಂವಿಧಾನದಡಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸಗಳನ್ನು ಕಾನೂನಿನ ಇತಿಮಿತಿಗಳಲ್ಲಿ ನಿರ್ವಹಿಸುವ ಮೂಲಕ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಜಾಗರೂಕ ಹೆಜ್ಜೆ ಇಡಬೇಕೆಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಆರ್.ಕೆ. ಜಿ.ಎಂ.ಎಂ. ಮಹಾಸ್ವಾಮೀಜಿ ಕರೆ ನೀಡಿದ್ದಾರೆ.ವೈದ್ಯಕೀಯ ಕ್ಷೇತ್ರ ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಕಾನೂನಿನ ಅರಿವಿನೊಂದಿಗೆ, ಎಲ್ಲರಿಗೂ ಒಳಿತಾಗುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ನ್ಯಾಯಾಧೀಶರು ನೆನಪಿಸುತ್ತಾ, ನಮ್ಮ ಸಂವಿಧಾನದಂತೆ ಕಾನೂನಿಗಿಂತ ದೊಡ್ಡವರು ಯಾರೂ ಅಲ್ಲವೆಂದು ನೆನಪಿಸಿದರು. ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದೇಶದ ಸಂಸತ್ತು ಸೇರಿದಂತೆ ನ್ಯಾಯಾಂಗ, ಕಾರ್ಯಾಂಗಗಳು ಪರಸ್ಪರ ನಂಬಿಕೆಯಿಂದ ಸಂವಿಧಾನ ವಿಧಿಸಿರುವ ಕಾನೂನನ್ನು ಪರಿಪಾಲಿಸುತ್ತಾ, ವೃತ್ತಿ ಜೀವನದಲ್ಲಿ ಯಾರಿಗೂ ಕೆಡುಕು ಬಯಸದೆ ಕರ್ತವ್ಯನಿರತರಾಗಿರುವಂತೆ ತಿಳಿ ಹೇಳಿದ ಅವರು, ದುರುದ್ದೇಶವಿಲ್ಲದೆ ಎದುರಾಗುವ ಆಕಸ್ಮಿಕ ಘಟನೆಗಳಿಂದ ಕಾನೂನಿನಲ್ಲಿ ರಕ್ಷಣೆಯನ್ನು ಕೂಡ ಸಂವಿಧಾನದಲ್ಲಿ ನೀಡಲಾಗಿದೆ ಎಂದು ನೆನಪಿಸಿದರು.
ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ನುಡಿಯಾಡಿದ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಹಾಗೂ ನಿರ್ದೇಶಕ ಡಾ. ಬಿ.ಜೆ. ಮಹೇಂದ್ರ ಅವರು, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಭಯದ ನೆರಳಿನಲ್ಲಿ ಕೆಲಸ ಮಾಡಬೇಕಾದ ಸನ್ನಿವೇಶ ಕಾಣುವಂತಾಗಿದೆ ಎಂದು ವಿಷಾದದಿಂದ ನುಡಿದರು.
ಪ್ರತಿಯೊಬ್ಬ ರೋಗಿಯ ಕ್ಷೇಮವನ್ನೇ ಬಯಸುವ ವೈದ್ಯಕೀಯ ಬಳಗದಿಂದ 999 ಮಂದಿಯ ಜೀವ ಉಳಿಸಿ, ವಿಷಮ ಸನ್ನಿವೇಶದಿಂದ ಒಬ್ಬ ರೋಗಿ ಅಸು ನೀಗಿದ್ದರೆ, ಅಷ್ಟೂ ಮಂದಿಯ ಜೀವ ಉಳಿಸಲು ಶ್ರಮಿಸಿದ ವೈದ್ಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿರುವದು ಆಘಾತಕಾರಿ ಎಂದರು. ಸಮಾಜದಲ್ಲಿ ಇಂದು ಇಂತಹ ಸನ್ನಿವೇಶದ ನಡುವೆ ಕೆಲಸ ನಿರ್ವಹಿಸಬೇಕಿದ್ದು, ಪ್ರತಿ ದಿನ ಹಾಗೂ ಪ್ರತಿಕ್ಷಣ ಒಂದು ರೀತಿಯ ಆತಂಕದ ನಡುವೆ ವೈದ್ಯಕೀಯ ಕ್ಷೇತ್ರದಲ್ಲಿ ಕರ್ತವ್ಯವನ್ನು ಮುಂದುವರೆಸಬೇಕಾದ ಬದುಕು ತಮ್ಮಗಳದೆಂದು ನೋವಿನ ನುಡಿಯಾಡಿದರು.
(ಮೊದಲ ಪುಟದಿಂದ)
ಎಸ್‍ಪಿ ಭರವಸೆ : ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಯಾವದೇ ಕ್ಷೇತ್ರದಲ್ಲಿ ಭಯದ ವಾತಾವರಣದಲ್ಲಿ ಯಾರೊಬ್ಬರೂ ಕರ್ತವ್ಯ ನಿರ್ವಹಿಸದೆ, ತಮ್ಮ ತಮ್ಮ ಕರ್ತವ್ಯಗಳನ್ನು ಕಾನೂನು ಬದ್ಧ ಮಾರ್ಗದಲ್ಲಿ ಧೈರ್ಯದಿಂದ ನಿರ್ವಹಿಸುವಂತೆ ಕರೆ ನೀಡಿದರು. ವೈದ್ಯಕೀಯ ಕ್ಷೇತ್ರ ಸಹಿತ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಕಾನೂನು ಸಮಾಜ ದೃಷ್ಟಿಯಿಂದ ರಕ್ಷಣೆ ಮಾಡುವದಾಗಿಯೂ ಅವರು ಭರವಸೆ ನೀಡಿದರು.
ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಹಾಗೂ ಸ್ತ್ರೀ ಸಮಾಜಕ್ಕೆ ಕಾನೂನಿನಲ್ಲಿ ರಕ್ಷಣೆಯಿದ್ದು, ಕಾನೂನು ಉಲ್ಲಂಘನೆ ಮಾಡಿ ಅಥವಾ ದುಷ್ಕøತ್ಯ , ದಂಧೆಗಳಲ್ಲಿ ತೊಡಗಿದರೆ ಮಾತ್ರ ಭಯ ಪಡಬೇಕಾದೀತು ಎಂದ ಅವರು, ಅಂತಹ ಸಮಾಜಘಾತುಕರನ್ನು ಹತ್ತಿಕ್ಕಲು ಕಾನೂನು ತನ್ನದೇ ಹಾದಿಯಲ್ಲಿ ಕೆಲಸ ಮಾಡಲಿದೆ ಎಂದು ಮಾರ್ನುಡಿದರು.
ಒಂದು ವೇಳೆ ಪೊಲೀಸರ ಬಳಿ ಶಸ್ತ್ರ ಇಲ್ಲದಿದ್ದರೆ ಇನ್ನೂ ಏನೇನೋ ಪರಿಸ್ಥಿತಿ ಎದುರಾಗುತ್ತಿತ್ತು ಊಹಿಸೋಣ ಎಂದ ಅವರು, ಹೀಗಿದ್ದೂ ಪೊಲೀಸರೂ ರಕ್ಷಣೆಯಿಲ್ಲದೆ ಪರಿಸ್ಥಿತಿ ನಿಭಾಯಿಸುವ ಸನ್ನಿವೇಶ ಎದುರಾಗಿದೆ ಎಂದರು. ಕಾರ್ಯಾಗಾರದಲ್ಲಿ ವಿವಿಧ ವಿಷಯಗಳನ್ನು ಕುರಿತು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಡಿ. ಪವನೇಶ್, ವಿವಿಧ ವೈದ್ಯಕೀಯ ತಜ್ಞರುಗಳಾದ ಡಾ. ಎನ್. ಜನಾರ್ಧನ, ಡಾ. ಬಿ.ಎಂ. ಬಾಲರಾಜ್, ಡಾ. ಉಮೇಶ್‍ಬಾಬು, ಡಾ. ಎನ್. ಶೈಲಜಾ ಮೊದಲಾದವರು ವಿಚಾರ ಮಂಡಿಸಿದರು. ಈ ಸಂಬಂಧ ಮುಕ್ತ ಚರ್ಚೆ ಹಾಗೂ ಪ್ರಶ್ನೆಗಳೊಂದಿಗೆ ಸಂಶಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.
ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕಾರ್ಯಪ್ಪ, ವಿವಿಧ ವಿಭಾಗದ ಮುಖ್ಯಸ್ಥರುಗಳಾದ ಡಾ. ಮೇರಿ ನಾಣಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀರಂಗಪ್ಪ, ಡಾ. ಮೋಹನ್ ಅಪ್ಪಾಜಿ, ಡಾ. ಪಿ.ಎನ್. ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರು, ವೈದ್ಯಕೀಯ ರಂಗದ ಪ್ರಮುಖರು, ಪೊಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.