ಕೂಡಿಗೆ, ಜು. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದು ಗೂರು ಗ್ರಾಮದ ಸಮೀಪವಿರುವ ಜೇನು ಕುರುಬರ ಸೀತಾ ಕಾಲೋನಿ ಯಲ್ಲಿ ವಾಸವಿರುವ 29 ಕುಟುಂಬ ಗಳಿಗೆ ಗುಡಿಸಲು ಮುಕ್ತ ಸರಕಾರದ ಯೋಜನೆ ತಲಪದಂತಾಗಿದೆ. ಸರಕಾರದ ಹೊಸ ಹೊಸ ಯೋಜನೆಗಳು ಇಲ್ಲಿಗೆ ತಲಪದೆ ಈ ಹಾಡಿಯಲ್ಲಿ ವಾಸಿಸುವ ಜೇನುಕುರುಬರ ಕೆಲವು ಕುಟುಂಬಗಳು ಬಿದಿರುಗಳಿಂದ ಮಣ್ಣಿನ ಗೋಡೆ ಹಾಕಿ ಮನೆ ನಿರ್ಮಿಸಿಕೊಂಡು ಪ್ಲಾಸ್ಟಿಕ್ ಹೊದಿಕೆಯ ನೆರವಿನೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ಸೀತಾ ಕಾಲೋನಿಯ ಸಮೀಪದಲ್ಲಿ ಹಾರಂಗಿ ಜಲಾಶಯದ ನಾಲೆಗಳು ಹರಿಯುವದರಿಂದ ಗೋಡೆಗಳು ನೀರಿನ ತೇವಾಂಶದಿಂದ ಶೀತಮಯವಾಗಿ ಕೆಲವು ಮನೆಗಳು ಬಿರುಕು ಬಿಟ್ಟು, ಜೊತೆಗೆ ಗೋಡೆಗಳು ನೆಲಕ್ಕುರುಳಿವೆ. ಸೀತಾಕಾಲೋನಿ, ಕಾಳಿದೇವನ ಹೊಸೂರು, ಹುದುಗೂರು ಈ ಸುತ್ತಮುತ್ತಲ ಗ್ರಾಮ ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವದೇ ರೀತಿಯ ಸ್ಪಂದನ ದೊರಕದೆ ಆದಿಮಾನವನಂತೆ ಬದುಕುವ ಪರಿಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಎಂದು ಮಾಡಲು ಹೊರಟಿರುವ ಜನಪ್ರತಿ ನಿಧಿಗಳು ಇದುವರೆಗೂ ಇದರತ್ತ ಗಮನಹರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿ ತೆರಳುತ್ತಾರೆ ವಿನಃ ಯಾವದೇ ಸೌಲಭ್ಯ ಕಲ್ಪಿಸಿಲ್ಲ ಎಂಬದು ನಿವಾಸಿಗಳ ಆರೋಪ.

ಇದರ ಜೊತೆಯಲ್ಲಿ ಸಮೀಪದಲ್ಲೇ ಮೀಸಲು ಅರಣ್ಯದಲ್ಲಿ ಕಾಡಾನೆಗಳ ಹಾವಳಿ ಇದ್ದು, ಹಾಡಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೇನು ಕುರುಬ ಕುಟುಂಬಗಳಿಗೆ ಹಕ್ಕುಪತ್ರ ಗಳನ್ನು ನೀಡಿದ್ದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಜೇನು ಕುರುಬರ ಹಾಡಿಗಳಿಗೆ ಸೋಲಾರ್ ಬೇಲಿ ಅಳವಡಿಸಿಲ್ಲ. ಕಾಡಾನೆಗಳು ಮನೆಗಳತ್ತ ಬರುತ್ತವೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಸೋಲಾರ್ ಬೇಲಿಯ ವ್ಯವಸ್ಥೆಯನ್ನು ಅಳವಡಿಸಲು ಅಧಿಕಾರಿಗಳು ಮುಂದಾಗಬೇಕೆಂದು ಹಾಡಿಯ ನಿವಾಸಿಗಳಾದ ಗೌರಿ, ರಾಜು, ಪೂವಮ್ಮ ಆಗ್ರಹಿಸಿದ್ದಾರೆ.

ಮರದ ಊರುಗೋಲು: ಕೆಲವು ಜೇನುಕುರುಬರ ಮನೆಗಳ ಮಣ್ಣಿನ ಗೋಡೆಗಳು ಬಿರುಕುಬಿಟ್ಟು, ಮಳೆ ನೀರು ಮನೆಯೊಳಗೆ ನಿಲ್ಲುತ್ತದೆ. ಮಲಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇಲಾಖೆಯ ಮೂಲಕ ಗುತ್ತಿಗೆ ನೀಡಿ ಜೇನು ಕುರುಬರ ಹಾಡಿಯ ನಿವಾಸಿಗಳಿಗೆ 2014-15ನೇ ಸಾಲಿನಲ್ಲಿ ನಿರ್ಮಿಸಿದ ಮನೆಗಳು ಇದೀಗ ವಾಸ ಮಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಮನೆಯ ಮೇಲ್ಚಾವಣಿಯ ಮಧ್ಯಭಾಗದಲ್ಲಿ ದೊಡ್ಡಹೆಂಚುಗಳನ್ನು ಹಾಕುವಲ್ಲಿ ಸಮರ್ಪಕ ಕಾಮಗಾರಿ ನಿರ್ವಹಿಸದೆ ನೀರು ಸೋರುತ್ತದೆ. ಅಲ್ಲದೆ, ಮನೆಯ ಮುಂಭಾಗಕ್ಕೂ ಒಂದು ಅಡಿಯಷ್ಟು ಹೆಂಚನ್ನು ಹಾಕದೆ ಮನೆಯ ಗೋಡೆ ಮೇಲೆ ನೀರು ಬೀಳುತ್ತದೆ. ಹೆಂಚುಗಳ ಮಧ್ಯದಿಂದ ನೀರು ಬೀಳದಂತೆ ಹುಲ್ಲು ಹಾಕಿ ಕೊಂಡು ವಾಸಿಸುತ್ತಿದ್ದೇವೆ ಎಂದು ಜೇನು ಕುರುಬರ ಮುತ್ತಪ್ಪ, ಗಂಗಮ್ಮ, ಜಯ ತಿಳಿಸಿದ್ದಾರೆ.

‘ನಾನ್ ಏನ್ ಮಾಡ್ನೆ, ಆಪೀಸಿಗೆ ಅಲ್ದು ಅಲ್ದು ಸುಸ್ತು...’ ಸೀತಾ ಕಾಲೋನಿಯಲ್ಲಿ ಮನೆಗಳನ್ನು ಇಲಾಖೆಯ ವತಿಯಿಂದ ನಿರ್ಮಿಸಿ ಕೊಡಲು ಸಂಬಂಧಪಟ್ಟವರು ದಾಖಲಾತಿಗಳನ್ನು ಕೇಳುತ್ತಾರೆ. ಆದರೆ, ನಾವುಗಳು ಪಂಚಾಯ್ತಿಯಿಂದ ಹಿಡಿದು ತಾಲೂಕು ಮತ್ತು ಜಿಲ್ಲಾ ಮಟ್ಟದ ವರೆಗೂ ಅಲೆದರೂ ಇದುವರೆಗೂ ಅರ್ಜಿಯ ಬಗ್ಗೆ ಯಾವದೇ ಕ್ರಮ ಕೈಗೊಂಡಿಲ್ಲ. ನಾವು ಮಳೆ, ಚಳಿಯಲ್ಲಿಯೂ ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ಈ ಮನೆಯ ಸಮೀಪಕ್ಕೆ ಕಾಡಾನೆಗಳು ಬರುತ್ತಿರುತ್ತವೆ. ನಾವು ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೂವಮ್ಮ ಮತ್ತು ರಾಜು, ತಮ್ಮಣ್ಣ ಹಾಗೂ ಹಾಡಿಯ ನಿವಾಸಿಗಳು ‘ಶಕ್ತಿ’ಯೊಂದಿಗೆ ನೋವಿನ ನುಡಿಯಾಡಿದರು.

ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ನಿವಾಸಿಗಳಿಗೆ ಐಡಿಟಿಪಿ ವತಿಯಿಂದ ನೀರನ್ನು ಒದಗಿಸುವ ಯೋಜನೆ ಹಮ್ಮಿಕೊಂಡು ಮೂರ್ನಾಲ್ಕು ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಬೋರ್‍ವೆಲ್ ಕೊರೆಸಿ ಒಂದು ವರ್ಷ ಕಳೆದು ಮೋಟಾರ್ ಇಳಿಸಿದರೂ ಎರಡು ತಿಂಗಳ ಹಿಂದೆಯಷ್ಟೇ ಕುಡಿಯುವ ನೀರಿನ ಭಾಗ್ಯ ದೊರೆತರೂ ಸಹ 15 ನಿಮಿಷಗಳು ಮಾತ್ರ ಬೋರ್‍ವೆಲ್‍ನಲ್ಲಿ ಕುಡಿಯಲು ನೀರು ಬರುತ್ತದೆ.

ಇದನ್ನು ಅರಿತ ಕೂಡಿಗೆ ಗ್ರಾಮ ಪಂಚಾಯಿತಿ ಸಮೀಪದ ದೇವಾಲಯ ಸಮಿತಿಯವರು ಕೊರೆಸಿದ್ದ ಬೋರ್‍ವೆಲ್ ನಿಂದ ಪೈಪ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಯೋಜನೆ ಯಡಿಯಲ್ಲಿ (ಎಸ್‍ಸಿ,ಪಿಟಿ,ಎಸ್‍ಪಿ) ಈಗಾಗಲೇ ಸರಕಾರಗಳಿಂದ ಅನೇಕ ಯೋಜನೆಗಳಿಗೆ ಹಣ ಬರುತ್ತಿದೆ. ಈ ಯೋಜನೆಗಳ ಮೂಲಕ ಸೀತಾ ಕಾಲೋನಿ ಶೀತವಾಗುವದನ್ನು ತಪ್ಪಿಸಲು ಹಾರಂಗಿ ನೀರಾವರಿ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಮುಂದಾಗಬೇಕು. ಈ ಪ್ರದೇಶವು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಗೆ ಸೇರುವದರಿಂದ ಅಧಿಕಾರಿಗಳು ಜಿಲ್ಲೆಗೆ ಬಂದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಎಂದು ಕೂಡಿಗೆ ಗ್ರಾ.ಪಂ. ಸದಸ್ಯ ಹೆಚ್.ಎಸ್. ರವಿ ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.