ವೀರಾಜಪೇಟೆ, ಜು. 27: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 45 ವರ್ಷಗಳ ಹಿಂದಿನ ಜಾಗವನ್ನು ಭೂಪರಿವರ್ತನೆ ಮಾಡುವಂತೆ ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕರು ಪಟ್ಟಣ ಪಂಚಾಯಿತಿಗೆ ಹೊರಡಿಸಿರುವ ಸುತ್ತೋಲೆ ಕಾನೂನು ಬಾಹಿರವಾಗಿದ್ದು ಇದನ್ನು ತಕ್ಷಣ ಹಿಂಪಡೆಯದಿದ್ದರೆ ಭಾರತೀಯ ಜನತಾ ಪಾರ್ಟಿಯ ನಗರ ಸಮಿತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಿನ ಸುತ್ತೋಲೆಯಿಂದ ಮೂರು ತಿಂಗಳುಗಳಿಂದ ಜಾಗದ ಮಾಲೀಕರಿಗೆ ಕಟ್ಟಡ ಕಟ್ಟಲು ಮಡಿಕೇರಿಯ ಟೌನ್ ಪ್ಲಾನಿಂಗ್ ಹಾಗೂ ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಯಾವದೇ ಅನುಮತಿ ದೊರೆಯುತ್ತಿಲ್ಲ. ಹಳೆ ಕಟ್ಟಡದ ಜಾಗದ ಭೂ ಪರಿವರ್ತನೆ ಸಾಧ್ಯವಿಲ್ಲ. ಈಗ ಪಟ್ಟಣದಲ್ಲಿ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲು ಭೂ ಪರಿವರ್ತನೆಯ ದಾಖಲಾತಿಯನ್ನು ಕೇಳುತ್ತಿದ್ದಾರೆ. 1955 ರಿಂದ 1976 ರವರೆಗೂ ಭೂ ಪರಿವರ್ತನೆಯ ದಾಖಲೆ ಅಗತ್ಯವಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರಕಾರ ಭೂ ಪರಿವರ್ತನೆಯನ್ನು ಕಡ್ಡಾಯಗೊಳಿಸಿದೆ. ಭೂ ಪರಿವರ್ತನೆಯ ಆದೇಶ ದೊಡ್ಡ ನಗರಗಳಲ್ಲಿ ನಗರ ಸಭೆಯ ಲೇಔಟ್‍ಗಳಿಗೆ ಅನ್ವಯವಾಗಲಿದೆ. ಇದರ ಮಾಹಿತಿಯನ್ನು ಸರಿಯಾಗಿ ತಿಳಿಯದೆ ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿರುವದು ಕ್ರಮಬದ್ದವಲ್ಲ ಎಂದು ದೂರಿದರು.

ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಜೆ. ದಿವಾಕರ ಶೆಟ್ಟಿ ಮಾತನಾಡಿ, ಪಟ್ಟಣ ಪಂಚಾಯಿತಿ ಕಟ್ಟಡ ಕೆಡವಲು ನೀಡಿದ ಅನುಮತಿ ಮೇರೆ ಪಟ್ಟಣದ ಅನೇಕ ಮಂದಿ ಕಟ್ಟಡವನ್ನು ಕೆಡವಿದ್ದಾರೆ. ನಂತರ ಕಟ್ಟಡ ನಿರ್ಮಾಣದ ಅನುಮತಿಗಾಗಿ ಕಾಯುತ್ತಿದ್ದಾರೆ. ಆದರೆ ಈ ತನಕ ಅವರುಗಳಿಗೆ ಅನುಮತಿ ದೊರೆಯದೆ ಆತಂಕ ಪರಿಸ್ಥಿತಿಯಲ್ಲಿದ್ದಾರೆ. ಪಟ್ಟಣ ಪಂಚಾಯಿತಿ ಆಡಳಿತ ಇದರ ಬಗ್ಗೆ ಗಮನ ಹರಿಸಿ ಮಡಿಕೇರಿಯ ಟೌನ್ ಪ್ಲಾನಿಂಗ್‍ಗೆ ಕಡತಗಳನ್ನು ಕಳಿಸದೆ ಪಟ್ಟಣ ಪಂಚಾಯಿತಿಯೇ ಈ ಹಿಂದಿನಂತೆಯೇ ಅನುಮತಿ ನೀಡುವಂತಾಗಬೇಕು ಎಂದರು.

ಗೋಷ್ಠಿಯಲ್ಲಿ ನಗರ ಸಮಿತಿ ಉಪಾಧ್ಯಕ್ಷೆ ಬೋವ್ವೇರಿಯಂಡ ಆಶಾ ಸುಬ್ಬಯ್ಯ, ಕಾರ್ಯದರ್ಶಿ ಯೋಗೀಶ್ ನಾಯ್ಡು ಉಪಸ್ಥಿತರಿದ್ದರು.