ಸೋಮವಾರಪೇಟೆ,ಜು.27: ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶಗಳ ಕೃಷಿ ಭೂಮಿಗೆ ಕೂಡಲೇ ನೀರು ಹರಿಸಬೇಕೆಂದು ತಾಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಕ್ರಮಕ್ಕಾಗಿ ಸರಕಾರಕ್ಕೆ ಕಳುಹಿಸಿ ಕೊಡುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಇಲ್ಲಿನ ಕೃಷಿ ಇಲಾಖೆಯಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಹಾರಂಗಿ ಆಣೆಕಟ್ಟಿನೊಳಗೆ ಬಹುತೇಕ ಹೂಳು ತುಂಬಿದ್ದು, ಇಲ್ಲಿ ಬೀಳುವ ಅಲ್ಪಸ್ವಲ್ಪ ಮಳೆಗೆ ಆಣೆಕಟ್ಟು ಭರ್ತಿಯಾಗಿದೆ. ಇಲ್ಲಿಂದ ನಾಲೆಗಳ ಮೂಲಕ ಹೊರ ಜಿಲ್ಲೆಗೆ ನೀರು ಬಿಡಲಾಗುತ್ತಿದೆ. ಆದರೆ ಜಿಲ್ಲೆಯೊಳಗಿನ ಕೃಷಿಕರು ನೀರಿಲ್ಲದೆ, ಕೃಷಿ ಮಾಡಲು ಅಸಾಧ್ಯವಾಗಿದ್ದು, ಕೃಷಿಕರು ಆತಂಕದಲ್ಲಿದ್ದಾರೆ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭ ಸಭೆಯಲ್ಲಿದ್ದ ಸದಸ್ಯರುಗಳು ನಮ್ಮ ತಾಲೂಕಿನಲ್ಲಿರುವ ನಾಲೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ನೀರು ಬಿಡಬೇಕೆಂದು ಆಗ್ರಹಿಸಿ ಕೃಷಿ, ಜಲಸಂಪನ್ಮೂಲ ಸಚಿವರುಗಳಿಗೆ ಹಾಗೂ ಸರಕಾರಕ್ಕೆ ಪತ್ರ ಬರೆದು ಆಗ್ರಹಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಳೆದ ಸಾಲಿನಲ್ಲಿ ಸಾಕಷ್ಟು ಮಳೆ ಬೀಳದ ಪರಿಣಾಮ ತಾಲೂಕನ್ನು ಬರಪೀಡಿತ ತಾಲೂಕೆಂದು ಸರಕಾರ ಘೋಷಣೆ ಮಾಡಿದೆ. ಆದರೆ ಬೆಳೆ ವಿಮೆ ಮಾತ್ರ ಒಂದು ನಯಾಪೈಸೆ ಕೂಡ ಕೃಷಿಕರಿಗೆ ತಲುಪಿಲ್ಲ. ಈ ಬಗ್ಗೆ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ, ಕೂಡಲೆ ಕೃಷಿಕರಿಗೆ ವಿಮೆಯ ಫಲವನ್ನು ನೀಡಬೇಕೆಂದು ಸದಸ್ಯರುಗಳು ಆಗ್ರಹಿಸಿದರು.

ಈಗಾಗಲೆ ಕೊಳವೆ ಬಾವಿಗಳನ್ನು ತೋಡುತ್ತಿದ್ದು, ಹೊಸದಾಗಿ ಕೊಳವೆ ಬಾವಿಯನ್ನು ಹೆಚ್ಚಿನ ಆಳಕ್ಕೆ ತೋಡುತ್ತಿದ್ದಂತೆ ಅದರ ಸುತ್ತಮುತ್ತಲಲ್ಲಿ ಕಡಿಮೆ ಆಳದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಇನ್ನೊಂದೆಡೆ ಯಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿದೆ. ಇದು ಹೀಗೆಯೇ ಮುಂದುವರೆದಲ್ಲಿ ಅಂತರ್ಜಲ ಇನ್ನೂ ಪಾತಾಳ ಕ್ಕಿಳಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭ ಸಭೆಯಲ್ಲಿದ್ದ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ಮಾತನಾಡಿ, ಬೆಟ್ಟದ ಮೇಲಿಂದ, ತಪ್ಪಲುಗಳಿಂದ ಹರಿದು ಬಂದು ನದಿಗಳ ಮೂಲಕ ವೃತಾ ಸಮುದ್ರ ಸೇರುವ ನೀರನ್ನು ಅಲ್ಲಲ್ಲಿ ತಡೆದು ಚೆಕ್ ಡ್ಯಾಂಗಳನ್ನು ನಿರ್ಮಿಸಿ, ಕೃಷಿ ಭೂಮಿಗೆ ಉಪಯೋಗಿಸಲು ಅನುವು ಮಾಡಿಕೊಟ್ಟರೆ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಇದನ್ನು ಪರಿಗಣಿಸಿದ ಸಮಿತಿ ಸದಸ್ಯರು ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ವೈಜ್ಞಾನಿಕ ಚಿಂತನೆಗಳು ಮೂಡಿದಾಗ ಅಂತರ್ಜಲ ಹೆಚ್ಚುತ್ತದೆ. ಅದೇ ರೀತಿ ಅಣೆಕಟ್ಟು ಸೇರಿದಂತೆ ಇರುವ ಕೆರೆಗಳನ್ನು ಹೂಳೆತ್ತಿ ಜಲಮೂಲಗಳನ್ನು ಅಭಿವೃದ್ಧಿ ಪಡಿಸಿ, ರಕ್ಷಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ಇಲಾಖೆಯು ತನ್ನ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿಕರ ಬೇಡಿಕೆಯಂತೆ ಭತ್ತದ ಅಲ್ಪಾವಧಿ ಹಾಗೂ ದೀರ್ಘಾವಧಿಯ ವಿವಿಧ ಭತ್ತದ ಬೀಜಗಳನ್ನು ವಿತರಣೆ ಮಾಡಲಾಗಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಹಸಿರೆಲೆ ಗೊಬ್ಬರದ ಬೀಜಗಳನ್ನು ವಿತರಿಸಲಾಗಿದೆ ಎಂದರು.

ಕಾರ್ಮಿಕರ ಕೊರತೆಯಿಂದ ಕೃಷಿಯಲ್ಲಿ ಹಿನ್ನಡೆ ಸಾಗುತ್ತಿದೆ ಎಂಬ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಟ್ರಾಕ್ಟರ್, ಟಿಲ್ಲರ್, ಕಳೆಕೊಚ್ಚುವ, ಮರ ಕತ್ತರಿಸುವ ಯಂತ್ರಗಳಲ್ಲದೆ, ನಾಟಿಯಂತ್ರಗಳನ್ನು ಸಹಾಯಧನದೊಂದಿಗೆ ನೀಡಲಾಗುತ್ತಿದೆ. ಸರಕಾರವು ಕೃಷಿ ಭಾಗ್ಯಯೋಜನಾ ವ್ಯಾಪ್ತಿಗೆ ಮಲೆನಾಡು ಪ್ರದೇಶಗಳನ್ನು ಸೇರಿಸಿದ್ದು, ನೈಸರ್ಗಿಕ ನೀರಿನ ಕೃಷಿಹೊಂಡ, ಪಂಪ್‍ಸೆಟ್ ಹಾಗೂ ಸ್ಪಿಂಕ್ಲರ್ ಸೇರಿದಂತಹ ಘಟಕಗಳಿಗೆ ಸಾಮಾನ್ಯ ವರ್ಗದವರಿಗೆ ಶೇ. 80, ಪ.ಜಾತಿ-ಪ.ಪಂಗಡದವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವದು ಎಂದರು.

ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲದ ಕುಶಾಲನಗರದ ಅಧಿಕಾರಿ ವೆಂಕಟೇಶ್ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜ್, ಕಾರ್ಯದರ್ಶಿ ಎಂ.ಪಿ. ರಮೇಶ್, ಖಜಾಂಚಿ ಟಿ.ಕೆ. ರಮೇಶ್, ಕೃಷಿ ಅಧಿಕಾರಿ ಮುಕುಂದ ಉಪಸ್ಥಿತರಿದ್ದರು.