ಪೊನ್ನಂಪೇಟೆ, ಜು. 29: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಆಶ್ರಯದಲ್ಲಿ ಪ್ರಾಯೋಜಕರ ನೆರವಿನಲ್ಲಿ ತಾ. 30 ರಂದು (ಇಂದು) ಬಿಟ್ಟಂಗಾಲದಲ್ಲಿ ನಡೆಯಲಿರುವ 5ನೇ ವರ್ಷದ ರಾಜ್ಯಮಟ್ಟದ ನಿಸರ್ಗ ಜೇಸಿ ಕೆಸರು ಗದ್ದೆ ಕ್ರೀಡೋತ್ಸವ 2017ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕ್ರೀಡೋತ್ಸವ ಆಯೋಜನೆಗಾಗಿ ಕಳೆದ 1 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿರುವ ಪೊನ್ನಂಪೇಟೆಯ ನಿಸರ್ಗ ಜೇಸಿಸ್ ತಂಡ, ಇದೀಗ ಕ್ರೀಡಾಕೂಟದ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ ಎಂದು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರೀಡೋತ್ಸವ ಜರುಗುವ ವೀರಾಜಪೇಟೆ-ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿರುವ ಬಿಟ್ಟಂಗಾಲದ ನಿವೃತ ಮೇ.ಜ. ಕುಪ್ಪಂಡ ಪಿ. ನಂಜಪ್ಪ ಅವರ ಭತ್ತದ ಗದ್ದೆಯನ್ನು ಇದೀಗ ಸಜ್ಜುಗೊಳಿಸಲಾಗಿದ್ದು, ಅಂತಿಮ ಹಂತದ ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕ್ರೀಡೋತ್ಸವದ ಕುರಿತು ಹೇಳಿಕೆ ನೀಡಿರುವ ಯೋಜನಾ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ಅವರು, ಕೆಸರು ಗದ್ದೆ ಫುಟ್ಬಾಲ್ ಪಂದ್ಯಾವಳಿಗೆ ಗರಿಷ್ಠ 48 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ಹೆಸರು ನೋಂದಾಯಿಸಿಕೊಳ್ಳುವ 48 ತಂಡಗಳಿಗೆ ಆದ್ಯತೆ ನೀಡಲಾಗುವದು. ಪಾಲ್ಗೊಳ್ಳುವ ಫುಟ್ಬಾಲ್ ತಂಡಗಳು ತಾ. 30 ರಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಹೆಸರು ನೋಂದಾಯಿಸಿಕೊಳ್ಳುವದು ಕಡ್ಡಾಯವಾಗಿರುತ್ತದೆ. ಫುಟ್ಬಾಲ್ ವಿನ್ನರ್ಸ್ ತಂಡಕ್ಕೆ ರೂ. 15,000 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. 10,000 ನಗದು ಜೊತೆಗೆ ಟ್ರೋಫಿ ನೀಡಲಾಗುವದು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರರೊಬ್ಬರನ್ನು ಗುರುತಿಸಿ ಅವರಿಗೆ ವಿಶೇಷ ಟ್ರೋಫಿಯನ್ನು ನೀಡಿ ಗೌರವಿಸಲಾಗುವದು. ಅಲ್ಲದೇ ವಿನ್ನರ್ಸ್ ಮತ್ತು ರನ್ನರ್ಸ್ ತಂಡದ ಎಲ್ಲ ಆಟಗಾರರಿಗೂ ವೈಯಕ್ತಿಕ ಟ್ರೋಫಿ ನೀಡಲಾಗುವದು. ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯ ವಿನ್ನರ್ಸ್ ತಂಡಕ್ಕೆ ಆಕರ್ಷಕ ಪಾರಿತೋಷಕದೊಂದಿಗೆ ರೂ. 15.000 ನಗದು ಬಹುಮಾನ, ರನ್ನರ್ಸ್ ತಂಡಕ್ಕೆ ಪಾರಿತೋಷಕದೊಂದಿಗೆ ರೂ. 10,000 ನಗದು ಬಹುಮಾನ ನೀಡಲಾಗುವದು. ಪಾಲ್ಗೊಳ್ಳುವ ತಂಡಗಳು ಬೆಳಿಗ್ಗೆ 9.30 ರೊಳಗಾಗಿ ಸ್ಥಳದಲ್ಲಿ ಹಾಜರಿರಬೇಕಾಗಿರುವದು ಕಡ್ಡಾಯವಾಗಿದೆ. ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯ ವಿನ್ನರ್ಸ್ ಮತ್ತು ರನ್ನರ್ಸ್ ತಂಡಕ್ಕೆ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕ ನೀಡಲಾಗುವದು.

ಹಗ್ಗಜಗ್ಗಾಟ ಸ್ಪರ್ಧೆಗೆ ರಾಜ್ಯದ ಕೆಲವು ಪ್ರತಿಷ್ಟಿತ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಡ್ಯ ಮತ್ತು ಕೊಡಗು ಪೊಲೀಸ್ ತಂಡ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವದು ಬಹುತೇಕ ಖಚಿತವಾಗಿದೆ. ವಿವಿಧ ವಿಭಾಗದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಬೆಳಿಗ್ಗೆ 10 ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಕೆಸರು ಗದ್ದೆ ಓಟದ ಸ್ಪರ್ಧೆ ಒಟ್ಟು 8 ವಿಭಾಗಗಳಲ್ಲಿ ನಡೆಯಲಿದೆ. 1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಬ್ ಜೂನಿಯರ್ ಬಾಲಕ-ಬಾಲಕಿಯರ ತಂಡಗಳಿಗೆ, 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳ ಜೂನಿಯರ್ ಬಾಲಕ-ಬಾಲಕಿಯರ ತಂಡಗಳಿಗೆ, 10 ರಿಂದ ದ್ವಿತೀಯ ಪಿ.ಯು.ಸಿ. ತರಗತಿವರೆಗಿನ ವಿದ್ಯಾರ್ಥಿಗಳ ಸೀನಿಯರ್ ಬಾಲಕ-ಬಾಲಕಿಯರ ತಂಡಗಳಿಗೆ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುರುಷ ಮತ್ತು ಮಹಿಳೆಯರ ಮುಕ್ತ ತಂಡಗಳಿಗೆ ಪ್ರತ್ಯೇಕವಾಗಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ದಿಲನ್ ಬೋಪಣ್ಣ ಮಾಹಿತಿ ನೀಡಿದ್ದಾರೆ.

ಕ್ರೀಡೋತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕ ರನ್ನು ದೂರವಾಣಿ ಸಂಖ್ಯೆಯಾದ 9481883738 ನಲ್ಲಿ ಸಂಪರ್ಕಿಸುವಂತೆ ಅವರು ಕೋರಿದ್ದಾರೆ.