ಕುಶಾಲನಗರ, ಜು. 29: ನಿರುದ್ಯೋಗ ನಿರ್ಮೂಲನೆ, ಯುವ ಜನತೆಯ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಕೌಶಲ್ಯ ಕರ್ನಾಟಕ ಯೋಜನೆಯಡಿ ಒಟ್ಟು 5 ಲಕ್ಷ ಜನರಿಗೆ ತರಬೇತಿ ನೀಡಲು ಯೋಜನೆ ರೂಪಿಸಿದೆ ಎಂದು ಕೊಡಗು ಜಿಲ್ಲಾ ಉದ್ಯೋಗ ಅಧಿಕಾರಿ ಸಿ. ಜಗನ್ನಾಥ್ ತಿಳಿಸಿದರು.

ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆ ಸಹಯೋಗದಲ್ಲಿ ನಡೆದ ನೋಂದಣಿ ಅಭಿಯಾನ ವನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಜ್ಯದಲ್ಲಿಯ ಕೌಶಲ್ಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಕೌಶಲ್ಯ ನೀತಿಯನ್ನು ಹೊರ ತಂದಿದೆ. ಇದಕ್ಕೆ ರಾಜ್ಯ ಸರ್ಕಾರ ಹೊಸ ಇಲಾಖೆಯನ್ನು ಸೃಷ್ಟಿಸಿದೆ. ಆಸಕ್ತ ನಿರುದ್ಯೋಗಿ ವಿದ್ಯಾವಂತ ಯುವಕರು ತಮ್ಮ ಇಚ್ಛೆಗೆ ಅನುಸಾರವಾಗಿ ಉದ್ಯೋಗ ಮತ್ತು ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಆಧಾರ್ ಸಂಖ್ಯೆ, ದೂರವಾಣಿ ಸಂಪರ್ಕ ಹಾಗೂ ಇ-ಮೇಲ್‍ನೊಂದಿಗೆ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಒಟ್ಟು 529 ವಿಭಾಗಗಳಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಯುವ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಸುಬ್ರಹ್ಮಣ್ಯ ಮಾತನಾಡಿ, ಇಂದಿನ ಶಿಕ್ಷಣ ಸಂಸ್ಥೆಗಳು ಅಕ್ಷರಸ್ಥರನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ. ನಿರುದ್ಯೋಗಿಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೌಶಲ್ಯ ತರಬೇತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಸ್ವಯಂ ಉದ್ಯೋಗಿಗಳನ್ನು ರೂಪಿಸುವದಕ್ಕೆ ಸಹಕಾರಿಯಾಗುತ್ತಿದೆ ಎಂದು ನುಡಿದರು. ಕಾರ್ಯಕ್ರಮದ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಕೌಶಲ್ಯ ಕರ್ನಾಟಕ ಸಂಚಾಲಕ ಪ್ರೊ. ಪಿ.ಟಿ. ಕಾಶಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಲಿಂಗಮೂರ್ತಿ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ನೆರವೇರಿಸಿದರು.

ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ವಸಂತಕುಮಾರಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶ್‍ಕುಮಾರ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಡಿ. ಹರ್ಷ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪುಟ್ಟರಾಜು, ಉಪನ್ಯಾಸಕ ವೃಂದ, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.