ಭಾಗಮಂಡಲ, ಜು. 29: ಚೆಟ್ಟಿಮಾನಿ - ಅಯ್ಯಂಗೇರಿ ನಡುವೆ ಸಂಪರ್ಕ ಕಲ್ಪಿಸುವ ಬಂಡಿಕಡು ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಡಿಕೇರಿ - ಭಾಗಮಂಡಲ ಮುಖ್ಯರಸ್ತೆಯ ಚೆಟ್ಟಿಮಾನಿ ಸಮೀಪ ಪದಕಲ್ಲು ಗ್ರಾಮದಿಂದ ಸಂಪರ್ಕ ರಸ್ತೆಯಾದ ಬಂಡಿಕಡು ರಸ್ತೆ ನಾಪೋಕ್ಲು ಭಾಗಮಂಡಲ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದ್ದು, ಅಯ್ಯಂಗೇರಿ, ಸಣ್ಣಪುಲಿಕೋಟು, ಕೋರಂಗಾಲ ಮತ್ತು ದೊಡ್ಡಪುಲಿಕೋಟು ಗ್ರಾಮಸ್ಥರಿಗೆ ಪ್ರಯೋಜನಕಾರಿಯಾಗಿತ್ತು. ದಿನಕ್ಕೆ ನೂರಕ್ಕೂ ಅಧಿಕ ವಾಹನಗಳ ಸಂಚಾರ ಈ ರಸ್ತೆಯಲ್ಲಿತ್ತು. ಸುಮಾರು 1 ಕಿ.ಮೀ. ಡಾಮರೀಕರಣ ಮಾಡುವ ಉದ್ದೇಶದಿಂದ ರಸ್ತೆಯನ್ನು ಅಗಲೀಕರಣ ಮಾಡಿದ್ದು, ಮೋರಿಯೊಂದರ ನಿರ್ಮಾಣ ಸಂದರ್ಭ ರಸ್ತೆಗೆ ಮಣ್ಣು ಸುರಿದಿದ್ದು ರಸ್ತೆಯಲ್ಲಿ ಹೊಂಡ ಏರ್ಪಟ್ಟು ವಾಹನ ಸಂಚಾರವಿರಲಿ ನಡೆದಾಡಲೂ ಸಾಧ್ಯವಿರದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಶಾಲಾ ವಾಹನಗಳು ಚೆಟ್ಟಿಮಾನಿ, ಚೇರಂಬಾಣೆ, ಮಡಿಕೇರಿ ಹಾಗೂ ಭಾಗಮಂಡಲ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಸುಮಾರು 12 ಕಿ.ಮೀ. ಸುತ್ತಿ ಬಳಸಿ ಸಾಗುವಂತಾಗಿದೆ. ವ್ಯವಸ್ಥಿತವಾಗಿದ್ದ ರಸ್ತೆಯಲ್ಲಿ ನಬಾರ್ಡ್ ವತಿಯಿಂದ ಸುಮಾರು 3 ಕಿ.ಮೀ. ನಲ್ಲಿ 1.5 ಕಿ.ಮೀ. ರಸ್ತೆ ನಿರ್ಮಾಣಗೊಂಡು ಉತ್ತಮವಾಗಿದೆ. ಉಳಿದ ಭಾಗದಲ್ಲಿ ಮೋರಿ ನಿರ್ಮಾಣ ಮಾಡಿದ್ದು, ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇಂಜಿನಿಯರ್ ನನ್ನು ಸಾರ್ವಜನಿಕರು ಸಂಪರ್ಕಿಸಿದಾಗ ಸದ್ಯದಲ್ಲಿಯೇ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಕಳೆದ ಒಂದು ತಿಂಗಳಿನಿಂದ ಉತ್ತರಿಸುತ್ತಿದ್ದು, ಇದೀಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ರಸ್ತೆ ಅಗಲೀಕರಣ ಮಾಡಿದ ಗುತ್ತಿಗೆದಾರರನ್ನು ‘ಶಕ್ತಿ’ ಸಂಪರ್ಕಿಸಿದಾಗ ರಸ್ತೆ ನಿರ್ಮಾಣಕ್ಕೆ ಮಾಡಿದ ಹಣ ಬಿಡುಗಡೆಯಾಗಿಲ್ಲ. ಟೆಂಡರ್ ಪ್ರಕ್ರಿಯೆ ಆಗಿಲ್ಲ. ಇಂಜಿನಿಯರ್ ಹೇಳಿದ ಮಾತ್ರಕ್ಕೆ ನಾನು ರೂ. ನಾಲ್ಕು ಲಕ್ಷದ ಕೆಲಸ ಮಾಡಿದ್ದೇನೆ. ಇನ್ನು ನಾನು ಕೆಲಸ ಮಾಡುವದಿಲ್ಲ ಎಂದು ಗುತ್ತಿಗೆದಾರ ಕಾಸರಗೋಡಿನ ಅಸ್ಲಾಂ ಹೇಳಿದ್ದಾರೆ. ಹಾಗಾದರೆ ಟೆಂಡರ್ ಪ್ರಕ್ರಿಯೆ ಆಗದೆ ಸುಸಜ್ಜಿತವಾಗಿದ್ದ ರಸ್ತೆಯನ್ನು ಅಗಲೀಕರಣ ಮಾಡುವ ಉದ್ದೇಶ ಏನಿತ್ತು? ಈ ಬಗ್ಗೆ ಸಾರ್ವಜನಿಕರು ಗುತ್ತಿಗೆದಾರರನ್ನು ಸಂಪರ್ಕಿಸಿದಾಗ ನನಗೆ ಮೂರು ತಿಂಗಳು ರಸ್ತೆ ಬಂದ್ ಮಾಡುವ ಅಧಿಕಾರ ಇದ್ದು, ಯಾವದೇ ಕೆಲಸ ಮಾಡುವದಿಲ್ಲ. ಇಂಜಿನಿಯರ್ ಹಾಗೂ ರಾಜಕೀಯ ವ್ಯಕ್ತಿಗಳು ಪ್ರಭಾವ ಬೀರಿ ಸಂಪರ್ಕಿಸಿದರೂ ನಾನು ಏನೂ ಮಾಡುವಂತಿಲ್ಲ ಎಂದು ಹೇಳಿದರು. ಈ ಬಗ್ಗೆ ಸ್ಥಳೀಯರು, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೆ ಯಾವದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು, ಶಾಲಾ ವಿದ್ಯಾರ್ಥಿ ಗಳು, ಪ್ರತಿನಿತ್ಯ ಪರದಾಡುವದು ತಪ್ಪಿಲ್ಲ.

-ಕುಯ್ಯಮುಡಿ ಸುನಿಲ್