ಮಡಿಕೇರಿ, ಜು. 29: ಕುಶಾಲನಗರ ಪಟ್ಟಣದ ಸಂತೆಮಾಳ ಬಳಿ ರೂ. 5 ಲಕ್ಷ ಮೌಲ್ಯದ 14 ಕೆ.ಜಿ. ಗಾಂಜಾ ಸೊಪ್ಪನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ 6 ಮಂದಿ ಆರೋಪಿ ಗಳನ್ನು ಬಂಧಿಸುವದರೊಂದಿಗೆ ಗಾಂಜಾ ಸೊಪ್ಪನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಕುಶಾಲನಗರ ಪಟ್ಟಣದ ಸಂತೆಮಾಳ ಬಳಿ ತಾ. 28ರಂದು ಮಾರುತಿ 800 (ಸಿಕೆಸಿ 967) ಕಾರಿನಲ್ಲಿ 7 ದೊಡ್ಡ ಪ್ಯಾಕೆಟ್‍ಗಳನ್ನು ಸುಮಾರು ರೂ. 5 ಲಕ್ಷ ಮೌಲ್ಯದ 14 ಕೆ.ಜಿ. ಗಾಂಜಾ ಸೊಪ್ಪನ್ನು 6 ಮಂದಿ ಆರೋಪಿಗಳು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಿ. ಸಂಪತ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕುಶಾಲನಗರ ಪೊಲೀಸ್ ಠಾಣೆಯ ಪಿಎಸ್‍ಐ ಪಿ. ಜಗದೀಶ್ ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿ ಗಳೊಂದಿಗೆ ಧಾಳಿ ನಡೆಸಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳುವದ ರೊಂದಿಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಗಾಂಜಾ ಸೊಪ್ಪನ್ನು ಆಂಧ್ರ ಪ್ರದೇಶದ ಹಿಂದೂಪುರದಿಂದ ತರಿಸಿಕೊಂಡು ಕುಶಾಲನಗರದಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಹುಣಸೂರು ಪಟ್ಟಣದ ಚಿಕ್ಕಹುಣ ಸೂರುವಿನಲ್ಲಿ ವಾಸವಾಗಿರುವ ಮೀನು ವ್ಯಾಪಾರಿ ಹೆಚ್.ಎಸ್. ಇಸ್ಮಾಯಿಲ್ ಶರೀಫ್ (34), ಹುಣಸೂರು ಪಟ್ಟಣದ ಜ್ಯೋತಿ ನಗರ ನಿವಾಸಿ, ಚಾಲಕ ವೃತ್ತಿಯ ಕೆ. ಮಹೇಶ್, ಹುಣಸೂರು ತಾಲೂಕು ಕೊಯಮತ್ತೂರು ಕಾಲೋನಿ ನಿವಾಸಿ ಕೆ. ರಾಜೇಂದ್ರ ಗೌಡ (61), ಹುಣಸೂರು ತಾಲೂಕು ಭೀಮನಹಳ್ಳಿ ಗ್ರಾಮದ ಸೋಮೇಶ್ (20), ಸುಂಟಿಕೊಪ್ಪ ಅಪ್ಪಾರಂಡ ಬಡಾವಣೆಯ ಈ. ಇರ್ಫಾನ್, ಪಿರಿಯಾಪಟ್ಟಣ ತಾಲೂಕಿನ ಹಾರ್ನಳ್ಳಿ ಗ್ರಾಮದ ಎನ್. ನಾಸೀರ್ ಶರೀಫ್ (23) ಆರೋಪಿಗಳಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ.

(ಮೊದಲ ಪುಟದಿಂದ) ಇಸ್ಮಾಯಿಲ್ ಶರೀಫ್ ಈ ಹಿಂದೆಯೂ ಅನೇಕ ಬಾರಿ ಗಾಂಜಾ ಮಾರಾಟ ಮಾಡಿದ್ದು, ಸುಂಟಿಕೊಪ್ಪದ ಈ. ಇರ್ಫಾನ್ ಕೂಡ ಮಾರಾಟದಲ್ಲಿ ತೊಡಗಿದ್ದನು ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳದ ಎ.ಎಸ್.ಐ. ಗೋಪಾಲ ಹಾಗೂ ಸಿಬ್ಬಂದಿಗಳಾದ ಪಿ.ವಿ. ಸುರೇಶ್, ಸುಧೀರ್ ಕುಮಾರ್, ಮುಸ್ತಾಫ, ಉದಯಕುಮಾರ್, ವಿ. ಪ್ರಕಾಶ್, ಸಂಪತ್ ರೈ, ಚಾಲಕ ಪ್ರವೀಣ್ ಭಾಗವಹಿಸಿದ್ದರು. ಇವರೊಂದಿಗೆ ಕುಶಾಲನಗರ ಠಾಣೆಯ ಎ.ಎಸ್.ಐ. ಗೀತಾ, ಸಿಬ್ಬಂದಿಗಳಾದ ಉಮೇಶ್, ಅನಂತ್ ಕುಮಾರ್, ನಿಶಾ ಸಹಕಾರ ನೀಡಿದರು ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ರೂ. 10000 ನಗದು ಬಹುಮಾನವನ್ನು ಇದೇ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿಗಳು ಘೋಷಿಸಿದರು.