ಕೂಡಿಗೆ, ಜು. 29: ಕೊಡಗು ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ 2017ನೇ ಸಾಲಿನ ಸಭೆ ಸ್ಥಳೀಯ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಸಾಲಿನಲ್ಲಿ ತೀರ್ಮಾನ ಕೈಗೊಂಡ ಬಗ್ಗೆ ಸಭೆಯಲ್ಲಿ ಹಾಜರಿದ್ದ ನಿರ್ದೇಶಕರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು. ಈ ಸಾಲಿನಲ್ಲಿ ಕೊಡಗು ಜಿಲ್ಲಾ ನೇಕಾರರ ಒಕ್ಕೂಟದ ಸಹಯೋಗದಲ್ಲಿ ನೇಕಾರರ ಸಮುದಾಯ ಸಹಕಾರ ಸಂಘ ತೆರೆಯಲು ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳ ಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ಪತ್ರ ವ್ಯವಹಾರಗಳನ್ನು ಈ ಮಾಸದ ಅಂತ್ಯದಲ್ಲಿ ಪೂರ್ಣಗೊಳಿಸುವದರ ಬಗ್ಗೆ ಚರ್ಚಿಸಲಾಯಿತು.

ಇದೇ ಸಂದರ್ಭ ಕುಶಾಲನಗರ ದಲ್ಲಿ ನೇಕಾರರ ಭವನ ನಿರ್ಮಾಣ ಮಾಡಲು ಬೇಕಾದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಸಂಬಂಧಪಟ್ಟ ಜಿಲ್ಲೆಯ ಮೂರು ತಾಲೂಕುಗಳ ಅಧ್ಯಕ್ಷರುಗಳು ಸಲಹೆಗಳನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ನೇಕಾರರ ಒಕ್ಕೂಟದ ನಿರ್ದೇಶಕ ಡಿ.ಕೆ. ತಿಮ್ಮಪ್ಪ ಮಾತನಾಡಿ, ನೇಕಾರ ಸಮುದಾಯ ಒಕ್ಕೂಟದ ವತಿಯಿಂದ ಸಹಕಾರ ಸಂಘ ತೆರೆಯಲು ತೀರ್ಮಾನ ಕೈಗೊಂಡಿರುವದು ಒಕ್ಕೂಟವನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ ಎಂದರು. ಸಭೆಯಲ್ಲಿ ಸೋಮವಾರಪೇಟೆ ತಾಲೂಕು ನೇಕಾರ ಒಕ್ಕೂಟದ ಅಧ್ಯಕ್ಷ ಸತ್ಯೇಂದ್ರ, ವೀರಾಜಪೇಟೆ ತಾಲೂಕು ಅಧ್ಯಕ್ಷ ಪುಟ್ಟರಾಜ್, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್, ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ್, ನಿರ್ದೇಶಕರು ಇದ್ದರು. ಪ್ರಕಾಶ್ ಸ್ವಾಗತಿಸಿ, ಜಿಲ್ಲಾ ನೇಕಾರ ಒಕ್ಕೂಟದ ವಕ್ತಾರ ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.