ಮಡಿಕೇರಿ, ಜು. 29: ಕೊಡಗು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಮಂಗಳೂರು ವಿಶ್ವ ವಿದ್ಯಾನಿಲಯ ಆಡಳಿತಕ್ಕೆ ಒಳಪಡುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಇತ್ತೀಚೆಗೆ ಸುಮಾರು 45 ವಿದ್ಯಾರ್ಥಿನಿಯರಿಗೆ ಉದ್ಯೋಗ ಕೊಡಿಸುವದಾಗಿ ವಂಚಿಸಿ, ಲಕ್ಷ ಗಟ್ಟಲೆ ಹಣ ದೋಚಿರುವ ಪ್ರಕರಣವು ಕಾಲೇಜಿನ ಘನತೆಗೆ ಧಕ್ಕೆ ತರುವಂತಾಗಿದೆ ಎಂದು ಅ.ಭಾ.ವಿ.ಪ. ಖಂಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅ.ಭಾ.ವಿ.ಪ. ರಾಜ್ಯ ಕಾರ್ಯಕಾರಿಣಿ ಸದಸ್ಯ ದರ್ಶನ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಕಾಲೇಜಿನ ಉದ್ಯೋಗ ಮಾರ್ಗದರ್ಶನ ಅಧಿಕಾರಿಯೂ (ಪ್ಲೇಸ್‍ಮೆಂಟ್ ಆಫೀಸರ್) ಆಗಿದ್ದಂತಹ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಗಣೇಶ್ ಶೆಟ್ಟಿ ಹಾಗೂ ಇಂಪನಾ ಇವರುಗಳ ಪೂರ್ವಾಪರ ತಿಳಿಯದೆ ವಿದ್ಯಾರ್ಥಿನಿಯರೊಡನೆ ಸಂಪರ್ಕ ಕಲ್ಪಿಸಿದ್ದು ಏಕೆ? ಸುಮಾರು 2000 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇರುವಂತಹ ಕಾಲೇಜಿನಲ್ಲಿ ಕೇವಲ ವಿದ್ಯಾರ್ಥಿನಿಯರು ಮಾತ್ರ ಇವರ ಉದ್ಯೋಗಕ್ಕೆ ಆಯ್ಕೆ ಆಗಿದ್ದು ಹೇಗೆ? ಎಂದು ಎಬಿವಿಪಿ ಪ್ರಶ್ನಿಸಿದೆ.

ಸರ್ಕಾರದ ಹಾಗೂ ವಿ.ವಿ.ಯ ನಿಯಮಾವಳಿಗಳ ಪ್ರಕಾರ ಯಾವದೇ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುವಂತಿಲ್ಲ. ಹೀಗಿರುವಾಗ ಡಾ. ಕುಮಾರಸ್ವಾಮಿ ವಿದ್ಯಾರ್ಥಿನಿಯರಿಂದ 10,000ದಿಂದ 12,000 ರೂ.ಗಳನ್ನು ಹೇಗೆ ಸಂಗ್ರಹಿಸಿದರು? ಒಬ್ಬ ಜವಾಬ್ದಾರಿಯುತ ಪ್ರಾಧ್ಯಾಪಕರಾಗಿ, ಇವತ್ತಿನ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದ ವಾತಾವರಣದಲ್ಲಿ ಒಂದು ತಿಂಗಳ ಕಾಲ ಗೊತ್ತು ಗುರಿ ಇಲ್ಲದ ಪಿ.ಜಿ.ಯಲ್ಲಿ 45 ವಿದ್ಯಾರ್ಥಿನಿಯರನ್ನು ಹೇಗೆ ಇರಿಸಿದರು? ಉದ್ಯೋಗಕ್ಕಾಗಿ 45 ವಿದ್ಯಾರ್ಥಿನಿಯರ ದೈಹಿಕ ಪರೀಕ್ಷೆ ಮಾಡಿಸುವ ಔಚಿತ್ಯವೇನು? ಈ ಪ್ರಕರಣದ ಹಿಂದೆ ಮಾನವ ಕಳ್ಳ ಸಾಗಾಣಿಕೆಯ ಜಾಲವಿದೆಯೋ ಅಥವಾ ಅಂಗಾಂಗ ಕಳ್ಳತನ ಮಾಡುವವರ ಗುಂಪು ಕಾರ್ಯಾಚರಿಸುತ್ತಿದೆಯೋ? ಎಂಬ ಅನುಮಾನಗಳನ್ನು ಎ.ಬಿ.ವಿ.ಪಿ. ಹೊರಗೆಡವಿದೆ. ವಂಚಿತ ವಿದ್ಯಾರ್ಥಿಗಳು ಕೊಟ್ಟಿರುವ ದೂರಿನಲ್ಲಿ ಡಾ. ಕುಮಾರಸ್ವಾಮಿ ಹೆಸರಿದ್ದು, ಕಳೆದ 3 ದಿನಗಳಿಂದ ಪೊಲೀಸರು ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಹೀಗಿರುವಾಗ ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ಆಡಳಿತ ಮಂಡಳಿ ಇದುವರೆಗೂ ಡಾ. ಕುಮಾರಸ್ವಾಮಿ ಅವರನ್ನು ಉಪನ್ಯಾಸಕ ಹುದ್ದೆಯಿಂದ ವಜಾಗೊಳಿಸದೆ ಇರುವದರ ಬಗ್ಗೆ ರಾಜಕೀಯ ಒತ್ತಡ, ಅಥವಾ ಹಣದ ಪ್ರಭಾವ ಇದೆಯೋ ಎಂದು ಅನುಮಾನ ಹೊರಗೆಡವಿರುವ ಎಬಿವಿಪಿ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಅವರನ್ನು ಈ ಕೂಡಲೇ ವಜಾಗೊಳಿಸಿ, ಮುಂದಿನ ತನಿಖೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಹೇಳಿಕೆಯಲ್ಲಿ ತಿಳಿಸಿದೆ.