*ಗೋಣಿಕೊಪ್ಪಲು, ಜು. 29: ವಿದ್ಯಾರ್ಥಿಗಳಿಗೆ ಪರೀಕ್ಷೆ ಅನಿವಾರ್ಯವಾಗಿ ಬರುವಂತಹದ್ದಲ್ಲ. ಅದು ನಿರೀಕ್ಷಿತವಾದದ್ದು. ಆದ್ದರಿಂದ ತರಗತಿ ಆರಂಭಗೊಂಡ ಮೊದಲ ದಿನದಿಂದಲೇ ಓದುವ ಅಭ್ಯಾಸವಿಟ್ಟುಕೊಳ್ಳಬೇಕು ಎಂದು ಜೆಸಿಐ ತರಬೇತುದಾರ ಎಂ.ಎಂ. ಅಶೋಕ್ ಹೇಳಿದರು.ಪೊನ್ನಂಪೇಟೆ ಗೋಲ್ಡನ್ ಜೇಸಿಐನಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓದುವ ಹವ್ಯಾಸ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರಗತಿಯಲ್ಲಿ ಅಧ್ಯಾಪಕರು ಒಂದು ಗಂಟೆ ಪಾಠ ಮಾಡಿದ್ದುದನ್ನು ವಿದ್ಯಾರ್ಥಿಗಳು ಮನೆಯಲ್ಲಿ ಅರ್ಧ ಗಂಟೆ ಓದುವ ಅಭ್ಯಾಸವಿಟ್ಟುಕೊಳ್ಳಬೇಕು. ಯಾವದೇ ವಿಷಯವನ್ನು ಲಘುವಾಗಿ ಪರಿಗಣಿಸಬಾರದು ಎಂದರು.

ಮನೆಯಲ್ಲಿ ಓದುವ ಕೊಠಡಿಯಲ್ಲಿ ಮನಸ್ಸನ್ನು ಕೆರಳಿಸುವ ಯಾವದೇ ವಸ್ತುವನ್ನು ಇಟ್ಟುಕೊಳ್ಳಬಾರದು. ಆದಷ್ಟು ರಾತ್ರಿವೇಳೆ ಬರೆಯುವ ಅಭ್ಯಾಸವಿಟ್ಟುಕೊಂಡು ಮುಂಜಾನೆ 4 ಗಂಟೆಗೆ ಎದ್ದು ಓದುವ ಕ್ರಮವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೋಲ್ಡನ್ ಜೆಸಿಐ ನಿಕಟಪೂರ್ವ ಅಧ್ಯಕ್ಷ ಪುಳ್ಳಂಗಡ ನಟೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಓದುವ ಮನಸ್ಸು ಮತ್ತು ಏಕಾಗ್ರತೆ ಇರಬೇಕು. ಅಂದಿನ ವಿಷಯಗಳನ್ನು ಅಂದಂದೇ ಓದಿ ಮುಗಿಸಬೇಕು. ಆಲಸ್ಯ ಮತ್ತು ನಿರ್ಲಕ್ಷ್ಯವನ್ನು ದೂರಮಾಡಬೇಕು ಎಂದು ಹೇಳಿದರು.

ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ ಮಾತನಾಡಿದರು. ಜೆಸಿಐ ಅಧ್ಯಕ್ಷ ಪೊನ್ನಿಮಾಡ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಡಾ. ಜೆ. ಸೋಮಣ್ಣ, ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್, ತಿಮ್ಮರಾಜು,ಎಂ.ಪಿ. ರಾಘವೇಂದ್ರ, ಸುಬ್ಬಯ್ಯ, ಬೆಂಡಿಕ್ಟ್ ಫರ್ನಾಂಡೀಸ್ ಹಾಜರಿದ್ದರು.